ಟಿಕೆಟ್ ನೀಡದ ಬಸ್ ಮಾಲಕರಿಗೆ ಶೋಕಾಸ್ ನೋಟಿಸ್

Update: 2017-08-18 18:36 GMT

ಮಂಗಳೂರು,ಆ. 18: ಬಸ್ ಪ್ರಯಾಣಿಕರಿಗೆ ಟಿಕೆಟ್ ನೀಡುವುದು ಕಡ್ಡಾಯ. ಟಿಕೆಟ್ ನೀಡದ ಬಸ್‌ಗಳ ಮಾಲಕರಿಗೆ ಸಂಬಂಧ ಪಟ್ಟ ಬಸ್ಸಿನ ಪರವಾನಿಗೆ ಯನ್ನು ಯಾಕೆ ಅಮಾನತು ಮಾಡಬಾರದೆಂದು ಕಾರಣ ಕೇಳಿ ಸಾರಿಗೆ ಇಲಾಖೆಯ ಮೂಲಕ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿದರು.

ಮಂಗಳೂರು ಪೊಲೀಸ್ ಆಯುಕ್ತಾಲದಲ್ಲಿ ಶುಕ್ರವಾರ ನಡೆದ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕೆಲವು ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್ ನೀಡುತ್ತಿಲ್ಲ ಎಂದು ಪ್ರಯಾಣಿಕರ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಬಸ್‌ಗಳಲ್ಲಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಟಿಕೆಟ್ ನೀಡುವಂತೆ ಈ ಹಿಂದೆ ಹಲವು ಬಾರಿ ಆರ್‌ಟಿಎ ಸಭೆ ಮತ್ತು ಫೋನ್ ಇನ್ ಕಾರ್ಯಕ್ರಮಗಳಲ್ಲಿ ಬಸ್ ಮಾಲಕರ ಸಂಘಟನೆಗಳಿಗೆ ಸೂಚಿಸಲಾಗಿದೆ. ಹಾಗಿದ್ದರೂ ಕೆಲವು ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್ ನೀಡದಿರುವ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಇನ್ನು ಮುಂದೆ ಬಸ್ ಪರವಾನಿಗೆಯನ್ನು ಅಮಾನತು ಮಾಡುವಂತಹ ಕಠಿಣ ಕ್ರಮ ಜರಗಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಹಾಜರಿದ್ದ ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಚೇತನ್ ಪ್ರತಿಕ್ರಿಯಿಸಿ ಪರವಾನಿಗೆ ಅಮಾನತು ಮಾಡುವ ಮೊದಲು ಸಾರ್ವಜನಿಕರಿಂದ ಬರುವ ದೂರುಗಳ ನೈಜತೆಯನ್ನು ಪರಿಶೀಲಿಸಬೇಕು. ಬಸ್ ಮಾಲಕರ ಅಥವಾ ಬಸ್ ಸಿಬಂದಿ ಮೇಲೆ ದ್ವೇಷ ಇರುವ ಕೆಲವರು ದ್ವೇಷ ಸಾಧನೆಗಾಗಿ ದೂರು ನೀಡುವ ಸಾಧ್ಯತೆ ಇದೆ. ಆದ್ದರಿಂದ ದೂರುಗಳ ಸಾಚಾತನವನ್ನು ಕೂಲಂಕಷವಾಗಿ ಪರಿಶೀಲಿಸಿ ಬಳಿಕ ಕ್ರಮ ಜರಗಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು ಮೊದಲು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು ಎಂದರು.

ಸುರತ್ಕಲ್ ಸಮೀಪದ ಕಾಟಿಪಳ್ಳ, ಕೃಷ್ಣಾಪುರ, ಕಾನ, ಬಾಳ ಪ್ರದೇಶಗಳಲ್ಲಿ ಕೆಲವು ಆಟೊ ರಿಕ್ಷಾ ಚಾಲಕರು ಅಧಿಕ ಬಾಡಿಗೆ ದರವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ನಿಗದಿತ ದರಕ್ಕಿಂತ ಹೆಚ್ಚು ಬಾಡಿಗೆ ದರಕ್ಕೆ ಒತ್ತಾಯಿಸಿದರೆ ರಿಕ್ಷಾದ ನೋಂದಣಿ ಸಂಖ್ಯೆ ಸಮೇತ ದೂರು ನೀಡುವಂತೆ ಆಯುಕ್ತರು ಸಲಹೆ ಮಾಡಿದರು. ಹೆದ್ದಾರಿಗಳಲ್ಲಿಯೂ ಝೀಬ್ರಾ ಕ್ರಾಸ್ ಹಾಕಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಹೆದ್ದಾರಿಗಳಲ್ಲಿ ಝೀಬ್ರಾ ಕ್ರಾಸ್ ಹಾಕಲು ಅವಕಾಶವಿಲ್ಲ. ಆದರೆ ನಿಧಾನವಾಗಿ ವಾಹನ ಚಲಾಯಿಸುವಂತೆ ನಾಮಲಕಗಳನ್ನು ಅಳವಡಿಸಲಾಗುವುದು ಎಂದರು.

