'ಸ್ಥಳಾಂತರ ಬಯಸುವವರಿಗೆ ಪರ್ಯಾಯ ವ್ಯವಸ್ಥೆ'

Update: 2017-08-24 14:15 GMT

ಬಂಟ್ವಾಳ, ಆ. 24: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತಲಿರುವ ನಿವಾಸಿಗಳು ಸ್ಥಳಾಂತರಕ್ಕೆ ಬಯಸಿದರೆ ಇರಾ ಗ್ರಾಮದಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಭರವಸೆ ನೀಡಿದ್ದಾರೆ.

ಗುರುವಾರ ಘಟಕ, ಸುತ್ತಲಿನ ಪ್ರದೇಶ, ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯೊಂದಿಗೆ ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್, ಘನ ತ್ಯಾಜ್ಯ ಘಟಕದ ಸುತ್ತಮುತ್ತಲಿರುವ ಶಾಲೆ, ಅಂಗನವಾಡಿ, ಮದರಸ ಹಾಗೂ 140ರಷ್ಟು ಇರುವ ಮನೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ಘಟಕದ ಕಾಮಗಾರಿಯನ್ನು ಆರಂಭಿಸಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಘನ ತ್ಯಾಜ್ಯ ಘಟಕವನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ತಿಳಿಸಿದರು.

ಹೈಕೋರ್ಟ್ ನಿರ್ದೇಶನದಂತೆ ಘಟಕದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇಲ್ಲಿಂದ ಘನ ತ್ಯಾಜ್ಯ ಘಟಕವನ್ನು ಸ್ಥಳಾಂತರಗೊಳಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ ಜಿಲ್ಲಾಧಿಕಾರಿ, ಘಟಕದ ಸುತ್ತ ಮುತ್ತ ವಾಸ್ತವ್ಯ ಇರುವ ಅಧಿಕೃತ ಮತ್ತು ಅನಧಿಕೃತ ಮನೆಯವರು ಇಲ್ಲಿಂದ ಸ್ಥಳಾಂತರಗೊಳ್ಳಲು ಬಯಸುವುದಾದರೆ ಪಕ್ಕದ ಇರಾ ಗ್ರಾಮದಲ್ಲಿರುವ ಸರಕಾರಿ ಜಮೀನಿನಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಲಿದೆ. ಇಲ್ಲಿರುವ ಶಾಲೆ, ಅಂಗನವಾಡಿ, ಮದರಸವನ್ನು ಕೂಡಾ ಅಲ್ಲಿಗೆ ಸ್ಥಳಾಂತರಿಸಲಾಗುವುದು. ಮನೆ ನಿರ್ಮಾಣಕ್ಕೆ ವಸತಿ ಯೋಜನೆ ಹಾಗೂ ಸಾಧ್ಯವಾದರೆ ಹೆಚ್ಚುವರಿ ಅನುದಾನವನ್ನು ಒದಗಿಸಲಿದೆ ಎಂದರು.

ತಹಶೀಲ್ದಾರ್ ಮತ್ತು ಪುರಸಭಾ ಅಧಿಕಾರಿ ಇಲ್ಲಿರುವ ಪ್ರತೀ ಮನೆಗೆ ಭೇಟಿ ನೀಡಿ ಸ್ಥಳಾಂತರಕ್ಕೆ ಬಯಸುವವರ, ಬಯಸದವರ ಮಾಹಿತಿಯನ್ನು ಬರಹದ ಮೂಲಕ ಪಡೆಯಬೇಕು. ಸ್ಥಳಾಂತರಕ್ಕೆ ಇಚ್ಛಿಸದವರು ಇಲ್ಲಿಯೇ ವಾಸ್ಥವ್ಯ ಹೂಡಬಹುದು. ಒಂದು ವೇಳೆ ಯಾರೊಬ್ಬರು ಕೂಡಾ ಇಲ್ಲಿಂದ ಸ್ಥಳಾಂತರಕ್ಕೆ ಬಯಸದಿದ್ದರೂ ಇಲ್ಲಿರುವ ಶಾಲೆ, ಅಂಗನವಾಡಿ, ಮದರಸವನ್ನು ಕಡ್ಡಾಯವಾಗಿ ಇಲ್ಲಿಂದ ಸ್ಥಳಾಂತರಗೊಳಿಸುವಂತೆಅಧಿಕಾರಿಗಳಿಗೆ ಅವರು ಸೂಚಿಸಿದರು.

ಘಟಕದ ಮುಂದುವರಿದ ಕಾಮಗಾರಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಒಟ್ಟು ಸೇರಿಕೊಂಡು ಚರ್ಚೆ ನಡೆಸಿ ಸಭೆಯ ನಡವಳಿಯಂತೆ ಕಾಮಗಾರಿಗೆ ಸಂಬಂಧಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಇತ್ಯರ್ಥ ಪಡಿಸಲು ಸಾಧ್ಯ ವಾಗದೆ ಇರುವ ಸಮಸ್ಯೆಗಳಿದ್ದರೆ ತಕ್ಷಣ ತನ್ನ ಗಮನಕ್ಕೆ ತನ್ನಿ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಬೇಡಿಕೆ ಈಡೇರಿಸಿ: ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮೊದಲು ನಮ್ಮ ಬೇಡಿಕೆಗಳನ್ನು ಈಡೇರಿಸಿ. ಶಾಲೆ, ಅಂಗನವಾಡಿ, ಮದರಸ, ಮನೆಗಳನ್ನು ಸ್ಥಳಾಂತರಗೊಳಿಸುವುದರೊಂದಿಗೆ ಪರಿಸರ ಇಲಾಖೆಯ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಘಟಕ ಸಂಪೂರ್ಣ ವೈಜ್ಞಾನಿಕವಾಗಿರಬೇಕು. ಘಟಕದ ನಿರ್ವಾಹಣೆ ಜಿಲ್ಲಾಧಿಕಾರಿಯ ಉಸ್ತುವಾರಿಯಲ್ಲಿ ಇರಬೇಕು ಎಂದು ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಜಿಲ್ಲಾದಿಕಾರಿ ಯೊಂದಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಅಬ್ಬಾಸ್, ನಗರ ಕೋಶಾ ಯೋಜನಾ ನಿರ್ದೇಶಕ ಪ್ರಸನ್ನ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯಾಧಿಕಾರಿ ರತ್ನ ಪ್ರಸಾದ್, ಪಿಡಿಒ ವೀರಪ್ಪ ಗೌಡ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News