ಎಂಡೋ ಪೀಡಿತ ಬಾಲಕಿಗೆ ಮನೆ ದುರಸ್ತಿಯ ಕೊಡುಗೆ

Update: 2017-08-24 15:31 GMT

ಪುತ್ತೂರು, ಆ. 24: ಎಂಡೋ ಪೀಡಿತ ಬಾಲಕಿಯಿರುವ ಕಡು ಬಡತನದ ಕುಟುಂಬವೊಂದಕ್ಕೆ ಮನೆಯನ್ನು ಪುನಶ್ಚೇತನಗೊಳಿಸಿ ಚೌತಿ ಕಾಣಿಕೆಯಾಗಿ ನೀಡುವ ಮೂಲಕ ಕ್ರೀಡಾ ಸಂಘದ ಯುವಕರ ತಂಡವೊಂದು ಮಾದರಿ ಸೇವೆ ಮಾಡಿದೆ.

ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮ ಪಂಚಾಯತ್‌ಗೊಳಪಟ್ಟ ದೈಪಿಲ ಎಂಬಲ್ಲಿರುವ ‘ದೈಪಿಲ ಕ್ರೀಡಾ ಸಂಘ’ದ ಯುವಕರೇ ಈ ಮಾದರಿ ಸೇವೆ ಮಾಡಿರುವವರು.

ದೈಪಿಲದ ಖಂಡಿಗ ಎಂಬಲ್ಲಿರುವ ಬಡ ಕೂಲಿ ಕಾರ್ಮಿಕ ಶೀನಪ್ಪ ಗೌಡ ಮತ್ತು ಗಿರಿಜ ದಂಪತಿಯ ಪುತ್ರಿ ನವ್ಯಾ (14) ಹುಟ್ಟು ಎಂಡೋ ಪೀಡಿತೆಯಾಗಿದ್ದಾರೆ.

ಇವರ ಮನೆಯು ತೀರಾ ನಾದುರಸ್ತಿಯಲ್ಲಿದ್ದು, ಮನೆ  ಸೋರುತ್ತಿತ್ತು. ಅಲ್ಲದೆ ನೆಲ ಸಾರಣೆಯಿಲ್ಲದೆ ಮಣ್ಣುಮಯವಾಗಿತ್ತು. ನಡೆಯಲಾಗದ ನವ್ಯಾ ಅವರನ್ನು ಮಣ್ಣಿನ ನೆಲದಲ್ಲಿಯೇ ಮಲಗಿಸುತ್ತಿದ್ದರು. ಇದನ್ನು ನೋಡಿದ ಯುವಕ ಮಂಡಲದ ಸದಸ್ಯರು ಸುಮಾರು 1ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ಪುನರ್‌ನಿರ್ಮಿಸಿ ಸುಂದರಗೊಳಿಸಿ ಮನೆ ಮಂದಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ.

ಗಣೇಶ ಚೌತಿ ದಿನವಾದ ಶುಕ್ರವಾರ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ತೀರಾ ಬಡವರಾಗಿರುವ ಶೀನಪ್ಪ ಗೌಡರು ಅನಾರೋಗ್ಯದಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪತ್ನಿ ವಾರಿಜ, ಪುತ್ರಿ ನವ್ಯಾ ಅವರನ್ನು ನೋಡಿಕೊಳ್ಳಲೆಂದು ಮನೆಯಲ್ಲಿಯೇ ಇರಬೇಕಾಗಿದೆ. ಶೀನಪ್ಪ ಗೌಡ ಮತ್ತು ವಾರಿಜ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯ ಪುತ್ರಿ ಎಂಡೋ ಪೀಡಿತೆ ನವ್ಯಾ. ಹಿರಿಯ ಪುತ್ರ ಐಟಿಐ ವ್ಯಾಸಂಗ ಮಾಡುತ್ತಿದ್ದು, ಇನ್ನೋರ್ವ ಪುತ್ರಿ ಪಿಯುಸಿ ಓದುತ್ತಿದ್ದಾರೆ. ಅವರಿಗೆ ಹಿರಿಯರಿಂದ ಬಂದಿರುವ ಸುಮಾರು ಒಂದೂವರೆ ಎಕರೆ ಜಮೀನು ಇದ್ದು, ಹಿಂದೆ ಈ ಜಮೀನಿನಲ್ಲಿ ಗದ್ದೆ ಬೇಸಾಯ ಮಾಡುತ್ತಿದ್ದರು. ಆದರೆ ಇದೀಗ ಜಮೀನು ಕೃಷಿ ರಹಿತವಾಗಿದ್ದು, ಜಮೀನಿನ ದಾಖಲೆಗಳು ಸರಿಯಾಗದ ಕಾರಣ ಸರ್ಕಾರದ ಅಥವಾ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲೂ ಸಾಧ್ಯವಾಗಿಲ್ಲ. ನವ್ಯಾರಿಗೆ ಬರುತ್ತಿರುವ 3ಸಾವಿರ ರೂ. ಮಾತ್ರ ಇದೀಗ ಇವರ ಆದಾಯವಾಗಿದೆ.

