ಸೆ.21ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪರಿಶಿಷ್ಟರ ಸಮಾವೇಶ

Update: 2017-08-23 10:09 GMT

ಮಂಗಳೂರು, ಆ.23: ಜಾತ್ಯತೀತ ಜನತಾಳದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶ ಸೆ.21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪಕ್ಷದ ಹಿರಿಯ ಉಪಾಧ್ಯಕ್ಷ, ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

ಸಮಾವೇಶದ ಸಿದ್ಧತೆ ಅಂಗವಾಗಿ ಎಲ್ಲ 30 ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಪರಿಶಿಷ್ಟರ ಜತೆಗೆ ಸಂವಾದ ನಡೆಸುತ್ತಿದ್ದೇವೆ. ‘ಪರಿಶಿಷ್ಟರ ನಡಿಗೆ ಜೆಡಿಎಸ್ ನಡೆಗೆ’ ಎಂದು ಘೋಷಣೆಯಡಿ ಸುಮಾರು ಐದು ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.

ರಾಜ್ಯದ ರಾಜಕೀಯ ಪಕ್ಷವಾಗಿ ಜೆಡಿಎಸ್ ತನ್ನದೇ ಛಾಪು ಹೊಂದಿದೆ. ರಾಮಕೃಷ್ಣ ಹೆಗಡೆ, ಬಿ.ಎಸ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಐದು ಮಂದಿ ಸಿಎಂಗಳನ್ನು ಜನತಾ ಪರಿವಾರ ನೀಡಿದೆ ಎಂದರು.

1983ರಲ್ಲಿ ಕಾಂಗ್ರೆಸ್ ದುರಾಡಳಿತವನ್ನು ಕಂಡು ಅದನ್ನು ಇಳಿಸುವಲ್ಲಿ ದಲಿತರ ಪಾತ್ರ ಮಹತ್ವದ್ದು, ಹಿಂದುಳಿದ ವರ್ಗ, ಕನ್ನಡ ಪರ ಸಂಘಟನೆಗಳು ಸೇರಿ ಜನತಾ ಪರಿವಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ, ಕಾಂಗ್ರೆಸ್‌ಗಳು ಜನ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸಿಲ್ಲ, ಬಿಜೆಪಿಯ ಭ್ರಷ್ಟಾಚಾರ, ಒಳಜಗಳದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಸಿದ್ದರಾಮಯ್ಯ ಸರಕಾರ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ದೂರಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನಿಂದ ಶಾಂತಿ ಮರೀಚಿಕೆಯಾಗುತ್ತಿದೆ. ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಪರ್ಯಾಯ ಆಡಳಿತವಾಗಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಶಾಂತಿ, ನೆಮ್ಮದಿ ಕಾಪಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.
ರೈ ಈಗ ಮಾತಾಡ್ತಾರೆ

ಬಿಜೆಪಿಯ ಸುಳ್ಳು ಆರೋಪಗಳು, ಕುತಂತ್ರ ವಿರುದ್ಧ ಇಷ್ಟರವರೆಗೆ ಸುಮ್ಮನಿದ್ದ ಸಚಿವ ಬಿ.ರಮಾನಾಥ ರೈ ಕೆಲವು ದಿನಗಳಿಂದ ಮಾತನಾಡಲು ತೊಡಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಟೀಕಿಸಿದರು.

ಇಷ್ಟರ ತನಕ ಕಾಂಗ್ರೆಸ್- ಬಿಜೆಪಿ ಒಳ ಒಪ್ಪಂದ ಮಾಡಿದಂತಿತ್ತು. ಈಗ ಶೋಭಾ ಕರಂದ್ಲಾಜೆ, ಕಲ್ಲಡ್ಕ ಭಟ್ ವಿರುದ್ಧ ರೈ ಮಾತನಾಡುತ್ತಿದ್ದಾರೆ. ಆದರೆ, ಇನ್ನೊಬ್ಬ ಸಚಿವರು ತುಟಿ ಬಿಚ್ಚುತ್ತಿಲ್ಲ ಎಂದು ಅವರು ಹೇಳಿದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ರಾಮ್‌ಗಣೇಶ್, ಪರಮೇಶ್ವರ, ಯುವ ಜನತಾದಳ ರಾಜ್ಯ ಕಾರ್ಯದರ್ಶಿ ಶ್ರೀನಾಥ ರೈ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News