ಕುಸಿಯುವ ಭೀತಿಯಲ್ಲಿ ಕಂಕನಾಡಿ ಮಾರುಕಟ್ಟೆ

Update: 2017-08-29 17:23 GMT

ಮಂಗಳೂರು, ಆ. 29: ನಗರದ 2ನೆ ಅತೀ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿಗೊಳಗಾಗಿರುವ ಕಂಕನಾಡಿಯ ಮಾರುಕಟ್ಟೆಯು ಕುಸಿಯುವ ಭೀತಿಯಲ್ಲಿದೆ. ಮಳೆಗಾಲದಲ್ಲಂತೂ ಇಲ್ಲಿನ ವ್ಯಾಪಾರಿಗಳು, ಗ್ರಾಹಕರು ಆತಂಕದ ಕ್ಷಣಗಳನ್ನೇ ಎದುರಿಸುತ್ತಿದ್ದಾರೆ. ಈ ಬಗ್ಗೆ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘವು ಮನಪಾ, ಜಿಲ್ಲಾಡಳಿತ, ಸಚಿವರು, ಅಧಿಕಾರಿಗಳು ಹೀಗೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಸುಮಾರು 17 ವರ್ಷದ ಹಿಂದೆ ನಿರ್ಮಾಣಗೊಂಡ ಈ ಮಾರುಕಟ್ಟೆಯ ಕಟ್ಟಡವು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಅಲ್ಲದೆ ಇದನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಕೆಲವು ವರ್ಷದಿಂದ ಕಟ್ಟಡದ ಸೀಲಿಂಗ್‌ನ ಸಿಮೆಂಟ್ ತುಣುಕುಗಳು ಬೀಳುತ್ತಲಿವೆ. ಕಟ್ಟಡದ ಅಲ್ಲಲ್ಲಿ ಪಾಚಿ ಹಿಡಿದಿದ್ದು, ಹುಲ್ಲೂ ಬೆಳೆದಿದೆ. ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲಿಲ್ಲ, ವಿದ್ಯುತ್ ಕೂಡ ಆಗಾಗ ಕೈ ಕೊಡುತ್ತಿದೆ. ಪಾರ್ಕಿಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಹೀಗೆ ಎಲ್ಲಾ ಇಲ್ಲದರ ಮಧ್ಯೆ ಕಂಕನಾಡಿ ಮಾರುಕಟ್ಟೆ ಉಸಿರೆಳೆಯುತ್ತಿದೆ.

ಮೇಲ್ಛಾವಣಿ ನಾದುರಸ್ತಿ: ಮಾರುಕಟ್ಟೆಯ ಮೇಲ್ಛಾವಣಿ ಸೋರುತ್ತಿದೆ. ಬಿರುಸಿನ ಮಳೆ ಸುರಿದರೆ ಕಟ್ಟಡದೊಳಗೆ ಕುಳಿತುಕೊಳ್ಳುವುದು ದುಸ್ತರವಾಗಿದೆ. ಫೈಬರ್ ಶೀಟ್ ಕೂಡ ಸೋರುತ್ತಿದ್ದು, ಮೀನುಗಾರ ಮಹಿಳೆಯರಿಗೆ ಮಳೆನೀರಿನ ಸಿಂಚನವಾಗುತ್ತಿದೆ. ಹಾಗಾಗಿ ಸಂಪೂರ್ಣವಾಗಿ ಈ ಕಟ್ಟಡಕ್ಕೆ ಇಳಿಜಾರಿನ ಫೈಬರ್ ಶೀಟ್ ಅಳವಡಿಸಬೇಕು ಎಂದು ಇಲ್ಲಿನ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಕೈ ಕೊಡುವ ವಿದ್ಯುತ್: ಮಾರುಕಟ್ಟೆಯ ಟ್ರಾನ್ಸ್‌ಫಾರ್ಮರ್ ಅಸುರಕ್ಷಿತ ಸ್ಥಳದಲ್ಲಿದೆ. ಸ್ವತ: ಮೆಸ್ಕಾಂ ನೌಕರರು ಟ್ರಾನ್ಸ್‌ಫಾರ್ಮರ್ ಬಳಿ ಹೋಗಲು ಅಸಾಧ್ಯ ಎಂಬಂಥ ಸ್ಥಿತಿ ಇದೆ. ಅಲ್ಲದೆ ವಿದ್ಯುತ್ ಕೂಡ ಆಗಾಗ ಕೈ ಕೊಡುತ್ತಿದೆ. ವಿದ್ಯುತ್ ಬಿಲ್ ಕೂಡಾ ಸರಿಯಾಗಿ ಬರುತ್ತಿಲ್ಲ. ಅನಿಯಮಿತವಾಗಿ ಬರುವ ಕಾರಣ ವ್ಯಾಪಾರಿಗಳಿಗೆ ಹೊರೆಯಾಗಿ ಪರಿಣಮಿಸುತ್ತಿದೆ.