ಈ ಕುಟುಂಬದ ಸಂಕಷ್ಟ ಮನಗಂಡ ದೈಪಿಲ ಕ್ರೀಡಾ ಸಂಘದ ಯುವಕರು ಅವರ ನಾದುರಸ್ತಿಯಲ್ಲಿದ್ದ ಮನೆಯನ್ನು ದುರಸ್ತಿಗೊಳಿಸಿ ವಾಸಯೋಗ್ಯವಾಗಿ ಪರಿವರ್ತಿಸಿದ್ದಾರೆ. ಮನೆಯ ಮೇಲ್ಚಾವಣಿ, ಗೋಡೆ ಮತ್ತು ನೆಲವನ್ನು ಸಾರಣೆಗೊಳಿಸಿ ಸುಸಜ್ಜಿತವನ್ನಾಗಿಸಿದ್ದಾರೆ. ನವ್ಯಾ ಮನೆಯಲ್ಲಿ ತೆವಳಿಕೊಂಡೇ ಬದುಕುತ್ತಿರುವುದರಿಂದ ನೆಲಕ್ಕೆ ಸಿಮೆಂಟ್ ಮತ್ತು ಟೈಲ್ಸ್ ಹಾಕಿಸಿ ಮಣ್ಣು ನೆಲದಿಂದ ನವ್ಯಾರಿಗೆ ಮುಕ್ತಿ ನೀಡಿದ್ದಾರೆ.

ದೈಪಿಲ ಕ್ರೀಡಾ ಸಂಘದ ಸಂಚಾಲಕ ಪ್ರವೀಣ್ ಕುಂಟ್ಯಾನ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಖಂಡಿಗ, ಕಾರ್ಯದರ್ಶಿ ರಾಜೇಶ್ ಖಂಡಿಗ ಅವರ ಸಹಯೋಗದಲ್ಲಿ ಕ್ರೀಡಾ ಸಂಘದ ಯುವಕರು ಶ್ರಮದಾನದ ಮೂಲಕವೂ ಮನೆ ದುರಸ್ತಿಯ ಕೆಲವೊಂದು ಕೆಲಸಗಳನ್ನು ಮಾಡಿದ್ದಾರೆ.

ಕ್ರೀಡಾ ಸಂಘದ ಮೂಲಕ ನಡೆಸಿದ ಕಬಡ್ಡಿ ಪಂದ್ಯಾಟದಲ್ಲಿ ಉಳಿಕೆಯಾದ 70 ಸಾವಿರ ರೂ. ಬಳಸಿಕೊಂಡು ಉಳಿದ ಹಣವನ್ನು ದಾನಿಗಳಿಂದ ಸ್ವೀಕರಿಸಿ ಮನೆಯನ್ನು ಪುನರ್ ನಿರ್ಮಿಸಿದ್ದಾರೆ. ಎಂಡೋ ಪೀಡಿತೆ ನವ್ಯಾ ಮಣ್ಣಿನ ನೆಲದಲ್ಲಿ ಹೊರಳಾಡುತ್ತಿರುವುದನ್ನು ನೋಡುತ್ತಿದ್ದಾಗ ತುಂಬಾ ದು:ಖವಾಗುತ್ತಿತ್ತು. ಅಲ್ಲದೆ ಕಡು ಬಡವರಾದ ಶೀನಪ್ಪ ಗೌಡರ ನೋವಿಗೆ ಸ್ಪಂಧಿಸಬೇಕು ಎಂಬ ನಮ್ಮ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಹಾಗೂ ದಾನಿಗಳ ನೆರವಿನಿಂದ ಈ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಇದೆಲ್ಲವನ್ನು ನಾವು ಸಂಘದ ಜವಾಬ್ದಾರಿ ಎಂದು ತಿಳಿದು ಮಾಡಿದ್ದೇವೆ. ನಮಗೆ ಈ ಕೆಲಸದಲ್ಲಿ ತುಂಬಾ ತೃಪ್ತಿಯಿದೆ.
- ಪ್ರವೀಣ್ ಕುಂಟ್ಯಾನ, ಸಂಚಾಲಕರು ದೈಪಿಲ ಕ್ರೀಡಾ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News