ಎಂಜಿಎಂ ಕಾಲೇಜಿನಲ್ಲಿ ‘ಕು.ಶಿ.ಸಂಸ್ಮರಣೆ’ ಕಾರ್ಯಕ್ರಮ

Update: 2017-08-19 17:35 GMT

ಉಡುಪಿ, ಆ.19: ಜಾಗತಿಕ ಮಟ್ಟದಲ್ಲಿ ಉಡುಪಿಯನ್ನು ಜಾನಪದ ದಾಖಲಾತಿ ಹಾಗೂ ಅಧ್ಯಯನ ಕೇಂದ್ರವಾಗಿ ಕಟ್ಟಿ ಬೆಳೆಸಿದ ಸಂಪೂರ್ಣ ಶ್ರೇಯಸ್ಸು ಕು.ಶಿ.ಹರಿದಾಸ ಭಟ್ಟರಿಗೆ ಸಲ್ಲುತ್ತದೆ ಎಂದು ನಾಡಿನ ಖ್ಯಾತ ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ವಿವಿಯ ಮಾಜಿ ಕುಲಪತಿ ಡಾ.ಚಿನ್ನಪ್ಪ ಗೌಡ ಹೇಳಿದ್ದಾರೆ.

ಮಣಿಪಾಲ ವಿವಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕಾಲೇಜಿನ ಮಾಜಿ ಪ್ರಾಂಶುಪಾಲ, ಸಾಹಿತಿ, ಸಂಸ್ಕೃತಿ ಚಿಂತಕ, ಸಂಘಟಕ ಪ್ರೊ.ಕು.ಶಿ.ಹರಿದಾಸ ಭಟ್ಟ ನೆನಪಿನ ‘ಕು.ಶಿ.ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಲೋಕಮಿತ್ರ ಕು.ಶಿ. ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.

30-40 ವರ್ಷಗಳಲ್ಲಿ ಉಡುಪಿಯನ್ನು ಹಾಗೂ ಎಂಜಿಎಂ ಕಾಲೇಜನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ನಾಡಿನಲ್ಲಿ ಗುರುತಿಸುವಂತೆ ಮಾಡುವ ಜೊತೆಗೆ ಜಾನಪದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲಬೇಕು ಎಂದರು.

ಕು.ಶಿ. ಅವರ ಜಗತ್ತು ಕೇಂದ್ರೀಕೃತವಾಗಿದ್ದುದ್ದು ಎಂಜಿಎಂ ಕಾಲೇಜಿನ ಆವರಣದಲ್ಲಿ. ವ್ಯಕ್ತಿಯೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದರೂ, ಆತನ ಬೇರುಗಳು ತನ್ನ ಹುಟ್ಟು ನೆಲದಲ್ಲಿ ಬೇರೂರುವಂತೆ ನೋಡಿಕೊಳ್ಳಬೇಕು ಎಂದು ಅವರು ನಂಬಿದ್ದರು. ಭಾರತದಲ್ಲಿ ಜಾನಪದ ಅಧ್ಯಯನಕ್ಕೆ ಉಡುಪಿಯನ್ನು ಅತ್ಯುನ್ನತ ಕೇಂದ್ರವಾಗಿ ರೂಪಿಸಿ, ಬೆಳೆಸಿದ್ದೇ ಕು.ಶಿ.ಯವರು ಎಂದು ಡಾ.ಚಿನ್ನಪ್ಪ ಗೌಡ ನುಡಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ತುಳು ನಿಘಂಟುಗಳ ಕು.ಶಿ. ಹರಿದಾಸ ಭಟ್ಟರ ಅವರ ಮೂರು ಮಹತ್ವದ ಸಾಧನೆಗಳಾಗಿವೆ ಎಂದು ಬಣ್ಣಿಸಿದ ಡಾ.ಗೌಡ, ಸಿರಿ ಪಾಡ್ಡನಗಳ ಕುರಿತು ಮುಂದೆ ನೂರಾರು ವರ್ಷಗಳ ಕಾಲ ಅಧ್ಯಯನ, ಸಂಶೋಧನೆ ನಡೆಸುವಷ್ಟು ಸಾಮಗ್ರಿಗಳನ್ನು ಅವರ ನೇತೃತ್ವದಲ್ಲಿ ಸಂಗ್ರಹಿಸಲಾಗಿದೆ ಎಂದರು.

ಸಂಗ್ರಹಣೆ, ಸಂರಕ್ಷಣೆ, ಪ್ರಸಾರ ಮತ್ತು ಪ್ರಕಟಣೆಯನ್ನು ಸಮರ್ಪಕವಾಗಿ ನೋಡಿಕೊಂಡ ಅವರು, ಉಡುಪಿಯಲ್ಲಿ ಕಟ್ಟುವ ಕೆಲಸ ಮಾಡಿದ್ದಾರೆ. ಅದು ವಿದ್ಯಾಸಂಸ್ಥೆಯೇ ಆಗಿರಬಹುದು ಅಥವಾ ಸಂಸ್ಕೃತಿ, ಜಾನಪದ, ರಂಗಕಲೆಗಳೇ ಇರಬಹುದು. ತಮ್ಮ ಜೀವನದ ಬಹುಸಮಯವನ್ನು ಅವರು ಈ ಕಾರ್ಯಕ್ಕೆ ಮೀಸಲಿರಿಸಿದರು ಎಂದು ಡಾ.ಚಿನ್ನಪ್ಪ ಗೌಡ ಹೇಳಿದರು.

ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಶಾಂತಾರಾಮ್‌ರನ್ನು ಆವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್, ಕು.ಶಿ.ಹರಿದಾಸ ಭಟ್ಟರ ಪುತ್ರ ಜಯದೇವ ಭಟ್ ಉಪಸ್ಥಿತರಿದ್ದರು.

ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಸಹಸಂಯೋಜಕ ಡಾ.ಅಶೋಕ್ ಆಳ್ವ ವಂದಿಸಿದರು. ಪತ್ರಕರ್ತ ಪ್ರಥ್ವಿರಾಜ್ ಕವತ್ತಾರು ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ವತಿಯಿಂದ ನಿರ್ಮಿಸಲಾದ ಕು.ಶಿ. ಕುರಿತ ಸಾಕ್ಷ ಚಿತ್ರವನ್ನು ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News