ಕೊನೆಗೂ ಪತ್ತೆಯಾದ ಭಟ್ಕಳದ ಮೂಗಿ ಮಹಿಳೆ

Update: 2017-08-23 11:25 GMT

ಉಡುಪಿ, ಆ.23: ಮೂರು ತಿಂಗಳ ಹಿಂದೆ ಕುಂದಾಪುರದಿಂದ ನಾಪತ್ತೆಯಾಗಿದ್ದ ಭಟ್ಕಳದ ಮಗ್ದೂಮ್ ಕಾಲನಿಯ ಮೂಗಿ ಮಹಿಳೆ ಜುಲೇಖಾ(50) ಕೊನೆಗೂ ಪತ್ತೆಯಾಗಿದ್ದಾರೆ.

ಪತ್ರಿಕಾ ವರದಿಯನ್ನು ಓದಿದ್ದ ಹೋಮ್‌ಗಾರ್ಡ್ ಮಹಿಳೆಯೊಬ್ಬರು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಅಲೆದಾಡುತ್ತ ರೈಲು ಹತ್ತಲು ಹೋದ ಜುಲೇಖಾರನ್ನು ಇಂದು ಗುರುತಿಸಿ ಕುಟುಂಬದವರಿಗೆ ಕರೆ ಮಾಡಿದ್ದಾರೆ. ಇದೀಗ ಹೋಮ್‌ಗಾರ್ಡ್ ಜೊತೆ ರೈಲ್ವೆ ನಿಲ್ದಾಣದಲ್ಲಿರುವ ಜುಲೇಖಾರನ್ನು ಕರೆದು ಕೊಂಡು ಬರಲು ಮನೆಮಂದಿ ಕುಂದಾಪುರ ಹಾಗೂ ಭಟ್ಕಳದಿಂದ ಹೊರಟಿದ್ದಾರೆ.

ಜೂ.23ರಂದು ಭಟ್ಕಳದಿಂದ ಹೆಮ್ಮಾಡಿಯ ಸಂತೋಷ ನಗರದಲ್ಲಿ ವಾಸವಾಗಿರುವ ನನ್ನ ಮನೆಗೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಒಬ್ಬರೇ ಹೊರಟಿದ್ದ ಜುಲೇಖಾ, ಹೆಮ್ಮಾಡಿಯ ಬದಲು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇಳಿದು ನಾಪತ್ತೆಯಾಗಿದ್ದರು. ಬಾಯಿ ಬಾರದ ಅವರು ಮನೆಯ ವಿಳಾಸ ಗುರುತು ಹೇಳಲು ಆಗದೆ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಜೂ. 28ರಂದು ಮಂಗಳೂರು ರೈಲ್ವೆ ನಿಲ್ದಾಣದಲ್ಲಿದ್ದ ಇವರಿಗೆ ಅಲ್ಲಿನ ಗಾರ್ಡ್ ಊಟ ಕೊಟ್ಟು ಉಪಚರಿಸಿದ್ದರು. ಅದರ ನಂತರ ಅವರು ಅಲ್ಲಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಗೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ತಾಯಿಯ ಹುಡುಕಾಟಕ್ಕಾಗಿ ಕತರ್‌ನಿಂದ ಊರಿಗೆ ಆಗಮಿಸಿರುವ ಅವರ ಪುತ್ರ ಅಬ್ದುಲ್ ರಝಾಕ್ ಹಾಗೂ ಕುಟುಂಬಸ್ಥರು ಕುಂದಾಪುರ, ಉಡುಪಿ, ಮಂಗಳೂರು ಬಸ್, ರೈಲ್ವೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜುಲೇಖಾ ಅವರ ಭಾವಚಿತ್ರ ಇರುವ ಬ್ಯಾನರ್ ಹಾಗೂ  ಪೋಸ್ಟರ್‌ಗಳನ್ನು ಹಾಕಿ ಸಾರ್ವಜನಿಕರಲ್ಲಿ ವಿಚಾರಿಸುತ್ತಿದ್ದರು. ಅಲ್ಲದೆ ತಾಯಿಯನ್ನು ಪತ್ತೆ ಮಾಡಿ ಕೊಡುವವರಿಗೆ 10 ಸಾವಿರ ರೂ. ನಗದು ಬಹುಮಾನ ನೀಡುವುದಾಗಿಯೂ ರಝಾಕ್ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News