ಉಳ್ಳಾಲ: ಮದ್ರಸಗಳಲ್ಲಿ ‘ಸ್ಮಾರ್ಟ್ ಕ್ಲಾಸ್’ಗೆ ಚಾಲನೆ

Update: 2017-08-23 08:00 GMT

ಮಂಗಳೂರು, ಆ.23: ಆಧುನಿತೆಗೆ ತಕ್ಕಂತೆ ಬದಲಾವಣೆಗಳೂ ಅಗತ್ಯ, ಶಾಲೆಯಲ್ಲಿ ನೀಡುವ ಶಿಕ್ಷಣದಲ್ಲಿ ಬದಲಾವಣೆ ಕಾಣುತ್ತಿದ್ದು ಅದೇ ಮಾದರಿಯ ಶಿಕ್ಷಣ ಮದ್ರಸ ಮಕ್ಕಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಮದ್ರಸಗಳಲ್ಲೂ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುತ್ತಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದರು. ಕೇಂದ್ರ ಜುಮಾ ಮಸೀದಿಯ ದ್ಸಿಕ್ರ್ ಸಭಾಂಗಣದಲ್ಲಿ ಮದ್ರಸಗಳಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಧಾರ್ಮಿಕ ಶಿಕ್ಷಣ ಬಲಗೊಂಡರೆ ಧರ್ಮವೂ ಬಲಗೊಳ್ಳುತ್ತದೆ, ಇಂದು ಕುರ್‌ಆನ್‌ಗಳು ಭಾಷಾಂತರಗೊಂಡ ಕಾರಣ ವಿದೇಶಗಳಲ್ಲಿ ಇಸ್ಲಾಂ ಸ್ವೀಕರಿಸುವವ ಪ್ರಮಾಣ ಹೆಚ್ಚಾಗಿದೆ. ನಮ್ಮಲ್ಲಿನ ವೈಮನಸ್ಸಿನಿಂದಾಗಿ ಇಸ್ಲಾಮಿಕ್ ಕಾನೂನುಗಳು ಕೈತಪ್ಪುತ್ತಿವೆ. ಕ್ಷುಲ್ಲಕ ವಿಚಾರಗಳಲ್ಲಿ ಪರಸ್ಪಹೊಡೆದಾಡುವ ಬದಲು ಒಗ್ಗಟ್ಟಿನಿಂದ ಸಮಸ್ಯೆಗಳನ್ನು ಎದುರಿಸಬೇಕಿದೆ. ಬಡಮಕ್ಕಳಿಗೆ ಮದ್ರಸಗಳಲ್ಲಿ ಆಧುನಿಕ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದ್ದು, ಮುಂದೆ ದರ್ಗಾ ಅಧೀನದ ಎಲ್ಲ ಮದ್ರಸಗಳಿಗೆ ಈ ಯೋಜನೆ ವಿಸ್ತರಿಸಲಾಗುವುದು ಎಂದರು.

ಮುಫತ್ತಿಸ್ ಸುಲೈಮಾನ್ ಸಖಾಫಿ ಮಾತನಾಡಿ, 1ರಿಂದ 7ನೇ ತರಗತಿವರೆಗೆ ಮದ್ರಸದಲ್ಲಿ ಸಮಗ್ರ ಇಸ್ಲಾಮಿಕ್ ಶಿಕ್ಷಣ ನೀಡಲಾಗುತ್ತಿದ್ದು ಬಳಿಕ ಪ್ಲಸ್ ಟು ವರೆಗೆ ಮುಂದುವರಿಸಲಾಗುತ್ತಿದೆ. ಆದರೂ ಇಂದಿನ ಮಕ್ಕಳಿಗೆ ಈ ಶಿಕ್ಷಣ ಸಾಕಾಗುತ್ತಿಲ್ಲ ಎನ್ನುವ ಸ್ಥಿತಿ ಪರಿಶೀಲನೆ ವೇಳೆ ಕಂಡು ಬಂದಿದೆ. ಮಕ್ಕಳಲ್ಲಿ ಕಲಿಯಲು ಉತ್ಸಾಹ ಮೂಡಿಸುವ ಸಲುವಾಗಿ ಆರಂಬಿಸಲಾಗಿರುವ ಸ್ಮಾರ್ಟ್ ಕ್ಲಾಸ್ ಪ್ರಯೋಜನವಾಗುವ ನಿರೀಕ್ಷೆ ಇದೆ ಎಂದರು.

ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ ದುಆ ನೆರವೇರಿಸಿದರು. ಸ್ಮಾರ್ಟ್ ಕ್ಲಾಸ್ ಆಧ್ಯಾಪಕ ಅಬ್ದುಲ್ ಸಲಾಂ ಮದನಿ ಅಳಿಕೆ, ದಾರುಲ್ ಕಾಲೇಜು ಪ್ರಾಂಶುಪಾಲ ಇಬ್ರಾಹೀಂ ಅಹ್ಸನಿ, ಮೋರಲ್ ಅಕಾಡಮಿಯ ಅಧ್ಯಾಪಕ ಸಿದ್ದೀಕ್ ಅಹ್ಸನಿ, ದರ್ಗಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಕಾರ್ಯದರ್ಶಿ ನೌಷಾದ್, ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ಕೆನರಾ, ಸದಸ್ಯರಾದ ಮುಹಮ್ಮದ್ ಅಕ್ಕರೆಕೆರೆ, ಆಲಿಮೋನು ಅಲೇಕಳ, ಅಶ್ರಫ್ ಮುಕಚ್ಚೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News