ಶೌಚಾಲಯದ ಅವ್ಯವಸ್ಥೆ: ಇಲ್ಲಿನ ಶೌಚಾಲಯ ಕೂಡ ಅವ್ಯವಸ್ಥೆಯ ಆಗರವಾಗಿದೆ. ಶುಚಿತ್ವ ಎಂಬುದು ಇಲ್ಲಿ ಕಾಣುತ್ತಿಲ್ಲ. ಅಲ್ಲದೆ ಕೆಲವೊಮ್ಮೆ ನೀರು ಕೂಡ ಇರುವುದಿಲ್ಲ. ಹಾಗಾಗಿ ಶೌಚಾಲಯ ಇದ್ದೂ ಇಲ್ಲದಂತಿದೆ.

ಅಸಮರ್ಪಕ ಪಾರ್ಕಿಂಗ್: ಪಾರ್ಕಿಂಗ್ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಮಳೆನೀರು ಮಾರುಕಟ್ಟೆಯೊಳಗೆ ನುಗ್ಗುವ ಕಾರಣ ಪಾರ್ಕಿಂಗ್ ಸ್ಥಳದಲ್ಲಿ ಕೆಸರು ನೀರು ನಿಂತಿರುತ್ತದೆ. ಪಾರ್ಕಿಂಗ್ ಸ್ಥಳವು ಸದಾ ಕಗ್ಗತ್ತಲಿನಿಂದ ಕೂಡಿದೆ. ಬೆಳಕಿಲ್ಲದ ಕಾರಣ ಹೊಸಬರು ಇಲ್ಲಿ ಪಾರ್ಕಿಂಗ್ ಮಾಡುವುದು ಕನಸಿನ ಮಾತಾಗಿದೆ.

ಒಟ್ಟಿನಲ್ಲಿ ಕಂಕನಾಡಿ ಮಾರುಕಟ್ಟೆಯು ‘ಶುಚಿತ್ವವಿಲ್ಲ, ಕಟ್ಟಡ ಸರಿಯಿಲ್ಲ, ನೀರಿಲ್ಲ, ವಿದ್ಯುತ್ ಇಲ್ಲ... ಹೀಗೆ ‘ಇಲ್ಲ’ಗಳಿಂದ ಕೂಡಿದ್ದು, ಒಂದೋ ನವೀಕರಣ ಅಥವಾ ಪುನ: ನಿರ್ಮಾಣ ಮಾಡುವ ಅಗತ್ಯವಿದೆ.

ಸ್ಮಾರ್ಟ್ ಮಾರ್ಕೆಟ್
ಮಂಗಳೂರು ಸ್ಮಾರ್ಟ್ ಸಿಟಿಯಾಗುವಾಗ ಮಾರುಕಟ್ಟೆ ಕೂಡ ಸ್ಮಾರ್ಟ್ ಆಗಬೇಕು. ಅದಕ್ಕಾಗಿ ಸುಮಾರು 40 ಕೋ.ರೂ. ವೆಚ್ಚದಲ್ಲಿ ಕೆಯುಐಎಫ್‌ಡಿಸಿ ಮೂಲಕ ಇಲ್ಲಿ ಸ್ಮಾರ್ಟ್ ಆದ ಹೈಟೆಕ್ ಮಾರ್ಕೆಟ್ ತಲೆ ಎತ್ತಲಿದೆ. ಅದಕ್ಕೂ ಮುನ್ನ ಇಲ್ಲಿನ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ.
- ನವೀನ್ ಡಿಸೋಜ, ಕಾರ್ಪೋರೇಟರ್, ಬೆಂದೂರ್ ವಾರ್ಡ್

