ನಾಗೂರು ಒಡೆಯರಮಠದಲ್ಲಿ ಶತಮಾನದ ಸ್ಮೃತಿಹಬ್ಬ; ಶತಾಯುಷಿ ಡಾ.ಸದಾನಂದರಿಂದ ಉದ್ಘಾಟನೆ

Update: 2017-08-29 16:52 GMT

ಭಟ್ಕಳ, ಆ. 29: ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಬವುಳಾಡಿ ಮಹಾಲಕ್ಷ್ಮೀ ಹೆಬ್ಬಾರತಿ ಸಭಾವರಣದಲ್ಲಿ ನಡೆದ ಉಳ್ಳೂರು ಮೂಕಾಂಬಿಕೆ ಅಮ್ಮ (ಮೂಕಜ್ಜಿ), ಮೊಗೇರಿ ಗೋಪಾಕೃಷ್ಣ ಅಡಿಗ, ಬಿ. ಎಚ್. ಶ್ರೀಧರ ಅವರ ಶತಮಾನದ ಸ್ಮೃತಿಹಬ್ಬವನ್ನು ಶತಾಯುಷಿ ವೈದ್ಯ ಡಾ. ಸದಾನಂದ ಹೊಸ್ಕೋಟೆ ಉದ್ಘಾಟಿಸಿದರು.

ನಂತರ ನಡೆದ ವಿವಿಧ ಗೋಷ್ಟಿಗಳಲ್ಲಿ ಮಾತನಾಡಿದ ಕವಿ, ಲೇಖಕ ಡಾ. ವಸಂತಕುಮಾರ ಪೆರ್ಲ ನವೋದಯ ಕಾಲದಲ್ಲಿ ಕನ್ನಡ ಕಾವ್ಯ ಕ್ಷೇತ್ರವನ್ನು ಪ್ರವೇಶಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಒಡೆದು ಕಟ್ಟುವ ಪ್ರಕ್ರಿಯೆಯ ಮೂಲಕ ಅದನ್ನು ನವ್ಯದತ್ತ ಹೊರಳಿಸಿದರು. ರೂಪಕ, ಪ್ರತಿಮೆಗಳನ್ನು ತಮ್ಮ ಭಾಷೆಯಾಗಿಸಿಕೊಂಡು ಕನ್ನಡದಲ್ಲಿ ಹೊಸ ಪರಂಪರೆಯನ್ನು ಹುಟ್ಟುಹಾಕಿ ಬೆಳೆಸುವ ಮೂಲಕ ನವಮಾರ್ಗ ಪ್ರವರ್ತಕರೆನಿಸಿದರು ಎಂದು ಹೇಳಿದರು.

ಅವರು ಶತಮಾನದ ಸ್ಮತ ಹಬ್ಬದಲ್ಲಿ ಅಡಿಗತ್ವದ ನಡೆ-ನುಡಿ ಕುರಿತು ಮಾತನಾಡುತ್ತಿದ್ದರು. ಅಡಿಗರು ತಾವು ಬರೆದ ಕೇವಲ 260 ಕವನಗಳ ಮೂಲಕ ಸಮಕಾಲೀನ ಕವಿಗಳನ್ನು ಗಾಢವಾಗಿ ಪ್ರಭಾವಿಸಿದರು. ಮುಂದಿನ ಒಂದು ತಲೆಮಾರಿನ ಕವಿಗಳು ಅಡಿಗತ್ವದ ಪ್ರಭಾವದಿಂದ ಹೊರಬರಲಾಗಲಿಲ್ಲ. ಅವರ ಕಾವ್ಯದ ವಿಶ್ಲೇಷಣೆ, ವಿಮರ್ಶೆ ನಡೆದಷ್ಟು ಇನ್ನಾರದೂ ಆಗಿಲ್ಲ. ಅವರ ಕಾವ್ಯೇತರ ಕೃತಿಗಳೂ ಮಹತ್ವ ಪಡೆದಿವೆ. ಅವರ ಕೃತಿಗಳಲ್ಲಿ ಪ್ರಬುದ್ಧ ರಾಜಕೀಯ ಚಿಂತನೆ, ಸಾಮಾಜಿಕ ವಿಶ್ಲೇಷಣೆ, ಅಧ್ಯಾತ್ಮಿಕ ನೋಟಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಅಡಿಗರ ಸಾಹಿತ್ಯದ ಕುರಿತು ಮಾತನಾಡಿದ ಸಾಗರದ ಉಪನ್ಯಾಸಕ ವಿ. ಗಣೇಶ ಅವರು ಅಡಿಗರನ್ನು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ ಎಂದು ಬಣ್ಣಿಸಿ, ಅವರು ತಮ್ಮ ಕಾವ್ಯದ ಮೂಲಕ ಜೀವಂತವಾಗಿದ್ದಾರೆ ಎಂದರು.

