ತುಳು ಭಾಷೆ, ಅಭಿವೃದ್ಧಿಗೆ ಶ್ರಮಿಸಿದ ವಿದ್ವಾಂಸ, ಬರಹಗಾರ ಡಾ.ಅಮೃತ ಸೋಮೇಶ್ವರಿಗೆ ‘ಭಾಷಾ ಸಮ್ಮಾನ್’ ಗೌರವ

Update: 2017-08-31 16:35 GMT

ಮಂಗಳೂರು, ಆ. 31: ತುಳು ಭಾಷೆ ಮತ್ತು ಅಭಿವೃದ್ಧಿಗಾಗಿ ಅದ್ವಿತೀಯ ಕೊಡುಗೆ ನೀಡಿರುವ ಖ್ಯಾತ ವಿದ್ವಾಂಸ ಮತ್ತು ಬರಹಗಾರ ಡಾ.ಅಮೃತ ಸೋಮೇಶ್ವರ ಅವರು 2016ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿಯ ‘ಭಾಷಾ ಸಮ್ಮಾನ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ಒಂದು ಲಕ್ಷ ನಗದು ಮತ್ತು ತಾಮ್ರದ ಫಲಕ ಒಳಗೊಂಡಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರದಾನ ಮಾಡಲಿದ್ದಾರೆ.

ಪ್ರಸ್ತುತ ಡಾ. ಅಮೃತ ಸೋಮೇಶ್ವರ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ತುಳುಭಾಷೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಡಾ. ಸೋಮೇಶ್ವರ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ತುಳು ಭಾಷೆ ಕುರಿತ ಸಂಶೋಧನೆ ಮತ್ತು ಭಾಷಾ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ತಮ್ಮ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಏಳು ತುಳು ನಾಟಕಗಳನ್ನು ಬರೆದಿರುವ ಡಾ. ಸೋಮೇಶ್ವರ ಅವರು ‘ತಂಬಿಲಾ’ ಮತ್ತು ‘ರಂಗಿತಾ’ ಪ್ರಮುಖ ಕಾವ್ಯ ಸಂಕಲನಗಳು. ಕೇಂದ್ರ ಸಾಹಿತ್ಯ ಆಕಾಡಮಿ 2016ನೆ ರಾಷ್ಟ್ರೀಯ ಮಟ್ಟದ ‘ಭಾಷಾ ಸಮ್ಮಾನ್’ ಪ್ರಶಸ್ತಿಗೆ ಹಿರಿಯ ಜನಪದ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ತಿಳಿಸಿದ್ದಾರೆ.

‘ಸಾಧಕ ಶ್ರೇಷ್ಟರಿಗೆ ಸಂದಿರುವ ರಾಷ್ಟ್ರೀಯ ಗೌರವ’ ತುಳು ಕನ್ನಡ ಜನಪದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಾಧಕ ಶ್ರೇಷ್ಠರಿಗೆ ಸಂದಿರುವ ರಾಷ್ಟ್ರೀಯ ಮಟ್ಟದ ಗೌರವ ಇದಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ ಡಾ. ಸೋಮೇಶ್ವರ ಅವರು ನೀಡಿರುವ ಮಾರ್ಗದರ್ಶನ ಸ್ತುತ್ಯರ್ಹವಾಗಿದೆ. ಈ ಹಿಂದೆ ಬೆಳ್ತಂಗಡಿಯಲ್ಲಿ ಜರಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಿರುವ ಅಮೃತರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದಲೂ ಗೃಹ ಸನ್ಮಾನ ನಡೆಸುವ ಮೂಲಕ ಗೌರಸಲಾಗಿದೆ ಎಂದು ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News