ಹಿಂದೂ ಧರ್ಮ ಉಳಿದಿರುವುದು ಪೇಜಾವರಶ್ರೀ, ಪ್ರಭಾಕರ್ ಭಟ್ಟರಿಂದ ಅಲ್ಲ: ಅಮೀನ್ ಮಟ್ಟು

Update: 2017-08-27 12:07 GMT

ಮಂಗಳೂರು, ಆ.27: ಹಿಂದೂ ಧರ್ಮ ಉಳಿದಿರುವುದು ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳಂಥವರಿಂದಲೇ ಹೊರತು ಪೇಜಾವರಶ್ರೀ, ಮೋಹನ್ ಭಾಗವತ್ ಅಥವಾ ಕಲ್ಲಡ್ಕ ಪ್ರಭಾಕರ ಭಟ್‌ರಂಥವರಿಂದ ಅಲ್ಲ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

‘ಅರಿವು, ಸೌಹಾರ್ದ, ಮುನ್ನಡೆಗಾಗಿ’ ಎಂಬ ಘೋಷಣೆಯಡಿ ನಗರದ ಸಹೋದಯ ಹಾಲ್‌ನಲ್ಲಿ ರವಿವಾರ ನಡೆದ ಡಿವೈಎಫ್‌ಐ ಮಂಗಳೂರು ನಗರ 11ನೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪೇಜಾವರಶ್ರೀ, ಮೋಹನ್ ಭಾಗವತ್, ಕಲ್ಲಡ್ಕ ಪ್ರಭಾಕರ್ ಭಟ್ಟರಂಥವರು ಹಿಂದೂ ಧರ್ಮದ ಸುಧಾರಕರಾಗಿದ್ದಲ್ಲಿ ಅಸ್ಪೃಶ್ಯತೆ, ಮೂಢನಂಬಿಕೆ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅಮೀನ್ ಮಟ್ಟು, ದೇವರು, ಧರ್ಮದ ಹೆಸರಿನಲ್ಲಿ ಬಡಜನರನ್ನು ಶೋಷಣೆ ಮಾಡುವವರು ಹಿಂದೂ ಧರ್ಮದೊಳಗಿನ ಶತ್ರುಗಳು. ಇವರಿಂದಲೇ ಹಿಂದೂ ಧರ್ಮ ಹಾಳಾಗುತ್ತಿವೆ. ಇವರು ತಮ್ಮ ಬಂಡವಾಳ ಬಯಲಿಗೆ ಬರಬಾರದು ಎಂಬ ನಿಟ್ಟಿನಲ್ಲಿ ಮುಸ್ಲಿಮರು, ಕ್ರೈಸ್ತರು ಹಿಂದೂಗಳ ಶತ್ರುಗಳು ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದು ನುಡಿದರು.

ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗಲಭೆಗಳ ಬಗ್ಗೆ ಉಲ್ಲೇಖಿಸಿದ ದಿನೇಶ್ ಅಮೀನ್ ಮಟ್ಟು, ಇದರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್‌ರ ಜಾತಿಗೆ ಸೇರಿದ ಎಷ್ಟು ಮಂದಿ ಪಾಲ್ಗೊಂಡಿದ್ದಾರೆ? ಎಷ್ಟು ಮಂದಿಯ ವಿರುದ್ಧ ಕ್ರಮವಾಗಿದೆ? ಎಂಬುದನ್ನು ಪಟ್ಟಿ ತೆಗೆದು ನೋಡಿದಾಗ ಮನವರಿಕೆಯಾಗುತ್ತಿದೆ. ಈ ಗಲಭೆಗಳಲ್ಲಿ ಬಹುಪಾಲು ಮಂದಿ ದಲಿತರು, ಅಹಿಂದ ವರ್ಗವೇ ಶೋಷಣೆಗೊಳಗಾಗಿವೆ. ಸಮಾನತೆಯ ಪರ ಹೋರಾಡುವ ಕಮ್ಯುನಿಸ್ಟರ ವಿರುದ್ಧವೂ ಇವರು ದಲಿತರು, ಅಹಿಂದ ವರ್ಗವನ್ನು ಎತ್ತಿಕಟ್ಟುತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವನ್ನು ಜನಪ್ರತಿನಿಧಿಗಳ ಬದಲು ಸಂವಿಧಾನೇತರ ಶಕ್ತಿಗಳು ಆಳಲು ಹೊರಟಿರುವುದು ನಮ್ಮೆಲ್ಲರ ದೌರ್ಭಾಗ್ಯ. ದೇಶದ ಇಂದಿನ ಆರ್ಥಿಕ ನೀತಿ ಮತ್ತು ಧರ್ಮ ರಾಜಕಾರಣವು ಅಪಾಯದ ಮಟ್ಟದಲ್ಲಿದೆ. ವಿದ್ಯಾವಂತರೆನಿಸಿಕೊಂಡವರೂ ಕೂಡ ಇದರ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಇವರನ್ನು ಈ ಚಕ್ರವ್ಯೂಹದಿಂದ ಬಿಡಿಸಿ ತರಲು ಸೈದ್ಧಾಂತಿಕ ತಳಹದಿಯ ರೂಪುರೇಷ ಅತ್ಯಗತ್ಯ. ಆ ಹಿನ್ನೆಲೆಯಲ್ಲಿ ಡಿವೈಎಫ್‌ಐ ತನ್ನ ಹೋರಾಟ, ಚಳವಳಿಯ ದಿಕ್ಕನ್ನು ಕೂಡ ಬದಲಿಸಬೇಕಿದೆ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ದೇಶದ ಕೆಲವು ಅನಿಷ್ಠ ವಿದ್ಯಮಾನಗಳ ಹೊರತಾಗಿಯೂ ಅಲ್ಲಲ್ಲಿ ಹೊಸ ಭರವಸೆಯ ಬೆಳಕು ಕಾಣುತ್ತಿದೆ. ಅನೇಕ ಜನಪರ ಚಳವಳಿಗಳು ರೂಪುಗೊಳ್ಳುತ್ತಿವೆ. ಗುಜರಾತ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ತೀರ್ಪು ಮತ್ತು ಹರಿಯಾಣದ ಅತ್ಯಾಚಾರ ಅಪರಾಧಿ ನಕಲಿ ಸ್ವಾಮಿ ಗುರ್ಮೀತ್ ಸಿಂಗ್‌ನ ವಿರುದ್ಧ ನ್ಯಾಯಾಲಯ ನೀಡಿದ ತೀರ್ಪು ಜನರಲ್ಲಿ ಹೊಸ ಚಿಂತನೆ, ಹುಮ್ಮಸ್ಸು ಹುಟ್ಟು ಹಾಕಿದೆ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ಅಧಿಕಾರದ ಗುರಿಯೂ ಇರಲಿ: ಎಡಪಕ್ಷಗಳಿಗೆ ಸೈದ್ಧಾಂತಿಕ ಹೋರಾಟದ ಜೊತೆ ರಾಜಕೀಯ ಅಧಿಕಾರದ ಗುರಿಯೂ ಮುಖ್ಯ. ಇದು ಇಂದಿನ ಅನಿವಾರ್ಯತೆ ಕೂಡ ಹೌದು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಿದ್ದರೆ ಹೊಸ ಸವಾಲು, ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಹೋರಾಟದ ಜೊತೆಗೆ ರಾಜಕೀಯ ಅಥವಾ ಮತಗಳ ಪರಿವರ್ತನೆಗೆ ಪ್ರಯತ್ನವನ್ನೂ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಹಿಂದಕ್ಕೆ ಹೋಗಬೇಕು: ಸದ್ಯ ಕಾಂಗ್ರೆಸ್ ಪಕ್ಷವು ನೆಹರೂ, ಇಂದಿರಾ ಗಾಂಧಿಯ ಕಾಲಕ್ಕೆ ಹೋಗಬೇಕು. ಕಮ್ಯುನಿಸ್ಟ್ ಮತ್ತಷ್ಟು ಮುಂದಕ್ಕೆ ಹೋಗಬೇಕಿದೆ. ಆಗ ಮಾತ್ರ ಈ ಎರಡೂ ಪಕ್ಷಗಳಿಗೆ ಸಂಘಪರಿವಾರದ ಗುಲಾಮಗಿರಿಯಲ್ಲಿ ತೊಡಗಿಸಿಕೊಂಡಿರುವ ಬಿಜೆಪಿಯನ್ನು ಸೈದ್ಧಾಂತಿಕ ಮತ್ತು ರಾಜಕೀಯವಾಗಿ ಎದುರಿಸಲು ಸಾಧ್ಯ ಎಂದು ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ನಾಯಕನಾಗಲು ಸುಲಭ: ಇಂದು ರಾಜಕೀಯ ಪಕ್ಷದ ನಾಯಕನಾಗಲು ಯಾವುದೇ ಸಿದ್ಧಾಂತ, ಬದ್ಧತೆ ಬೇಕಾಗಿಲ್ಲ. ಪ್ರಮುಖ ರಾಜಕಾರಣಿಯ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್, ಜೈಕಾರ ಕೂಗುವುದು, ಕಾರಲ್ಲಿ ಅಡ್ಡಾಡುವ ಸಾಮರ್ಥ್ಯ ಇದ್ದರೆ ಸಾಕು. ಆತನಿಗೆ ರಾಜಕೀಯ ಪಕ್ಷದ ನಾಯಕನಾಗಲು ಅವಕಾಶ ಸಿಗುತ್ತದೆ. ಅದೇ ರೀತಿ ದೇಶಪ್ರೇಮಿ ಎನಿಸಲು ಸೇನೆ ಸೇರಬೇಕಿಲ್ಲ, ಹೋರಾಟ, ತ್ಯಾಗ ಮಾಡಬೇಕಿಲ್ಲ. ಸೈನಿಕರ ಬಗ್ಗೆ ಭಾವೋದ್ರೇಕ ಭಾಷಣ ಮಾಡಿದರೆ ಸಾಕು ಎಂದು ದೇಶದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ದಿನೇಶ್ ಅಮೀನ್ ಮಟ್ಟು ವ್ಯಂಗ್ಯವಾಡಿದರು.

