ಶಸ್ತ್ರಚಿಕಿತ್ಸೆಗಾಗಿ ಪೇಜಾವರ ಶ್ರೀ ಮಣಿಪಾಲ ಆಸ್ಪತ್ರೆಗೆ

Update: 2017-08-20 05:24 GMT

ಉಡುಪಿ, ಆ.20: ಕಳೆದೊಂದು ವರ್ಷದಿಂದ ಬಾಧಿಸುತ್ತಿರುವ ಹರ್ನಿಯಾ ಸಮಸ್ಯೆಯ ಚಿಕಿತ್ಸೆಗಾಗಿ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಇಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ಪೇಜಾವಶ್ರೀಯವರ ಆರೋಗ್ಯಕ್ಕಾಗಿ ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಹರ್ನಿಯಾ ನೋವನ್ನು ಹೊರತುಪಡಿಸಿದರೆ ಲವಲವಿಕೆಯಿಂದ ಇರುವ ಪೇಜಾವರ ಶ್ರೀ ಇಂದು ಬೆಳಗ್ಗೆ ದೈನಂದಿನ ಪೂಜಾ ಕಾರ್ಯಗಳನ್ನು ನೆರವೇರಿಸಿದ ಬಳಿಕ ಕಾರಿನಲ್ಲಿ ಆಸ್ಪತ್ರೆಗೆ ತೆರಳಿದರು. ಅಲ್ಲಿ ಅವರು ಹರ್ನಿಯಾ ನೋವಿಗೆ ಸಂಬಂಧಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಆರೋಗ್ಯದ ತುರ್ತು ವಿಷಯವಾದ್ದರಿಂದ, ಅಷ್ಟಮಠಗಳ ಉಳಿದ ಸ್ವಾಮೀಜಿಗಳ ಒತ್ತಾಯದಿಂದ ಪೇಜಾವರಶ್ರೀ ಮಠದಿಂದ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಶ್ರೀಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವೇರಿದ ಬಳಿಕ ಸ್ವಾಮೀಜಿ, ಎರಡು ವರ್ಷಗಳ ಕಾಲ ಮಠದ ಪರಿಸರ ಬಿಟ್ಟು ಹೊರಗೆ ಕಾಲಿಡುವಂತಿಲ್ಲ.

ಮುಸ್ಲಿಮರಿಂದ ಪ್ರಾರ್ಥನೆ
ಪೇಜಾವರಶ್ರೀಯವರ ಶೀಘ್ರ ಚೇತರಿಕೆ ಹಾಗೂ ಆರೋಗ್ಯಕ್ಕಾಗಿ ಕೆಎಂಸಿ ಆಸ್ಪತ್ರೆಯ ವಠಾರದಲ್ಲಿ ಅನ್ಸಾರ್ ಅಹ್ಮದ್ ನೇತೃತ್ವದಲ್ಲಿ ಮುಸ್ಲಿಮರು ಪ್ರಾರ್ಥನೆ ನಡೆಸಿದರು. ಈ ವೇಳೆ ಹಾಜಿ ಅಬೂಬಕರ್ ಪರ್ಕಳ, ಆರಿಫ್ ದೊಡ್ಡಣಗುಡ್ಡೆ ಮತ್ತಿತರರು ಭಾಗಿಯಾಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News