ಸೆ.5ರಿಂದ ಅಂಗನವಾಡಿಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಕೇಂದ್ರ: ಡಾ.ಎಂ.ಆರ್. ರವಿ

Update: 2017-08-18 10:39 GMT

ಮಂಗಳೂರು, ಆ.18: ಸೆಪ್ಟೆಂಬರ್ 5ರಿಂದ ಅಂಗನಾಡಿಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಣ ಕೇಂದ್ರ ಆರಂಭವಾಗೊಳ್ಳಲಿದೆ ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಂ. ಆರ್. ರವಿ ಹೇಳಿದ್ದಾರೆ.

ಅವರು ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಅಂಗಾಂಗ ದಾನ, ಮಾನಸಿಕ ಆರೋಗ್ಯ, ಕುಷ್ಟರೋಗ ನಿರ್ಮೂಲನೆ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಸುಮಾರು 1,650 ಅಂಗನಾಡಿ ಕೇಂದ್ರಗಳಿವೆ. ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಗ್ರಾಮೀಣ ಪ್ರದೇಶದಲ್ಲಿಯೂ ಸಾಕಾರ ಮಾಡಬೇಕಾದರೆ ಪ್ಲಾಸ್ಟಿಕ್ ಸಮಸ್ಯೆಯನ್ನು ಬಗೆಹರಿಸಲೇಬೇಕು. ಅದಕ್ಕಾಗಿ ಇನ್ನು ಮುಂದೆ ಗ್ರಾಮೀಣ ಪ್ರದೇಶದ ಜನತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಂಗನವಾಡಿಗಳಿಗೆ ಕೊಡಬೇಕು. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಏನೂ ಇಲ್ಲ. ಅಂಗನವಾಡಿಗಳು ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರಗಳಷ್ಟೇ ಆಗಿರುತ್ತವೆ. ಅಲ್ಲಿಂದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯವರು ಕೊಂಡೊಯ್ದು ವಿಲೇವಾರಿ ಮಾಡುತ್ತಾರೆ ಎಂದು ಅವರು ಹೇಳಿದರು. ಶೇ.75ರಷ್ಟು ಕಸ ಮನೆಯಲ್ಲಿಯೇ ಉತ್ಪಾದನೆಯಾಗುತ್ತದೆ. ಹಸಿಕಸವನ್ನು ತ್ಯಾಜ್ಯ ಎಂದು ಪರಿಗಣಿಸದೇ ಅದನ್ನು ಆದಾಯದ ಮೂಲ ಎಂದು ಪರಿಗಣಿಸಬೇಕು. ಅದನ್ನು ಮನೆಯಲ್ಲಿಯೇ ವಿಲೇವಾರಿ ಮಾಡುವ ವಿಧಾನಗಳನ್ನು ಅರಿತುಕೊಂಡರೆ ಸಾಮಾಜಿಕವಾಗಿ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 2,104 ಅಂಗನವಾಡಿ ಕೇಂದ್ರಗಳಿವೆ. ಪ್ರತಿ ಅಂಗನವಾಡಿಯಲ್ಲಿಯೂ 15 ಸರಾಸರಿ 15 ಮಕ್ಕಳಿದ್ದರೆ, ಒಟ್ಟು 30 ಸಾವಿರ ಮಕ್ಕಳೊಡನೆ ಕಾರ್ಯಕರ್ತೆಯರು ವ್ಯವಹರಿಸುತ್ತಾರೆ. ಅವರಲ್ಲಿ ಸ್ವಚ್ಛತೆಯ ಅರಿವನ್ನು ಬೆಳೆಸಬೇಕು ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಮೊಬೈಲ್‌ನಿಂದಾಗಿಯೇ ಕೌಟುಂಬಿಕ ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಮೊಬೈಲ್‌ನ್ನು ನಿಯಂತ್ರಿತವಾಗಿ ಹೇಗೆ ಬಳಸಬೇಕು ಎಂಬುದನ್ನು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿಕೊಡಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್ ವಹಿಸಿದ್ದರು. ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ರಾಜೇಶ್, ಮಾನಸಿಕ ರೋಗ ತಜ್ಞ ಡಾ.ಜಯಂತ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ಸ್ವಾಗತಿಸಿದರು. ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.


ಬಾಲ್ಯ ವಿವಾಹ ಕಾಯ್ದೆ: ವಿವಾಹದಲ್ಲಿ ಭಾಗವಹಿಸಿದವರಿಗೂ ಶಿಕ್ಷೆಯಾದೀತು!

ಬಾಲ್ಯವಿವಾಹ ತಡೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ವಿವಾಹದಲ್ಲಿ ಭಾಗವಹಿಸಿದ, ಸೌಕರ್ಯಗಳನ್ನು ಕಲ್ಪಿಸಿದ ಹಾಗೂ ಮದುವೆಯಲ್ಲಿ ಭಾಗವಹಿಸಿದವರಿಗೂ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಕಾರ್ಯಕ್ರಮದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News