’ಹಾಡಿ, ಮಾತಾಡಿ ಮೂಕಜ್ಜಿ’ ಬಗೆಗೆ ಮಾತನಾಡಿದ ಸಂಶೋಧಕ ಡಾ. ಕನರಾಡಿ ವಾದಿರಾಜ ಭಟ್ ಅನಕ್ಷರಸ್ಥೆಯಾಗಿದ್ದ ಉಳ್ಳೂರು ಮೂಕಾಂಬಿಕೆ ಅಮ್ಮ ನಿಂತಲ್ಲಿ, ಕುಳಿತಲ್ಲಿ ಕಟ್ಟಿ ಹಾಡಿದ ಆಶುಕವನಗಳ ವಿಷಯ ವೈವಿಧ್ಯ, ಭಾಷಾ ಪ್ರೌಢಿಮೆ, ಪ್ರಗತಿಪರ ನಿಲುವು ಅಕ್ಷರ ಲೋಕದ ಅಚ್ಚರಿ. ಅವರ ಹಾಡುಗಳಲ್ಲಿ ಕೆಡುಕಿಗೆ ಪ್ರತಿರೋಧವಿತ್ತು. ಅವು ಮೌಖಿಕ ಸಾಹಿ್ಯದ ಉತ್ಕೃಷ್ಟ ಮಾದರಿ ಎಂದರು.

ಲೇಖಕ ಡಾ. ಶ್ರೀಧರ ಬಳಗಾರ ಮತ್ತು ಭುವನೇಶ್ವರಿ ಹೆಗಡೆ ’ಪ್ರಚಂಡ ಶ್ರೀಧರರು’ ಕುರಿತು ವಿಷಯ ಮಂಡಿಸಿ ಬಿ. ಎಚ್. ಶ್ರೀಧರರ ವ್ಯಕ್ತಿತ್ವ, ಪಾಂಡಿತ್ಯ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅವರು ರಚಿಸಿದ ಕೃತಿಗಳ ಮೇಲೆ ಬೆಳಕು ಚೆಲ್ಲಿದರು. ತಮ್ಮ ನಿಲುವುಗಳ ವಿಚಾರದಲ್ಲಿ ಸಂವಾದ ಮತ್ತು ರಾಜಿಗೊಪ್ಪದ ಪ್ರಖರ ಪ್ರಜ್ಞೆಯಿಂದ ಅವರು ಪರಂಪರೆಯ ಕಾವಲುಗಾರನ ಕೆಲಸ ನಿರ್ವಹಿಸಿದರು ಎಂದರು.

ಯು. ರಮೇಶ ವೈದ್ಯ ಸ್ವಾಗತಿಸಿದರು. ಯು. ಸುಬ್ರಹ್ಮಣ್ಯ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಐತಾಳ್ ನಿರೂಪಿಸಿದರು.
ನಂತರ ನಡೆದ ಮುಕ್ತಾಯ ಸಮಾರಂಭದಲ್ಲಿ ಲೇಖಕಿ ವೈದೇಹಿ, ಡಾ. ಎಚ್. ಶಾಂತಾರಾಮ, ಜಯರಾಮ ಅಡಿಗ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News