ಮಹಿಳೆಯ ಕತ್ತಿನಿಂದ ಸರ ಕಸಿದ ಪ್ರಕರಣ: ಆರೋಪಿ ಸೆರೆ

Update: 2017-08-21 17:06 GMT

ಮಂಗಳೂರು, ಆ. 21: ಮೂರು ವರ್ಷದ ಹಿಂದೆ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಜಾಲ್ ಜಲ್ಲಿಗುಡ್ಡೆಯ ರಿಝ್ವೆನ್ ಯಾನೆ ಮುಹಮ್ಮದ್ ರಿಝ್ವೆನ್‌ನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಆರೋಪಿಗೆ ನ್ಯಾಯಾಂಗ ಸೆರೆ ವಿಧಿಸಲಾಗಿದೆ. 2014ರಲ್ಲಿ ಕಂಕನಾಡಿ ಸಮೀಪದ ನಾಗುರಿ ಬಳಿ ಮಾಲತಿ ಎಂಬವರ ಕುತ್ತಿಗೆಯಿಂದ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದೊಯ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನ್ನು ಪೊಲೀಸರು ಬಂಧಿಸಿದ್ದರೂ ಕೂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಘಟನೆಯ ಸಂದರ್ಭ ಈತ ಬಜಾಲ್‌ನಲ್ಲಿ ವಾಸವಾಗಿದ್ದು, ಬಳಿಕ ಅಲ್ಲಿಂದ ತನ್ನ ವಾಸ್ತವ್ಯ ಬದಲಾಯಿಸಿದ್ದ. ಆರೋಪಿಯು ವಳಚ್ಚಿಲ್ ಸಮೀಪದ ಅಡ್ಯಾರ್ ಪದವಿನಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ರವಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣೆಯ ಎಸ್ಸೈ ವೆಂಕಟೇಶ್, ಎಎಸ್ಸೈ ಚಂದ್ರಶೇಖರ ಆಚಾರ್, ಸಿಬ್ಬಂದಿ ಸದಾಶಿವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯ ಮೇಲೆ 9 ವಿವಿಧ ಪ್ರಕರಣಗಳು ದಾಖಲಾಗಿದ್ದು, ಐದು ಪ್ರಕರಣಗಳಲ್ಲಿ ದೋಷಮುಕ್ತಿಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News