ಕಾಪು: ಆರೋಗ್ಯ ಕೇಂದ್ರ ಮೇಲ್ದರ್ಜೆಗೆ

Update: 2017-08-30 17:22 GMT

ಕಾಪು, ಆ. 30: ಕಾಪು ತಾಲೂಕಾಗಿ ಘೋಷಣೆಯಾಗಿರುವುದರಿಂದ ಕಾಪು ಕೇಂದ್ರ ಭಾಗದಲ್ಲಿರುವ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಲಿದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಾಪುವಿನಲ್ಲಿ ಹಿಂದೆಯೇ ಸಮುದಾಯ ಆರೋಗ್ಯ ಕೇಂದ್ರವಾಗಬೇಕಿತ್ತು. ಇದೀಗ ಒಂದು ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ ಎಂದರು.

ಕಾಪು ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸರಿಯಾದ ಸಿಬ್ಬಂದಿಯಿಲ್ಲ, ಸಿಬ್ಬಂದಿಗೆ ಸರಿಯಾಗಿ ವೇತನವೂ ಪಾವತಿಯಾಗಿಲ್ಲ ಎಂದು ವಿರೋಧ ಪಕ್ಷದ ಸದಸ್ಯ ಕಿರಣ್ ಆಳ್ವ ಗಮನ ಸೆಳೆದರು. ಇದಕ್ಕುತ್ತರಿಸಿದ ಸೊರಕೆ, ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಲಾಗುವುದು. ಎಲ್ಲೆಡೆ ವೈದ್ಯರ ಕೊರತೆ ಇದೆ. ಸರಕಾರ ವೈದ್ಯರ ನೇಮಕಕ್ಕೆ ಚಾಲನೆ ನೀಡಿದೆ ಎಂದರು.

ಪಾದಚಾರಿ ಮಾರ್ಗ: ಕಾಪು ಪೇಟೆ, ರಾಷ್ಟ್ರೀಯ ಹೆದ್ದಾರಿ 66 ರಿಂದ ಪೊಲಿಪು, ಹೊಸ ಮಾರಿಗುಡಿಯಿಂದ ಬೀಚ್ ರಸ್ತೆ ವಿಸ್ತರಿಸಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ರೂ. 5 ಕೋಟಿ ಅನುದಾನ ಮಂಜೂರಾಗಿದೆ. ಕಾಪು ಪುರಸಭಾ ವ್ಯಾಪ್ತಿಯ ಹೊಸ ರಸ್ತೆಗಳನ್ನು ವಿಸ್ತರಿಸಲಾಗುವುದು. ಪುರಸಭೆಗೆ ರೂ. 10 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು. ಸಮಗ್ರ ಒಳಚರಂಡಿ ನಿರ್ಮಾಣಕ್ಕಾಗಿ ರೂ. 60 ಕೋಟಿಯ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ ಎಂದ ಅವರು, ಮಣಿಪುರ ಹೊಳೆಯಿಂದ ಕಾಪು ಪುರಸಭಾ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರು ಪೂರೈಸಲು ರೂ. 70 ಕೋಟಿಯ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ ಎಂದು ಸೊರಕೆ ಹೇಳಿದರು.

ಅವೈಜ್ಞಾನಿಕವಾಗಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಮಾಡಿರುವ ಪರಿಣಾಮ ಈಗ ಮತ್ತೆ ಹೆಚ್ಚುವರಿಯಾಗಿ ಒಳಚರಂಡಿ ಮಂಡಳಿಗೆ ಹಣ ನೀಡುವುಕ್ಕೆ ಪುರಸಭೆ ಆಡಳಿತ ಬಾಧ್ಯವಾಗುವುದಿಲ್ಲವೇ. ಕಾಮಗಾರಿಯನ್ನು ತಜ್ಞರ ತಂಡದಿಂದ ಪರಿಶೀಲನೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಒತ್ತಾಯಿಸಿದರು.

ಇದಕ್ಕುತ್ತರಿಸಿದ ಸೊರಕೆ, ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ವಿಶೇಷ ಮುತುವರ್ಜಿಯಿಂದ ಕೊಳಚೆನೀರಿನ ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ರೂ. 3 ಕೋಟಿ ಅನುದಾನ ನೀಡಿದ್ದೆ. ಆದರೆ ಘಟಕ ನಿರ್ಮಾಣಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರಿಂದ ಅದು ವಿಳಂಬವಾಗಿ ಯೋಜನಾ ವೆಚ್ಚ ಹೆಚ್ಚಾಗಿದೆ. ಈಗ ಹೆಚ್ಚುವರಿಯಾಗಿ ಅಗತ್ಯವಿರುವ ರೂ. 2.3 ಕೋಟಿ ಅನುದಾನವನ್ನು ಜಲಮಂಡಳಿ ಭರಿಸಲಿದೆ ಎಂದು ಭರವಸೆ ನೀಡಿದರು.

ಕಾಪು ಪೇಟೆಯಲ್ಲಿ ಯಾವುದೇ ಬ್ಯಾನರ್ ಅಳವಡಿಸದಂತೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಪುರಸಭೆ ಗೊತ್ತು ಪಡಿಸಿದ ಸ್ಥಳದಲ್ಲಿಯೇ ಬ್ಯಾನರ್ ಅಳವಡಿಸಬೇಕು. ಹಸಿ ಮತ್ತು ಒಣ ಕಸ ಸಂಗ್ರಹಕ್ಕಾಗಿ ಪುರಸಭಾ ವ್ಯಾಪ್ತಿಯ ಮನೆಗಳು ಮತು ವಾಣಿಜ್ಯ ಮಳಿಗೆಗಳಿಗೆ 7,850 ಹಸಿರು ಹಾಗೂ ಕೆಂಪು ಬಕೆಟ್‌ಗಳನ್ನು ವಿತರಿಸಲಾಗುವುದು. ಎರಡು ತಿಂಗಳೊಳಗೆ ಕಾಪು ರುಧ್ರಭೂಮಿ ಸಮೀಪದಲ್ಲಿ ಶೇಖರಿಸಿರುವ ಕಸವನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ಹೇಳಿದರು. ಪುರಸಭೆ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News