ಕೊಳ್ತಿಗೆ: ಸೌಹಾರ್ದ ಗಣೇಶೋತ್ಸವ

Update: 2017-08-31 14:37 GMT

ಪುತ್ತೂರು, ಆ. 31: ಇಲ್ಲಿನ ಕೊಳ್ತಿಗೆ ಗ್ರಾಮದ ಮೊಗಪ್ಪೆ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಬಳಿಯಲ್ಲಿ ಸೌಹಾರ್ದ ಸಮಿತಿ ಕೊಳ್ತಿಗೆ ಇದರ ವತಿಯಿಂದ ಸೌಹಾರ್ದ ಗಣೇಶೋತ್ಸವ 3 ದಿನಗಳ ಕಾಲ ನಡೆಯಿತು. ಕಾರ್ಯಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಧರ್ಮಗುರುಗಳು ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಿದ್ದರು.

 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂಬ್ರ ಕೆಐಸಿ ಪ್ರಾಂಶುಪಾಲ ಅನೀಸ್ ಕೌಸರಿ ಮಾತನಾಡಿ ಧರ್ಮಗ್ರಂಥಗಳಲ್ಲಿ ಯಾರಿಗೂ ನೋವು ಕೊಡುವುದನ್ನು ಹೇಳಿಲ್ಲ. ಎಲ್ಲಾ ಧರ್ಮದವರು ಒಟ್ಟಾಗಿ ಬದುಕಿದಾಗ ಮನುಷ್ಯ ಜೀವನಕ್ಕೆ ಅರ್ಥ ಬರುತ್ತದೆ ಎಂದರು. ಚಲನ ಚಿತ್ರ ನಟಿ ಅನುಷ್ಕಾ ಹೆಗ್ಡೆ ಮಾತನಾಡಿ ಎಲ್ಲಾ ಧರ್ಮದವರು ಅಣ್ಣ ತಮ್ಮಂದಿರಂತೆ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತನಗೆ ಅವಕಾಶ ಸಿಕ್ಕಿರುವುದು ಪುಣ್ಯದಾಯಕ ನಿಜವಾದ ಮನುಷ್ಯತ್ವ ಇಲ್ಲಿದೆ ಎಂದರು.

ಪುತ್ತೂರು ಸುದಾನ ಚರ್ಚ್‌ನ ಧರ್ಮಗುರು ರೆ. ವಿಜಯ ಹಾರ್ವಿನ್ ಮಾತನಾಡಿ ಇಂತಹ ಸಮಿತಿಗಳಿಂದ ಸೌಹಾರ್ದತೆಗೆ ಎಂದೂ ಕುಂದು ಬಾರದು. ಸಮಿತಿಯ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಕುಂಬ್ರ ಕೆಐಸಿ ಸಂಚಾಲಕ ಕೆ.ಆರ್. ಹುಸೈನ್ ದಾರಿಮಿ ಮಾತನಾಡಿ ಎಲ್ಲಾ ಧರ್ಮದವರು ಒಗ್ಗೂಡಿದರೆ ಯಾವುದೇ ಆಶಾಂತಿ, ಮತೀಯ ಸಾಮರಸ್ಯದ ತೊಡಕು ಉಂಟಾಗದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ಮಾತನಾಡಿ ಕಳೆದ 4 ವರ್ಷಗಳಿಂದ ಸಮಿತಿ ವತಿಯಿಂದ ಸೌಹಾರ್ದತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೌಹಾರ್ದ ಇಫ್ತಾರ್ ಕೂಟ, ಸೌಹಾರ್ದ ದೀಪಾವಳಿ, ಸೌಹಾರ್ದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದರಿಂದ ಊರಿನ ಶಾಂತಿ ನೆಮ್ಮದಿಗೆ ಭಂಗವಾಗುತ್ತದೆ. ಇದನ್ನು ತಡೆಯುವುದೇ ಸಮಿತಿಯ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮುತ್ಸದ್ದಿ ಗಂಗಾಧರ ಗೌಡ ಕೆಮ್ಮಾರ, ಸಮಾಜ ಸೇವಕ ನಾಗಪ್ಪ ರೈ ಕೊಂರ್ಬಡ್ಕ, ಮೊಗಪ್ಪೆ ಮುತ್ತು ಮಾರಿಯಮ್ಮ ದೇವಸ್ಥಾನದ ಸ್ಥಾಪಕ ಅಧ್ಯಕ್ಷ ಎಂ. ಪೆರಿಯ ಸ್ವಾಮಿ ಮತ್ತು ರಾಷ್ಟ್ರೀಯ ಅಥ್ಲೆಟಿಕ್ ಪಟು ರಂಜಿತ್ ಪಿ.ವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಾಯಂಬಾಡಿ ಶ್ರೀ ಶಣ್ಮುಖ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ, ಪಡುಮಲೆ ಮಸೀದಿ ಧರ್ಮಗುರು ಸಂಶುದ್ದೀನ್ ದಾರಿಮಿ, ಪುತ್ತೂರು ತಹಸೀಲ್ದಾರ್ ಅನಂತಶಂಕರ್, ದ.ಕ.ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಸದಸ್ಯ ರಾಮ ಪಾಂಬಾರು. ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಗ್ರಾ.ಪಂ. ಸದಸ್ಯ ಭರತ್ ಕೆಮ್ಮಾರ, ಎಪಿಎಂಸಿ ಮಾಜಿ ಸದಸ್ಯ ಪ್ರಮೋದ್ ಕೆ.ಎ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯದರ್ಶಿ ಸತ್ತಾರ್ ಅಮಲ ವಂದಿಸಿದರು. ಸೌಹಾರ್ದ ಸಮಿತಿ ಕಾರ್ಯಾಧ್ಯಕ್ಷ ಅಮಲ ರಾಮಚಂದ್ರ, ಕಾರ್ಯದರ್ಶಿ ಸತೀಶ್ ಡಿ;ಸೋಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮೂರು ದಿನಗಳ ಕಾಲ ಪೂಜಿಸಲಾದ ಶ್ರೀ ಸೌಹಾರ್ದ ಗಣೇಶನ ಶೋಭಾಯಾತ್ರೆ ಮೊಗಪ್ಪೆಯಿಂದ ಪ್ರಾರಂಭಗೊಂಡು ಪೆರ್ಲಂಪಾಡಿ ತನಕ ಸಾಗಿ ಬಳಿಕ ಇಲ್ಲಿನ ಹೊಳೆಯಲ್ಲಿ ವಿಸರ್ಜನಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News