ಎಲ್ಲವನ್ನೂ-ಎಲ್ಲರನ್ನೂ ಪ್ರೀತಿಸುವುದು ಭಾರತೀಯ ಸಂಸ್ಕೃತಿ : ಗಿರೀಶ್ ಭಟ್

Update: 2017-08-18 18:20 GMT

ಪುತ್ತೂರು, ಆ. 18: ಹಿರಿಯರೆಲ್ಲ ನಮ್ಮ ನಾಡನ್ನು ಭಾಷೆಯನ್ನು ಹಾಗೂ ಸಂಸ್ಕೃತಿಯನ್ನು ಪ್ರೀತಿಸಿ ಎಂದು ಕರೆ ನೀಡಿದರೇ ಹೊರತು ಭಾಷೆ, ನಾಡನ್ನು ದ್ವೇಷಿಸಿ ಎನ್ನಲಿಲ್ಲ. ಯಾವುದನ್ನೂ ದ್ವೇಷಿಸದೇ ನಮ್ಮ ನಾಡನ್ನು ಪ್ರೀತಿಸುವ ಗುಣ ಭಾರತೀಯರ ವಿಶೇಷತೆಯಾಗಿದೆ ಎಂದು ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ ಅಜಕ್ಕಳ ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಬಂಟ್ವಾಳದ ಚಿಂತನ ಬಯಲು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಕಾಲೇಜಿನ ಕನ್ನಡ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ಅವರ ‘ಕನ್ನಡವು ಭಾರತವೂ ಜಗವೆಲ್ಲವೂ ಒಂದೇ’ ಕೃತಿಯನ್ನು ಲೋಕಾರ್ಪಣೆಗೈದು ಮಾತನಾಡಿದರು.

ದೇಶ ಪ್ರೇಮವೆಂದರೆ ಕೇವಲ ಭೂಪಟ ಪ್ರೇಮವಲ್ಲ. ದೇಶದ ಸಂಸ್ಕೃತಿ, ಸಂಪತ್ತನ್ನು ಪ್ರೀತಿಸಬೇಕು, ಅಂತೆಯೆ ಉಳಿಸಿ ಬೆಳೆಸಬೇಕು. ನಮ್ಮ ದೇಶದಷ್ಟು ವೈವಿಧ್ಯತೆ ಬೇರೆ ದೇಶಗಳಲ್ಲಿ ಕಾಣಸಿಗುವುದಿಲ್ಲ. ಕವಿಗಳ ನುಡಿ ಏಕೀಕರಣದ ಸಂದರ್ಭದಲ್ಲಿ ಜನರ ಸ್ವ ಪ್ರಜ್ಞೆಯನ್ನು ಜಾಗೃತಗೊಳಿಸಿದೆ. ಸಾಂಸ್ಕ್ರತಿಕವಾಗಿ, ಚಾರಿತ್ರಿಕವಾಗಿ ಬ್ರಿಟಿಷರು ನಡೆಸುತ್ತಿದ್ದ ದಬ್ಬಾಳಿಕೆಯನ್ನು ಸಾಹಿತ್ಯ ವಿರೋಧಿಸಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಮ್. ಕೃಷ್ಣ ಭಟ್ ಅವರು ಮಾತನಾಡಿ, ವಸುದೈವ ಕುಟುಂಬಕಂ ಎಂಬುದು ಒಂದು ಅಪ್ಪಟ ಭಾರತೀಯ ಕಲ್ಪನೆ. ಜಗತ್ತನ್ನು ಒಂದು ಕುಟುಂಬದಂತೆ ಕಾಣುವುದು ಕೇವಲ ಭಾರತೀಯರಿಂದ ಮಾತ್ರ ಸಾಧ್ಯ. ವಿಶ್ವ ಗ್ರಾಮದ ಪರಿಕಲ್ಪನೆ ಜಗತ್ತನ್ನು ಹತ್ತಿರ ತಂದಿದೆ. ಆದರೆ ಮನಸ್ಸುಗಳನ್ನು, ಮಾನವ ಸಂಬಂಧಗಳನ್ನು ದೂರ ಮಾಡಿದೆ ಎಂದರು.

ಗ್ರಾಮವೇ ವಿಶ್ವ ಎಂಬ ಗಾಂಧೀಜಿಯವರ ಪರಿಕಲ್ಪನೆ ಭೌತಿಕವಾಗಿ ದೂರವಿದ್ದರೂ ಮನುಷ್ಯ ಸಂಬಂಧಗಳನ್ನು ಹತ್ತಿರ ಎಂಬಂತೆ ತೋರಿಸುತ್ತದೆ. ಹಿಂದೆ ಸಾಹಿತ್ಯ ಎಂಬುದು ಒಗ್ಗಟ್ಟು, ಒಟ್ಟು ಸೇರಿಸುವಿಕೆಯ ಪ್ರತೀಕವಾದರೆ ರಾಜಕೀಯ ಒಡೆದು ಆಳುವ ವಿಚಾರ ಎಂಬ ಪ್ರತೀತಿ ಇತ್ತು. ಆದರೆ ಈಗ ರಾಜಕೀಯದಲ್ಲಿ ಸಾಹಿತ್ಯದ ಪ್ರಭಾವ ಹಾಗೆಯೆ ಸಾಹಿತ್ಯದಲ್ಲಿ ರಾಜಕೀಯ ಕಂಡುಬರುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಎಮ್.ಟಿ. ಜಯರಾಮ್ ಭಟ್, ಪ್ರಾಂಶುಪಾಲ ಪೀಟರ್ ವಿಲ್ಸನ್ ಪ್ರಭಾಕರ್, ಶೈಕ್ಷಣಿಕ ನಿರ್ದೇಶಕ ವಿಘ್ನೇಶ್ವರ ವರ್ಮುಡಿ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಧರ್ ಹೆಚ್.ಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿ ಕತೃ ಕನ್ನಡ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ವಂದಿಸಿದರು. ಉಪನ್ಯಾಸಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News