ಭ್ರಷ್ಟಾಚಾರ ಆರೋಪ ಹೊತ್ತ ನಾಯಕರ ರಕ್ಷಣೆಯಲ್ಲಿ ಬಿಜೆಪಿಗರು: ಐವನ್ ಡಿಸೋಜ ಟೀಕೆ

Update: 2017-08-20 13:25 GMT

ಮಂಗಳೂರು, ಅ.20: ಜನರ ಪರವಾಗಿ ಹೋರಾಟ ಮಾಡಲು ಮನಸ್ಸಿಲ್ಲದ ಬಿಜೆಪಿ ಪಕ್ಷದ ಮುಖಂಡರು ಮಾಜಿ ಮುಖ್ಯಮಂತ್ರಿ ಹಾಗು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ವಿರುದ್ಧ ಎಸಿಬಿ ದಾಖಲಿಸಿರುವ ಪ್ರಕರಣವನ್ನು ರಾಜಕೀಯ ಪ್ರೇರಿತ ಎನ್ನುತ್ತಾ ಭ್ರಷ್ಟಾಚಾರದ ಆರೋಪ ಹೊತ್ತ ನಾಯಕರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಟೀಕಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವರಾಮ ಕಾರಂತ ಲೇಔಟ್‌ನಲ್ಲಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿ ಎಸಿಬಿ ಪ್ರಕರಣ ದಾಖಲಿಸಿದೆ. ಸ್ವಯಂ ಹಿತಾಸಕ್ತಿಯಿಂದ ಡಿನೋಟಿಫಿಕೇಶನ್‌ಗೆ ಮುಂದಾದ ಯಡಿಯೂರಪ್ಪಅವರ ನಿರ್ಧಾರ ಜಾರಿಯಾಗಿದ್ದರೆ ಸರಕಾರದ ಬೊಕ್ಕಸಕ್ಕೆ 2 ಸಾವಿರ ಕೋಟಿ ರೂ. ನಷ್ಟ ಆಗುತ್ತಿತ್ತು. ಈ ನಿಟ್ಟಿನಲ್ಲಿ ದಾಖಲಾದ ಪ್ರಕರಣದಲ್ಲಿ ಯಡಿಯೂರಪ್ಪಒಂದನೇ ಹಾಗೂ ಬಸವರಾಜೇಂದ್ರನ್ ಎರಡನೇ ಆರೋಪಿ ಆಗಿದ್ದಾರೆ. ಇದು ಕಾನೂನು ರೀತಿಯಲ್ಲಿ ನಡೆಯುವ ಪ್ರಕ್ರಿಯೆಯೇ ಹೊರತು ರಾಜಕೀಯ ಪ್ರೇರಿತ ಅಲ್ಲ ಎಂದರು.

ಕಾಂಗ್ರೆಸ್ ಪಕ್ಷ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಯಾವುದೇ ದ್ವೇಷ ಸಾಧನೆ ಮಾಡಲು ಹೊರಟಿಲ್ಲ. ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಿರಂತರ ಕೆಲಸ ಮಾಡುತ್ತಾ ಬಂದಿದೆ. ಆದರೆ ಬಿಜೆಪಿಯವರಿಗೆ ಹೋರಾಟ ಮಾಡಲು ಯಾವುದೇ ಜನಪರ ವಿಷಯಗಳಿಲ್ಲ. ಅದಕ್ಕಾಗಿ ಇಂತಹ ಪ್ರಕರಣವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.

ತಮ್ಮ ಪಕ್ಷದ ನಾಯಕರ ವಿರುದ್ಧ ಆರೋಪ ಕೇಳಿ ಬಂದಾಗಲೆಲ್ಲಾ ಅದರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ವರ್ಗಾಯಿಸಲು ಯತ್ನಿಸುತ್ತಾರೆ. ಸತ್ಯ ಏನು ಎಂದು ಜನರಿಗೆ ಚೆನ್ನಾಗಿ ಗೊತ್ತು ಎಂದು ಐವನ್ ಡಿಸೋಜ ನುಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಫವಾಝ್, ಕಿರಣ್ ಬುಡ್ಲೆಗುತ್ತು, ಶಾಹುಲ್ ಹಮೀದ್, ಭಾಸ್ಕರ ರಾವ್, ಚಂದ್ರಶೇಖರ ಗಟ್ಟಿ, ಯೂಸುಫ್ ಖಾದರ್, ಹುಸೇನ್ ಕೂಳೂರು, ಯಶವಂತ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News