ಉದಾರೀಕರಣ, ಕೋಮುವಾದವು ದೇಶದ ಎರಡು ದೊಡ್ಡ ದುರಂತ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಅಧಿಕಾರಕ್ಕೇರಿದ ಬಿಜೆಪಿ ಈಗ ದೇಶಪ್ರೇಮದ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿದೆ. ಈ ಬಿಜೆಪಿಗರು ಎಂದೆಂದಿಗೂ ಕೂಡ ರಾಮಮಂದಿರ ನಿರ್ಮಿಸುವುದಿಲ್ಲ, ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಿಲ್ಲ. ಇವರಿಗೆ ಅಧಿಕಾರಕ್ಕೇರಲು ಇವೆಲ್ಲಾ ‘ಕಾರ್ಡ್‌ಗಳೇ’ ಹೊರತು ‘ಗುರಿ-ಸಾಧನೆ’ಯಲ್ಲ ಎಂದರು.

ಜಿಲ್ಲೆಯಲ್ಲಿ ಶಿಕ್ಷಣದ ವ್ಯಾಪಾರೀಕರಣ ಹೆಚ್ಚುತ್ತಿವೆ. ಇವರೇ ಮತೀಯವಾದಿಗಳನ್ನು ಪೋಷಿಸುತ್ತಿದ್ದಾರೆ. ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಆರೆಸ್ಸೆಸ್‌ನ ಸಂತೋಷ್‌ಜಿ ಮಂಗಳೂರು ಚಲೋ ಸಂಘಟಿಸಿದ್ದಾರೆ. ನಾವು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎನ್ನುವ ಆರೆಸ್ಸೆಸ್ 'ಮಂಗಳೂರು ಚಲೋ' ಮೂಲಕ ಬಿಜೆಪಿಗೆ ಲಾಭ ಮಾಡಲು ಹೊರಟಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ವಿದ್ಯಾರ್ಥಿನಿಯರಾದ ಕಾವ್ಯಾ, ಸೌಜನ್ಯಾ ನಿಗೂಢ ಸಾವಿನ ಬಗ್ಗೆ ಹೋರಾಟ ಮಾಡಲು ಹಿಂದೇಟು ಹಾಕುವ ಸಂಘಪರಿವಾರವು, ಮುಸ್ಲಿಮರಲ್ಲಿ ನಡೆಯುವ ಬೆರಳೆಣಿಕೆಯ ತ್ರಿವಳಿ ತಲಾಖ್ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಾ ಕಾರಣ ಚರ್ಚೆ ಮಾಡುತ್ತಿದೆ. ಸಂಘಪರಿವಾರಿಗಳ ಈ ಅಜೆಂಡಾದ ವಿರುದ್ಧ ಬಿಜೆಪಿಯೇತರ ಪಕ್ಷಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ಆರೆಸ್ಸಿಸ್ಸಿಗ ಎಂದರೆ ಮಾನನಷ್ಟ ಮೊಕದ್ದಮೆ: "ನಾನು ಉಡುಪಿಯಲ್ಲಿ ಕಾಂಗ್ರೆಸ್, ದ.ಕ.ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಎಂದು ಕೆಲವರು ನನ್ನ ಬಗ್ಗೆ ಹೇಳುತ್ತಾರೆ. ನನ್ನನ್ನು ನೀವು ಕಾಂಗ್ರೆಸ್, ಕಮ್ಯುನಿಸ್ಟ್, ಜೆಡಿಎಸ್ ಅನ್ನಿ. ಬೇಸರವಿಲ್ಲ. ಆದರೆ, ಆರೆಸ್ಸೆಸ್ಸ್ ಎನ್ನಬೇಡಿ. ಹಾಗೇ ಹೇಳಿದರೆ ನಾನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ" ಎಂದು ದಿನೇಶ್ ಅಮೀನ್ ಮಟ್ಟು ಎಚ್ಚರಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಮಂಗಳೂರು ನಗರ ಉತ್ತರ ವಲಯ ಸಮಿತಿಯ ಅಧ್ಯಕ್ಷ ನವೀನ್ ಕೊಂಚಾಡಿ ವಹಿಸಿದ್ದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News