ಮಂಗಳೂರು: ಕುರ್‌ಆನ್ ಪರೀಕ್ಷಾ ವಿಜೇತರಿಗೆ ಪ್ರಶಸ್ತಿ ಪುರಸ್ಕಾರ ವಿತರಣೆ

Update: 2017-08-23 16:01 GMT

ಮಂಗಳೂರು, ಆ. 23: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ (ಎಸ್‌ಕೆಎಸ್‌ಎಂ) ಮತ್ತು ಸಲಫಿ ಎಜುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್‌ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಇವುಗಳ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಲಾದ ಸಮಾರೋಪ ಸಮಾರಂಭದಲ್ಲಿ ಕುರ್‌ಆನ್ ಪರೀಕ್ಷಾ ವಿಜೇತರಿಗೆ ಪ್ರಶಸ್ತಿ ಪುರಸ್ಕಾರ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್ ಮದನಿ ಕುರ್‌ಆನ್‌ನ 5 ಅಧ್ಯಾಯಗಳ ಕನ್ನಡಾನುವಾದ, ಶಬ್ದಾರ್ಥ ಮತ್ತು ವಾಖ್ಯಾನದ ಗ್ರಂಥವನ್ನು ಬಿಡುಗೊಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪವಿತ್ರ ಗ್ರಂಥ ಕುರ್‌ಆನ್ ಆಂತರಿಕ ಶುದ್ಧೀಕರಣದ ರಹದಾರಿ. ಮನುಷ್ಯ ತನ್ನ ಆಂತರಿಕ ಕಣ್ಣಿನಿಂದ ಸಮಾಜವನ್ನು ನೋಡುವಂತಹ ಕಾರ್ಯವನ್ನು ಕುರ್‌ಆನ್ ಮಾಡಿದೆ. ಕುರ್‌ಆನ್ ಮಾನವನ ಮಾರ್ಗದರ್ಶನಕ್ಕಾಗಿ ದೇವನಿಂದ ಅವತೀರ್ಣಗೊಂಡ ಪವಿತ್ರ ಗ್ರಂಥವಾಗಿದ್ದು, ಈ ಗ್ರಂಥವನ್ನು ಅರ್ಥ ಸಹಿತ ಓದಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಇದಕ್ಕೂ ಮುನ್ನ ಮೌಲವಿ ಉನೈಸ್ ಪಾಪಿನಶ್ಶೇರಿ ಅವರು ‘ಆದರ್ಶ ಕುಟುಂಬ’ ವಿಷಯದಲ್ಲಿ ಮಾತನಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಕುರ್‌ಆನ್ ವಿವಿಧ ಭಾಷೆಗಳಲ್ಲಿ ಭಾಷಾಂತರಗೊಂಡಿದ್ದು, ಕನ್ನಡದಲ್ಲೂ ಅನುವಾದಗೊಂಡಿರುವುದು ಉತ್ತಮ ಬೆಳವಣಿಗೆ. ಇಂದು ಇಸ್ಲಾಂನ ಬಗ್ಗೆ ಅಪಪ್ರಚಾರ, ಟೀಕೆಗಳು ಕೇಳಿ ಬರುತ್ತಿದೆ. ಅವೆಲ್ಲದಕ್ಕೂ ಕುರ್‌ಆನ್ ಉತ್ತರ ನೀಡುತ್ತದೆ. ಕುರ್‌ಆನ್‌ನ ಆದೇಶವನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಶಾಂತಿ ಮತ್ತು ಸಹಬಾಳ್ವೆಯೊಂದಿಗೆ ಜೀವನ ನಡೆಸುವಂತೆ ಕರೆ ನೀಡಿದರು.

ಎಸ್‌ಕೆಎಸ್‌ಎಂನ ಅಧ್ಯಕ್ಷ ಯು.ಎನ್. ಅಬ್ದುರ್ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಎಸ್‌ಎಂನ ಪ್ರಧಾನ ಕಾರ್ಯದರ್ಶಿ ಬಶೀರ್ ಶಾಲಿಮಾರ್, ಎಸ್‌ಕೆಎಸ್‌ಎಂನ ಮಾಜಿ ಅಧ್ಯಕ್ಷ ಅಹ್ಮದ್ ಅನ್ಸಾರ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್‌ನ ಅಧ್ಯಕ್ಷ ಮೂಸ ತಲಪಾಡಿ, ಸಲಫಿ ಎಜುಕೇಶನ್ ಬೋರ್ಡ್‌ನ ಅಧ್ಯಕ್ಷ ಮುಸ್ತಫಾ ದಾರಿಮಿ, ಕರ್ನಾಟಕ ಸಲಫಿ ಫೌಂಡೇಶನ್ ಜಿದ್ದಾ ಘಟಕದ ಅಧ್ಯಕ್ಷ ಎಂ.ಬಿ.ಅಬೂಬಕರ್, ಕಾರ್ಯದರ್ಶಿ ಶರ್ಫುದ್ದೀನ್, ದಯಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಅಬ್ದುಲ್ಲತೀಫ್, ಹೈದರ್ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು.

ಎಸ್‌ಕೆಎಸ್‌ನ ಕೇಂದ್ರ ಸಮಿತಿ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಲಫಿ ಎಜುಕೇಶನ್ ಬೋರ್ಡ್‌ನ ಪರೀಕ್ಷಾಧಿಕಾರಿ ಮುಹಮ್ಮದ್ ಹನೀಫ್ ಬೋಳಂತೂರು ವಂದಿಸಿದರು.

ಕಾರ್ಯಕ್ರಮದಲ್ಲಿ ಕುರ್‌ಆನ್ ಪರೀಕ್ಷಾ ವಿಜೇತ 31 ಮಂದಿಗೆ ಪುರಸ್ಕಾರ ನೀಡಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News