ಪರ್ಯಾಯ ವ್ಯವಸ್ಥೆಯ ಬಳಿಕ ಹೊಸ ಮಾರುಕಟ್ಟೆ ನಿರ್ಮಿಸಲಿ

ಕಳೆದ ಐದಾರು ವರ್ಷದಿಂದ ನಮ್ಮ ಸಂಘದ ನಿಯೋಗವು ಈ ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದಿದ್ದೇವೆ. ಆದರೆ, ಪ್ರಯೋಜನವಾಗಲಿಲ್ಲ. ಕಾಲಕಾಲಕ್ಕೆ ನಿರ್ವಹಣೆ ಮಾಡಿದ್ದರೆ ಈ ಮಾರುಕಟ್ಟೆಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಇದೀಗ ಇದನ್ನು ಕೆಡವಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಮನಪಾ ಮುಂದಾಗಿದೆ. ಸಂತೋಷದ ವಿಷಯ. ಆದರೆ, ನಮಗೆ ಪರ್ಯಾಯ ವ್ಯವಸ್ಥೆ ಮಾಡದೆ ಹೊಸ ಮಾರುಕಟ್ಟೆ ನಿರ್ಮಿಸುವುದು ಬೇಡ.

- ಅಲಿ ಹಸನ್, ಅಧ್ಯಕ್ಷರು ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ

ಆರೋಗ್ಯಾಧಿಕಾರಿ ಇತ್ತ ತಲೆ ಹಾಕಿಲ್ಲ
ಮಾರುಕಟ್ಟೆಯ ಕಟ್ಟಡ ದುಸ್ಥಿತಿಯಲ್ಲಿದ್ದು, ಸೋರಿಕೆಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಸದ್ಯ ದುರಸ್ತಿ ಮಾಡಿಕೊಟ್ಟರೆ ನಾವು ನಮ್ಮ ಪಾಡಿಗೆ ವ್ಯಾಪಾರ ಮಾಡಿಕೊಂಡಿರುತ್ತೇವೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಕಳೆದ ಹಲವು ವರ್ಷದಿಂದ ನಾವು ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಯಾರೂ ಸ್ಪಂದಿಸುತ್ತಿಲ್ಲ. ಕನಿಷ್ಠ ಆರೋಗ್ಯಾಧಿಕಾರಿ ಬಂದು ಸಮಸ್ಯೆ ಏನು, ಶುಚಿತ್ವ ಹೇಗಿದೆ? ಎಂದು ತಿಳಿದುಕೊಂಡಿದ್ದರೆ ಅರ್ಧಕ್ಕರ್ಧ ಸಮಸ್ಯೆಗೆ ಪರಿಹಾರ ಸಿಕ್ಕಂತೆ. ಇನ್ನು ಮಾರುಕಟ್ಟೆಯ 6 ಗೇಟುಗಳ ಪೈಕಿ 5 ತುಕ್ಕು ಹಿಡಿದಿದೆ. ರಾತ್ರಿ ಕಾವಲುಗಾರನಿದ್ದರೂ ಕೂಡ ದರೋಡೆಕೋರರಿಗೆ ತುಕ್ಕು ಹಿಡಿದ ಗೇಟು ಮುರಿಯಲು ಕಷ್ಟವೇನೂ ಅಲ್ಲ. ನಮಗೆ ಹೊಸ ಕಟ್ಟಡದ ಬದಲು ದುರಸ್ತಿ ಮಾಡಿಕೊಟ್ಟರೆ ಸಾಕು. ಇನ್ನು ಹೊಸ ಕಟ್ಟಡ ನಿರ್ಮಿಸಲು ಮುಂದಾದರೆ ಕನಿಷ್ಠ 5-6ವರ್ಷ ಇಲ್ಲಿನ ವ್ಯಾಪಾರಿಗಳು ಬೀದಿ ಪಾಲಾದಾರು.
- ರೋಶನ್ ಪತ್ರಾವೋ, ಪ್ರಧಾನ ಕಾರ್ಯದರ್ಶಿ, ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ

