ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆ: ಪೌರಕಾರ್ಮಿಕರ ನೇಮಕಕ್ಕೆ ನಿರ್ಣಯ

Update: 2017-08-29 17:27 GMT

ಉಳ್ಳಾಲ, ಆ. 29: ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ನಡೆದಿದ್ದು, ಸಭೆಯಲ್ಲಿ ಉಳ್ಳಾಲದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಉಳ್ಳಾಲ ನಗರಸಭೆಯಿಂದಲೇ ಪೌರ ಕಾರ್ಮಿಕರನ್ನು ನೇಮಿಸಿ ತ್ಯಾಜ್ಯ ವಿಲೇವಾರಿಯನ್ನು ನಡೆಸಲು ಎಲ್ಲರ ಒಮ್ಮತದಂತೆ ನಿರ್ಣಯ ಕೈಗೊಳ್ಳಲಾಯಿತು.

ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೇನ್ ಕುಂಞಿಮೋನು ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ ಕಳೆದ ನಾಲ್ಕು ತಿಂಗಳಿನಿಂದ ಕಸ ವಿಲೇವಾರಿಯಲ್ಲಿ ಗುತ್ತಿಗೆದಾರರು ವಿಫಲರಾಗಿದ್ದು, ಗುತ್ತಿಗೆದಾರರ ಬದಲು ಇರುವ ಪೌರಾಯುಕ್ತ ಕಾರ್ಮಿಕರನ್ನು ಬಳಸಿಕೊಂಡು ಹಿಂದೆ ಉಳ್ಳಾಲ ನಗರಸಭೆಯಲ್ಲಿ ಇದ್ದ ಮಾದರಿಯಲ್ಲೆ ಕಸವನ್ನು ವಿಲೇವಾರಿ ನಡೆಸುವ ಅಗತ್ಯವಿದ್ದು ಇದಕ್ಕೆ ಸಮಾನ್ಯ ಸಭೆ ನಿರ್ಣಯ ಅಂಗೀಕಾರ ವಾಡಿದರೆ ಮಾತ್ರ ಸಾಧ್ಯ ಎಂದರು.

ಸದಸ್ಯ ಅಶ್ರಫ್ ಬಾವಾ ಕೋಡಿ ಕಸ ವಿಲೇವಾರಿಗೆ ಬೇಕಾದರೆ ವಾಹನಗಳು ಇದ್ದರೂ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ನಡೆಸಲು ವಿಫಲವಾಗಿದೆ. ಅದರಲ್ಲೂ ಗುತ್ತಿಗೆದಾರ ಫಕೀರಪ್ಪ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾಯಿಗಳು ತ್ಯಾಜ್ಯವನ್ನು ಹಿಡಿದು ಓಡುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಬೀಳುತ್ತಿದ್ದು, ಜನರಿಂದ ಶುಲ್ಕ ಪಡೆದು ತ್ಯಾಜ್ಯ ವಿಲೇವಾರಿಯಾಗದೆ ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದರು.

ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮೂರು ಬಾರಿ ಟೆಂಡರ್ ಆಗಿದೆ. ಟೆಂಡರ್‌ನಲ್ಲಿ ಒಬ್ಬರೇ ಭಾಗವಹಿಸಿದ್ದ ರಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಪ್ರಸ್ತುತ ಟೆಂಡರ್ ಕರೆಯಲು ಆವಕಾಶವಿಲ್ಲ. ಹಿಂದೆ ಇದ್ದ ಗುತ್ತಿಗೆದಾರರನ್ನು ಮುಂದುವರೆಸುತ್ತಿದ್ದು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿರದ ಹಿನ್ನಲೆಯಲ್ಲಿ ನಗರ ಸಭೆಯಿಂದಲೇ ಪೌರ ಕಾರ್ಮಿಕರನ್ನು ನೇಮಿಸಿ ತ್ಯಾಜ್ಯ ವಿಲೇವಾರಿಯನ್ನು ಪ್ರಾಯೋಗಿಕವಾಗಿ ನಡೆಸಬಹುದು ಎಂದರು.

ಆರೋಗ್ಯ ಸಹಾಯಕ ಅಧಿಕಾರಿ ಜಯಶಂಕರ್ ಮಾತನಾಡಿ ತ್ಯಾಜ್ಯ ವಿಲೇವಾರಿಗೆ ಸಂಬಂಸಿದಂತೆ ಸಪೌರಾಯುಕ್ತ ನಿರ್ದೇಶನಾಲಯದ ಆದೇಶದಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು. ಸಹಾಯಕ ಆರೋಗ್ಯ ಅಧಿಕಾರಿ ರಾಜೇಶ್ ಅದಕ್ಕೆ ದನಿಗೂಡಿಸಿದರು.

