ಸಚಿವ ಯು.ಟಿ.ಖಾದರ್‌ರಿಂದ ಪ್ರಗತಿ ಪರಿಶೀಲನೆ

Update: 2017-08-26 16:43 GMT

ಮಂಗಳೂರು, ಆ. 26: ಭೂಕಂದಾಯ ಕಾಯಿದೆಯ 94 ಸಿಸಿಯಡಿ ಭೂಮಿ ಅಕ್ರಮ ಸಕ್ರಮೀಕರಣದ ಅರ್ಜಿಗಳ ವಿಲೇವಾರಿಯನ್ನು ಮುಂದಿನ ಸೆ.10ರೊಳಗೆ ಪೂರ್ಣಗೊಳಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಅತಿಕ್ರಮಿಸಿ ವಾಸಿಸುತ್ತಿರುವವರಿಗೆ 94 ಸಿಸಿಯಡಿ ಸಕ್ರಮಗೊಳಿಸುವ ಪ್ರಕ್ರಿಯೆ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾದ ಅಧಿಕಾರಿಗಳ ಸಭೆಯಲ್ಲಿ ಸಚಿವರು ಮಾತನಾಡಿದರು.

94 ಸಿಸಿಯಡಿ ಭೂಮಿ ಅಕ್ರಮ ಸಕ್ರಮೀಕರಣ ಕೆಲವೆಡೆ ಉತ್ತಮ ಪ್ರಗತಿಯಾಗಿದ್ದರೂ ಮತ್ತೆ ಕೆಲವು ಕಡೆಗಳಲ್ಲಿ ವಿವಿಧ ಸಮಸ್ಯೆಗಳಿಂದಾಗಿ ಜನರ ಅರ್ಜಿ ವಿಲೇವಾರಿಯಾಗದೆ ಉಳಿದಿವೆ. ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಂಡು ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಖಾದರ್ ಸೂಚನೆ ನೀಡಿದರು.

ಉಳ್ಳಾಲ ಕ್ಷೇತ್ರದ ಕೆಲವೆಡೆ ಕರಾವಳಿ ನಿಯಂತ್ರಣ ವಲಯ-ಸಿಆರ್‌ಝಡ್‌ನ ಮೂರನೆ ವಲಯದಲ್ಲಿ 1991ಕ್ಕಿಂತ ಮೊದಲು ವಾಸಿಸುತ್ತಿರುವವರ ಅರ್ಜಿ ವಿಲೇವಾರಿಗೆ ಯಾವುದೇ ಸಮಸ್ಯೆ ಇಲ್ಲ. ಅಂತಹವರು ಗ್ರಾಮ ಪಂಚಾಯತ್‌ನಿಂದ ವಾಸ್ತವ್ಯವಿದ್ದ ಬಗ್ಗೆ ಪತ್ರ ಪಡೆದುಕೊಂಡು ಅರ್ಜಿ ಸಲ್ಲಿಸಿದಲ್ಲಿ ಅದಕ್ಕೆ ಸಿಆರ್‌ಝಡ್ ಅಧಿಕಾರಿಗಳು ತಗಾದೆ ತೆಗೆಯಬಾರದು. ಹಾಗೆಯೇ 1991ರ ನಂತರ ವಾಸ್ತವ್ಯ ಇರುವವರು ಅರ್ಜಿ ಹಾಕಿದ್ದರೆ ಕಂದಾಯ ಮತ್ತು ಸಿಆರ್‌ಝಡ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸಮುದ್ರ ತೀರದಿಂದ ಭೂಮಿ ಕಡೆಗಿನ ಪ್ರದೇಶದಲ್ಲಿ ಕಟ್ಟಿರುವ ಮನೆಯಾಗಿದ್ದಲ್ಲಿ ಅನುಮತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸೂಚಿಸಿದರು.

ಸಿಆರ್‌ಝಡ್ ಹೊರತು ಪಡಿಸಿ ಇತರ ಜಮೀನಿನಲ್ಲಿ 2012ರ ಮೊದಲು ಕಟ್ಟಿರುವ ಎಲ್ಲಾ ಮನೆ ಮಾಲಕರ ಅರ್ಜಿಗಳನ್ನೂ ಪರಿಗಣಿಸಬಹುದು. ಅತಿಕ್ರಮಿಸಿಕೊಂಡು ಕುಳಿತಿರುವುದು ಖಾಸಗಿ ಜಾಗವಾದರೆ, ಅಥವಾ ಹೆದ್ದಾರಿಯ ಮಧ್ಯ ಭಾಗದಿಂದ ರಸ್ತೆಯ ಅಂಚು ಪ್ರದೇಶವಿರುವಲ್ಲಿ (ರೋಡ್ ಮಾರ್ಜಿನ್)ನ ಭೂಮಿಯಾಗಿದ್ದಲ್ಲಿ ಅಥವಾ ಡೀಮ್ಡ್ ಅರಣ್ಯವಾಗಿದ್ದರೆ ಅಂತಹವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಡಿಸಿ ವಿವರಣೆ ನೀಡಿದರು.

ಈಗಾಗಲೇ ಶೇ.50ರಷ್ಟು ಅರ್ಜಿಗಳ ದೃಢೀಕರಣವಾಗಿದ್ದು, ಉಳಿದದ್ದರ ವಿಲೇವಾರಿ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.

ಉಳ್ಳಾಲ ಕಡಲ್ಕೊರೆತ ಪ್ರದೇಶದಲ್ಲಿ ಒಟ್ಟು 142 ಮಂದಿ ವಾಸ್ತವ್ಯ ಇದ್ದು, ಅವರನ್ನು ಸೂಕ್ತ ಕಡೆಗೆ ಸ್ಥಳಾಂತರಿಸಲು ಸುಮಾರು 8 ಎಕ್ರೆ ಜಾಗದ ಅಗತ್ಯವಿದೆ. ಮುನ್ನೂರು, ಪಾವೂರು ಮೊದಲಾದ ಕಡೆಗಳಲ್ಲಿ ಜಾಗವನ್ನು ಹುಡುಕಲಾಗುತ್ತಿದೆ ಎಂದು ಸ್ಥಳೀಯ ಕಂದಾಯ ನಿರೀಕ್ಷಕರು ವಿವರಿಸಿದರು. ಆದರೆ, 142 ಮಂದಿಯನ್ನೂ ಒಂದೇ ಕಡೆಗೆ ಸ್ಥಳಾಂತರ ಮಾಡಿದರೆ ಒಳ್ಳೆಯದು. ಒಂದೇ ಕಡೆಯಲ್ಲಿ ಜಾಗವಿದೆಯೇ ಎಂದು ಪರಿಶೀಲಿಸುವಂತೆಯೂ ಸಚಿವರು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ, ಮಂಗಳೂರು ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News