ಸಕಾಲಕ್ಕೆ ನಿರ್ವಹಣೆ ಮಾಡಲಿ
ಮಾರುಕಟ್ಟೆಯನ್ನು ಸಕಾಲಕ್ಕೆ ನಿರ್ವಹಣೆ ಮಾಡಿದರೆ ಇಲ್ಲಿ ಸಮಸ್ಯೆಯೇ ಇಲ್ಲ. ನಾವು ಸಮಸ್ಯೆಯನ್ನು ಮುಂದಿಟ್ಟು ಕೆಲವು ಬೇಡಿಕೆ ಮಂಡಿಸಿ ಹಲವು ವರ್ಷವಾದರೂ ಪ್ರಯೋಜನವಾಗಿಲ್ಲ. ಹೆಚ್ಚಿನವರಿಗೆ ಇಲ್ಲೊಂದು ಮಾರುಕಟ್ಟೆ ಇದೆ ಎಂದು ಗೊತ್ತಿಲ್ಲ. ಇದಕ್ಕೆ ಕಟ್ಟಡದ ವಿನ್ಯಾಸವೇ ಕಾರಣ. ಎಲ್ಲರಿಗೂ ಕಾಣುವ ಹಾಗೆ ಮಾರುಕಟ್ಟೆ ನಿರ್ಮಿಸಿದ್ದರೆ ಇಲ್ಲಿನ ವ್ಯಾಪಾರಿಗಳಿಗೆ ಪ್ರಯೋಜನವಾಗುತ್ತಿತ್ತು. ಈಗ ಇಲ್ಲಿನ ವ್ಯಾಪಾರಿಗಳ ಬದಲು ಬೀದಿ ಬದಿ ವ್ಯಾಪಾರಿಗಳು ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. 
- ವಸಂತ ಟೈಲರ್, ಕೋಶಾಧಿಕಾರಿ, ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ

ಶುಚಿತ್ವಕ್ಕೆ ಆದ್ಯತೆ ನೀಡಿ
ಮಾರುಕಟ್ಟೆಯ ತಳ ಮತ್ತು ಮೊದಲ ಅಂತಸ್ತು ವ್ಯಾಪಾರಿಗಳಿಗೆ ಮಾತ್ರವಲ್ಲ ಗ್ರಾಹಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿನ ಅಂಗಡಿ ಕೋಣೆಗಳು ಕೂಡ ತೀರಾ ಸಣ್ಣದಾಗಿದೆ. ಮಾಂಸ, ತರಕಾರಿ ತ್ಯಾಜ್ಯಗಳು ಎಲ್ಲೆಂದರಲ್ಲಿ ಚೆಲ್ಲಲಾಗುತ್ತದೆ. ಅದನ್ನು ಸರಿಯಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಮೀನಿನ ತ್ಯಾಜ್ಯ ನೀರು ಕೂಡ ಸಮರ್ಪಕವಾಗಿ ಹರಿಯುತ್ತಿಲ್ಲ. ಒಳಚರಂಡಿಯಲ್ಲಿ ತ್ಯಾಜ್ಯ ವಸ್ತು-ನೀರು ತುಂಬಿದೆ. ಮಳೆಗಾಲದಲ್ಲಂತೂ ಮಾರುಕಟ್ಟೆಯೊಳಗೆ ಕಾಲಿಡಲು ಅಸಾಧ್ಯವಾಗಿದೆ.

- ನಿಯಾಝ್, ಮಂಗಳೂರು, ಗ್ರಾಹಕರು

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News