ಅಂತರ್ಜಾಲ ಆಟಗಳ ಬಗ್ಗೆ ಯುವಜನತೆ ಜಾಗೃತರಾಗಿ-ಡಾ.ಎಂ.ಎಸ್.ಗೋವಿಂದೇಗೌಡ

Update: 2017-08-29 16:00 GMT

ಪುತ್ತೂರು, ಆ. 29: ವ್ಯಕ್ತಿಯೊಬ್ಬನನ್ನು ನಾನೇನೂ ಅಲ್ಲ ಎನ್ನುವ ಮನಸ್ಥಿತಿಗೆ ತಲಪಿಸಿ ಆತ್ಮಹತ್ಯೆಗೆ ಪ್ರಚೋದಿಸುವಂತ ಅಂತರ್ಜಾಲ ಆಟಗಳ ಬಗ್ಗೆ ಯುವಜನತೆ ಜಾಗೃತರಾಗಿರಬೇಕು ಎಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಮಂಗಳವಾರ ನಡೆದ ಬ್ಲೂವೇಲ್ ಚಾಲೆಂಜ್ ಅಂತರ್ಜಾಲ ಆಟದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು.

ಆಧುನಿಕ ವ್ಯವಸ್ಥೆಯಲ್ಲಿ ಒಳಿತು ಕೆಡುಕು ಎರಡೂ ಇದೆ. ಇದನ್ನು ಸರಿಯಾಗಿ ತಿಳಿದು ಬಳಸಿಕೊಳ್ಳಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಮೇಘನ ಅವರು ಮಾತನಾಡಿ 2013ರಲ್ಲಿ ಬ್ಲೂವೇಲ್ ಆಟವು ರಷ್ಯಾದಲ್ಲಿ ಪ್ರಾರಂಭಗೊಂಡಿತು. ಫಿಲಿಪ್ ಬುಡೆಕಿನ್ ಇದರ ಸಂಸ್ಥಾಪಕ ಎಂದು ಹೇಳಿದರು. 50 ದಿನಗಳ ಈ ಆಟದಲ್ಲಿ ದಿನಕ್ಕೊಂದು ಕೆಲಸಗಳನ್ನು ಆಟಗಾರನಿಗೆ ನೀಡಲಾಗುತ್ತದೆ. ಕ್ರೌರ್ಯವನ್ನು ಮೆರೆಯುವಂತಹ ಈ ಆಟದ ಕೊನೆಗೆ ನಾನೂ ಏನೂ ಅಲ್ಲ, ನನ್ನಿಂದೇನೂ ಪ್ರಯೋಜನವಿಲ್ಲ ಎನ್ನುವ ಮನಸ್ಥಿಗೆ ತಲಪುವಂತೆ ಮಾಡಲಾಗುತ್ತದೆ ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗುತ್ತದೆ. ಈಗಾಗಲೇ ಅನೇಕ ಹದಿಹರೆಯದ ಮಕ್ಕಳು ಈ ಆಟಕ್ಕೆ ಬಲಿಯಾಗಿದ್ದು, ಇಂತಹ ಆಟಗಳನ್ನು ಬಹಿಷ್ಕರಿಸಬೇಕಾಗಿದೆ ಎಂದರು. ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುವುದರ ಜತೆಯಲ್ಲಿ ಇಂತಹ ಆಟಗಳ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸುವಂತೆ ಅವರು ವಿನಂತಿಸಿದರು.

ಕಂಪ್ಯೂಟರ್ ಸೈನ್ ವಿಭಾಗ ಮುಖ್ಯಸ್ಥ ಪ್ರೊ.ಮಹೇಶ್‌ಪ್ರಸನ್ನ, ಕಾರ್ಯಕ್ರಮ ಸಂಯೋಜಕ ಪ್ರೊ.ರಾಘವೇಂದ್ರ,.ಟಿ.ಕೆ ಇದ್ದರು. ವಿವಿಧ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News