ಈ ವಿಚಾರದಲ್ಲಿ ಕೌನ್ಸಿಲರ್ ಮಹಮ್ಮದ್ ಮುಕ್ಕಚ್ಚೇರಿ ಮಾತನಾಡಿ ಕಾನೂನಿನ ತೊಡಕು ಬಾರದಂತೆ ಕಾರ್ಯ ನಿರ್ವಹಿಸಬೇಕು ಮತ್ತು ಪೌರಕಾರ್ಮಿಕರಿಗೆ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮಾಡಿದಾಗ ಕಾರ್ಮಿಕರ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದರು. ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ ಅಸಮರ್ಪಕ ತ್ಯಾಜ್ಯ ನಿರ್ವಹಣೆಯ ಬಗ್ಗೆ ಈಗಾಗಲೇ ಗುತ್ತಿಗೆದಾರರಿಗೆ 6 ನೋಟಿಸ್ ಜಾರಿ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಹಣ ಪಾವತಿ ಮಾಡುವುದನ್ನು ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಈಗಿರುವ ಪೌರ ಕಾರ್ಮಿಕರನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಸ್ವಚ್ಛ ಉಳ್ಳಾಲಕ್ಕೆ ಆದ್ಯತೆ ನೀಡಲಾಗುವುದು ಎಂದರು.

ವಿದ್ಯುತ್ ದಾರಿ ದೀಪ ಕಂಬದ ಕಾಮಗಾರಿ ಕಳೆದ ಹಲವು ವರ್ಷಗಳಿಂದ ನಡೆದಿಲ್ಲ. ಶೀಘ್ರವೇ ಕಾಮಗಾರಿ ನಡೆಸಿ ದಾರಿದೀಪ ವಿಸ್ತರಣೆ ನಡೆಯಬೇಕು ಎಂದು ಸದಸ್ಯ ಬಾಝಿಲ್ ಡಿ.ಸೋಜ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ದಯಾನಂದ್ ಮಾತನಾಡಿ ವಿದ್ಯುತ್ ದಾರಿದೀಪ ವಿಸ್ತರಣೆಗೆ ಸಂಬಂಧಿಸಿದಂತೆ ಹಣ ಪಾವತಿಯಾದ ಕೂಡಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಮಾಡಲಾಗುವುದು. ಜಿಎಸ್‌ಟಿಯನ್ನು ಸೇರಿಸದೇ ಇದ್ದ ಕಾರಣ ವಿಳಂಬವಾಗಿದ್ದು ಇದಕ್ಕೆ ನಗರಸಭೆ ಸ್ಪಂದಿಸಿದ್ದು, ದಾರಿದೀಪ ವಿಸ್ತರಣೆ ಕಾರ್ಯ ನಡೆಯಲಿದೆ ಎಂದರು.

ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವ ವಿದ್ಯುತ್ ದಾರಿದೀಪ ವಿಸ್ತರಣೆಗೆ ಸಂಬಂಧಿಸಿದಂತೆ ಮೆಸ್ಕಾಂಗೆ ಬಿಡುಗಡೆಯಾಗಿರುವ ಹಣವನ್ನು ಹಂತ ಹಂತವಾಗಿ ನೀಡುತ್ತಿದ್ದು, ಮಂಗಳವಾರವೂ ಉಳಿದ ಹಣವನ್ನು ಚೆಕ್ ಮೂಲಕ ನೀಡಿದೆ, ಈಗಾಗಲೇ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಉಳ್ಳಾಲ ಗ್ರಂಥಾಲಯ ದುರಸ್ತಿಗೆ ತಾತ್ಕಾಲಿಕ ಅನುದಾನ ನೀಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಉಳ್ಳಾಲ ನಗರಸಭೆಯ ಎದುರು ನೂತನವಾಗಿ ನಿರ್ಮಾಣಗೊಂಡ ರಂಗ ಮಂದಿರಕ್ಕೆ ಸಮಿತಿ ರಚನೆ ಮಾಡಿ ಬಾಡಿಗೆ ನಿಗದಿ, ಘನ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಉಳಿಕೆ ಮೊತ್ತಕ್ಕೆ ಬದಲಿ ಕ್ರಿಯಾ ಯೋಜನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದು ಆನುಮೋದನೆಯನ್ನು ನೀಡಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೆಎಂಎಎಸ್ ಅಧಿಕಾರಿ ಮಂಜುನಾಥ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News