ದ.ಕ.: 3 ವರ್ಷಗಳಲ್ಲಿ 2,672 ಮಹಿಳೆಯರಿಂದ ಕೌಟುಂಬಿಕ ಕಲಹ ದೂರು!

Update: 2017-08-29 11:35 GMT

ಮಂಗಳೂರು, ಆ. 29: ದ.ಕ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 2,672 ಮಹಿಳೆಯರು ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದಂತೆ ಸೂಕ್ತ ರಕ್ಷಣೆ ಹಾಗೂ ಆಶ್ರಯ ಕೋರಿ ವಿವಿಧ ಇಲಾಖೆಗಳಿಗೆ ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ‘ಕೌಟುಂಬಿಕ ಸಾಮರಸ್ಯದ ಬಗ್ಗೆ ದಂಪತಿಗಳಿಗೆ ವಿಚಾರ ಸಂಕಿರಣ’ ದಲ್ಲಿ ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಈ ವಿಷಯವನ್ನು ತಿಳಿಸಿದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ವಯ 571 ಪ್ರಕರಣ, ಸಾಂತ್ವಾನದಲ್ಲಿ 2989 ಪ್ರಕರಣ ಹಾಗೂ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ 306 ಪ್ರಕರಣಗಳು ವದಿಯಾಗಿವೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೇಯರ್ ಕವಿತಾ ಸನಿಲ್ ಮಾತನಾಡಿ, ಗಂಡ-ಹೆಂಡತಿ ಮಧ್ಯೆ ಅನ್ಯೋನ್ಯ ಸಂಬಂಧ, ಪ್ರೀತಿ, ವಿಶ್ವಾಸದಿಂದ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಾಗ ಕುಟುಂಬ ಪ್ರೀತಿ ಮೂಡಲು ಸಾಧ್ಯ. ದ.ಕ. ಜಿಲ್ಲೆಯಲ್ಲಿ ವಿವಾಹ ವಿಚ್ಚೇದನ ಪ್ರಕರಣಗಳು ಕಡಿಮೆ ಮಾಡುವ ನೆಲೆಯಲ್ಲಿ ಜಾಗೃತಿ ವುೂಡುವ ಕೆಲಸ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸುದೀರ್ಘ ವರ್ಷಗಳ ದಾಂಪತ್ಯ ಜೀವನ ನಿರ್ವಹಿಸುತ್ತಿರುವ ದಂಪತಿಗಳನ್ನು ಈ ವೇಳೆ ಗೌರವಿಸಲಾಯಿತು. ಲಿಂಕ್ ಮದ್ಯವ್ಯಸನಿಗಳ ಪುನರ್ವಸತಿ ಕೇಂದ್ರದ ಮುಖ್ಯಸ್ಥರಾದ ಲಿಡಿಯಾ ಲೋಬೋ ಹಾಗೂ  ಪ್ರೊಫೆಸರ್ ಶೆರ್ಲಿ ಟಿ.ಬಾಬು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲನಗೌಡ, ಜಿ.ಪಂ.ಸದಸ್ಯರಾದ ಮಮತಾ ಡಿ.ಎಸ್.ಗಟ್ಟಿ, ಶೇಖರ್ ಕುಕ್ಕೇಡಿ, ಮನಪಾ ಸದಸ್ಯೆ ಅಪ್ಪಿ ಮುಂತಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶ ಸುಂದರ ಪೂಜಾರಿ ಸ್ವಾಗತಿಸಿದರು.

ಕುಟುಂಬ ವ್ಯವಸ್ಥೆ ಬಲಿಷ್ಠವಾಗಿದ್ದಾಗ ಸುಸ್ಥಿರ ಸಮಾಜ: ಸಚಿವ ರೈ
ಕುಟುಂಬ ವ್ಯವಸ್ಥೆ ಬಲಿಷ್ಠವಾಗಿದ್ದಾಗ ಸುಸ್ಥಿರ ಸಮಾಜವನ್ನು ಕಾಣಬಹುದಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದರು.

ಭಾರತದಲ್ಲಿ ಕುಟುಂಬ ವ್ಯವಸ್ಥೆ ಬಲಿಷ್ಠವಾಗಿದೆ. ಮಾತ್ರವಲ್ಲದೆ, ಇಲ್ಲಿ ವಿವಾಹ ಸಂಬಂಧವು ತನ್ನದೇ ಆದ ವಿಶೇಷತೆ ಹಾಗೂ ಮೌಲ್ಯಗಳನ್ನು ಪಡೆದು ಕೊಂಡಿದೆ. ಇದರಿಂದ ದಾಂಪತ್ಯ ಸಾಮರಸ್ಯ ಯಶಸ್ಸು ಕಂಡಿದೆ. ಆದರೆ ಯುರೋಪಿಯನ್ ದೇಶದಲ್ಲಿ ವಿಚ್ಚೇದನ ಪ್ರಕರಣಗಳು ಯಥೇಚ್ಚವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News