​ಮೀಸಲು ಜಾಗದಲ್ಲಿ ವ್ಯಾಪಾರ ಮಾಡಿ: ಮೇಯರ್ ಕವಿತಾ ಸನಿಲ್

Update: 2017-08-29 09:36 GMT

ಮಂಗಳೂರು, ಆ.28: ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಜಾಗ ಮೀಸಲಿಡಲಾಗಿದೆ. ಅದೇ ಜಾಗದಲ್ಲಿ ವ್ಯಾಪಾರ ಮಾಡುವ ಮೂಲಕ ಸಹಕಾರ ನೀಡಿ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಪೌರಾಡಳಿತ ಮತ್ತು ದ.ಕ. ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ, ನಿಯಂತ್ರಣ ಅಧಿನಿಯಮ ಕಾಯ್ದೆಯ ಕುರಿತು ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬೀದಿಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡಬೇಡಿ, ಕಾಲುದಾರಿಯನ್ನು ಅತಿಕ್ರಮಿಸಬೇಡಿ, ಮಂಗಳೂರು ಸ್ಮಾರ್ಟ್ ಸಿಟಿಯಾಗುವಾಗ ನಗರದ ಸೌಂದರ್ಯ ಹೆಚ್ಚಿಸಲು ಸಹಕರಿಸಿ ಎಂದ ಕವಿತಾ ಸನಿಲ್ ಈಗಾಗಲೇ ನಗರದಲ್ಲಿ 208 ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಈ ಚೀಟಿದಾರರು ತಮಗೆ ಮೀಸಲಿಟ್ಟ ಜಾಗದಲ್ಲಿ ವ್ಯಾಪಾರ ಮಾಡಬೇಕು ಎಂದರು.

ಹೆಚ್ಚಿನ ಬೀದಿ ಬದಿ ವ್ಯಾಪಾರಿಗಳು ಹೊರ ಜಿಲ್ಲೆಯವರಾಗಿದ್ದಾರೆ. ಕೆಲವರು ಕಾರಿನಲ್ಲಿ ಓಡಾಡುವಷ್ಟರ ಮಟ್ಟಿಗೆ ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಯಾವುದೇ ತೆರಿಗೆಯನ್ನೂ ಪಾವತಿಸದ ಬೀದಿ ಬದಿ ವ್ಯಾಪಾರಿಗಳು ತೆರಿಗೆ ಪಾವತಿಸಿ ವ್ಯಾಪಾರ ಮಾಡುವ ಅಂಗಡಿದಾರರ ಆರ್ಥಿಕತೆಗೂ ಹೊಡೆತ ನೀಡುತ್ತಿದ್ದಾರೆ. ಇದು ಸರಿಯಲ್ಲ. ಕೆಲವರು ಬೀದಿ ಬದಿಯ ನೆಲವನ್ನೂ ಬಾಡಿಗೆಗೆ ನೀಡಿದ ವಿಷಯವೂ ಬೆಳಕಿಗೆ ಬಂದಿದೆ. ಹಾಗಾಗಿ ನಿಯಮ ಮೀರಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕವಿತಾ ಸನಿಲ್ ನುಡಿದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಯಾವುದೇ ನಿಯಮಗಳನ್ನು ಜಾರಿಗೊಳಿಸುವುದು ಮುಖ್ಯವಲ್ಲ. ಅವುಗಳ ಉದ್ದೇಶ ಅರಿತುಕೊಂಡು ಅನುಷ್ಠಾನಗೊಳಿಸುವುದು ಮುಖ್ಯ. ಬೀದಿ ಬದಿ ವ್ಯಾಪಾರಿಗಳು ತಮ್ಮ ಹಕ್ಕುಗಳ ಪಾಲನೆಯ ಜೊತೆಗೆ ಸಾರ್ವಜನಿಕರ ಸ್ವಾಸ್ಥ ಕಾಪಾಡುವುದೂ ಅತ್ಯಗತ್ಯವಾಗಿದೆ ಎಂದರು.

ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು ಮಾತನಾಡಿದರು. ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಪ್ರಸನ್ನ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News