ಮಂಗಳೂರು: ಸಂಘ-ಸಂಸ್ಥೆಗಳ ವತಿಯಿಂದ ಉಚಿತ ಆರೋಗ್ಯ ತಪಾಸಣೆ

Update: 2017-08-23 17:35 GMT

ಮಂಗಳೂರು, ಆ.23: ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು, ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ, ಎಡಪದವು ಇದರ ಸಹಯೋಗ ಮತ್ತು ತೆಂಕ ಎಡಪದವು ಗ್ರಾಮ ಪಂಚಾಯತ್, ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು , ಸೈಂಟ್ ಫ್ರಾಸ್ಸಿಸ್ ಕ್ಸೇವಿಯರ್ ಚರ್ಚ್ ಮೂಡು ಪೆರಾರ್, ಉಮ್ಮಾ ಹಾತುಲ್ ಮು-ಮಿನೀನ್ ಜುಮಾ ಮಸೀದಿ ಎಡಪದವು, ಕೆ.ಎ. ಫೌಂಡೇಶನ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಅವರು ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಗಮನ ನೀಡಬೇಕು. ಆರೋಗ್ಯವಂತ ಸಮಾಜಕ್ಕೆ ಸುತ್ತಮುತ್ತಲಿನ ಪರಿಸರದ ಶುಚಿತ್ವವನ್ನು ಕಾಪಾಡಬೇಕೆಂದರು.

ಮುಖ್ಯ ಅತಿಥಿಗಳಾಗಿ ‘ನಂಡೆ ಪೆಂಙಳ್’ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ ಮಾತನಾಡಿ, ಎಡಪದವು ಗ್ರಾಮದಲ್ಲಿ ಹೆಚ್ಚಿನವರು ಬಡವರೇ ವಾಸವಾಗಿರುವ ಗ್ರಾಮವಾಗಿದ್ದು, ಇಲ್ಲಿನ ಜನರಿಗಾಗಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಇನ್ನೋರ್ವ ಅತಿಥಿ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯನಾಥ್ ವಿಠಲ್ ಶೆಟ್ಟಿ ಮಾತನಾಡಿ, ಎಲ್ಲಾ ಧರ್ಮದವರ ಸಹಭಾಗಿತ್ವದಲ್ಲಿ ವೈದ್ಯಕೀಯ ಶಿಬಿರ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಸಾಮಾಜಿಕ ಕಳಕಳಿಯುಳ್ಳ ಇಂತಹ ಸೇವೆಯು ಅಭಿನಂದನೀಯ ಎಂದರು.

ಶಾಲಾ ಸಂಚಾಲಕ ವೈ.ಮಹಮ್ಮದ್ ಬ್ಯಾರಿ ಮಾತನಾಡಿ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಈ ಕಾರ್ಡಿನಿಂದ 1 ವರ್ಷದ ಅವಧಿಗೆ ಉಚಿತ ಶಸ್ತ್ರಚಿಕಿತ್ಸೆ, ಉಚಿತ ಊಟ ಹಾಗೂ ಉಚಿತ ಹಾಸಿಗೆಯನ್ನು ಕಣಚೂರು ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದರು.

ಶಿಬಿರದಲ್ಲಿ 350ಕ್ಕೂ ಅಧಿಕ ಜನರು ನೊಂದಾವಣೆ ಮಾಡಿ, ಉಚಿತ ತಪಾಸಣೆ ಹಾಗೂ ಔಷಧಿಯನ್ನು ಪಡೆದುಕೊಂಡರು. ಕಣ್ಣಿನ ವಿಭಾಗದಲ್ಲಿ ಅತೀ ಹೆಚ್ಚಿನ ರೋಗಿಗಳು ತಪಾಸಣೆ ಪಡೆದುಕೊಂಡರು.

ಶಿಬಿರದಲ್ಲಿ ವೈದ್ಯಕೀಯ ಶಸ್ತ್ರ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಸ್ತ್ರಿರೋಗ ಮತ್ತುತಿ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ನೇತ್ರ ತಜ್ಞರು, ದಂತ ತಜ್ಞರು, ಚರ್ಮರೋಗ ತಜ್ಞರು, ಮನೋರೋಗ ತಜ್ಞರು ರೋಗಿಗಳ ತಪಾಸಣೆ ನಡೆಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ತಾ.ಪಂ. ಹಾಲಿ ಸದಸ್ಯರಾದ ನಾಗೇಶ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಆರ್.ಕೆ. ಪೃಥ್ವಿರಾಜ್, ನೋರ್ಬರ್ಟ್ ಮಥಾಯಸ್, ಉಮ್ಮಾಹಾತುಲ್-ಮು-ಮಿನೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಎಂ.ಎಂ.ಶರೀಫ್, ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಉಪಾಧ್ಯಕ್ಷ ರಫಾಯಲ್ ಡಿಸೋಜಾ, ಕಣಚೂರು ಆಸ್ಪತ್ರೆಯ ನೇತ್ರ ತಜ್ಞ ಡಾ. ಬದ್ರಿನಾಥ್, ಕೆ.ಎ. ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷ ಹಾಜಿ ಇಬ್ರಾಹೀಂ, ರಾಜೇಶ್ ನಾಕ್ ಉಳಿಪಾಡಿಗುತ್ತು, ಎಡಪದವು ಪಂಚಾಯತ್ ಲೆಕ್ಕ ಪರಿಶೋಧಕ ಇಸ್ಮಾಯೀಲ್ ಸುತಾರ್, ಮ್ಯಾನೇಜರ್ ಪ್ಲೊಸ್ಸಿ ತಾವ್ರೋ ಉಪಸ್ಥಿತರಿದ್ದರು.

ಐಡಿಯಲ್ ಶಾಲೆಯ ಮುಖ್ಯೋಪಾಧ್ಯಾಯಿನಿ ನಂದಾ ಉಮಾಪ್ರೀಯಾ ಗಡಿಯಾರ್ ಸ್ವಾಗತಿಸಿದರು. ಸಹ ಮುಖ್ಯೋಪಾಧ್ಯಾಯ ಫೆಲಿಕ್ಸ್ ಸಿಕ್ವೇರಾ ವಂದಿಸಿದರು. ಶಿಕ್ಷಕಿ ಸುಮತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News