ಹಂಪನಕಟ್ಟೆಯಲ್ಲಿ ಅರಳಿ ಮರದ ರೆಂಬೆಗಳು ವಿದ್ಯುತ್ ತಂತಿಗೆ ತಗುಲಿ ಅಪಾಯಕಾರಿ ಪರಿಸ್ಥಿತಿ ಇದೆ ಎಂಬ ದೂರಿಗೆ ಸ್ಪಂದಿಸಿದ ಆಯುಕ್ತರು ಈ ಬಗ್ಗೆ ಮೆಸ್ಕಾಂ ಮತ್ತು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿ ವಿದ್ಯುತ್ ತಂತಿಗೆ ಸ್ಪರ್ಶಿಸುವ ರೆಂಬೆಗಳನ್ನು ಕಡಿಯಲು ಸೂಚಿಸಲಾಗುವುದು ಎಂದರು.
ಸುರತ್ಕಲ್ ಕಾನ-ಎಂಆರ್‌ಪಿಎಲ್ ಕಾರ್ಗೊಗೇಟ್‌ವರೆಗಿನ ರಸ್ತೆಯಲ್ಲಿ ಲಾರಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೊರಗಿನಿಂದ ಕೆಲವರು ಬಂದು ರೋಗಿಗಳಿಗೆ ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ದೂರಿದರು. ಈ ಬಗ್ಗೆ ಸಿ.ಸಿ. ಕ್ಯಾಮರಾ ಹಾಕಿಸಿ ಅದರಲ್ಲಿ ದಾಖಲಾಗುವ ದೃಷ್ಯಾವಳಿಯನ್ನು ಪೊಲೀಸರಿಗೆ ಒಪ್ಪಿಸುವಂತೆ ಆಯುಕ್ತ ಟಿ.ಆರ್. ಸುರೇಶ್ ಸಲಹೆ ನೀಡಿದರು.

ಆಸ್ಪತ್ರೆಯಲ್ಲಿ ಸಿ.ಸಿ. ಕ್ಯಾಮರಾವಿದ್ದರೂ ಕೂಡ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ಹೇಳಿದರು. ಈ ಬಗ್ಗೆ ತನಗೆ ಲಿಖಿತವಾಗಿ ದೂರುಗಳನ್ನು ಸಲ್ಲಿಸುವಂತೆ ಆಯಕ್ತರು ಸಲಹೆ ಮಾಡಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿಪಿ ಹನುಮಂತರಾಯ, ಸಂಚಾರ ವಿಭಾಗದ ಎಸಿಪಿ ತಿಲಕ್ ಚಂದ್ರ, ಸಿಸಿಬಿ ಎಸಿಪಿ ವೆಲೆಂಟೈನ್ ಡಿಸೋಜ, ಸಿಸಿಆರ್‌ಬಿ ಎಎಸ್ಸೈಗಳಾದ ಯೂಸುಫ್ ಮತ್ತು ಯುವರಾಜ್ ಅವರು ಉಪಸ್ಥಿತರಿದ್ದರು

ಸಾರ್ವಜನಿಕರಿಂದ ಬಂದ ಮತ್ತಷ್ಟು ದೂರುಗಳು

ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯ ಬದಿ ಹೂವಿನ ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ.
ಕೊಟ್ಟಾರ ಚೌಕಿಯಲ್ಲಿ ಸರ್ವೀಸ್ ರೋಡ್‌ನಲ್ಲಿ ಘನ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಸಂಚಾರಕ್ಕೆ ತಡೆ ಉಂಟು ಮಾಡಲಾಗುತ್ತಿದೆ.

ಕುದ್ರೋಳಿ, ಅಳಕೆ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಕರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ.

ಕೊಟ್ಟಾರ ಕ್ರಾಸ್ ರಸ್ತೆಯಲ್ಲಿ ಬೀದಿ ವ್ಯಾಪಾರ ನಡೆಯುತ್ತಿದ್ದು, ಅದನ್ನು ತೆರವುಗೊಳಿಸಬೇಕು.

ಮಂಗಳಾದೇವಿ ಕಡೆಗೆ ಹೋಗುವ ಬಸ್‌ಗಳು ನಿಗದಿತ ಮಾರ್ಗದಲ್ಲಿ ಚಲಿಸದೆ ಮಾರ್ಗ ಬದಲಾಯಿಸಿ ಸಂಚರಿಸುತ್ತಿವೆ.

ಶಾದಿ ಮಹಲ್ ಬಳಿ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯ ಎದುರು ರಸ್ತೆಯ ಎರಡೂ ಕಡೆ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ಇತರ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.

ಕೆಲವು ಸಿಟಿ ಬಸ್‌ಗಳಲ್ಲಿ ಬಸ್ಸಿನ ರಿಜಿಸ್ಟ್ರೇಶನ್ ನಂಬರ್ ಮತ್ತು ಟಿಕೆಟ್‌ನಲ್ಲಿ ನಮೂದಿಸಿರುವ ನಂಬರ್ ಬೇರೆ ಬೇರೆ ಇರುತ್ತದೆ.
ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಬಸ್‌ಗಳನ್ನು ನಿಗದಿತ ತಾಣದಲ್ಲಿ ನಿಲ್ಲಿಸುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News