​ಕಾನೂನು ವಿದ್ಯಾರ್ಥಿಯನ್ನು ಅಪಹರಿಸಿ, ಹಲ್ಲೆ

Update: 2017-08-31 17:21 GMT

ಉಡುಪಿ, ಆ.31: ಹಣದ ವ್ಯವಹಾರಕ್ಕೆ ಸಂಬಂಧಿಸಿ ನಗರದ ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಅಪಹರಿಸಿ ಹಲ್ಲೆ ನಡೆಸಿರುವ ಘಟನೆ ಕುಂಜಿಬೆಟ್ಟುನಲ್ಲಿ ಇಂದು ಅಪರಾಹ್ನದ ವೇಳೆ ನಡೆದಿದೆ.

ಅಪರಹಣಕ್ಕೊಳಗಾದವರನ್ನು ವಿಜಯ್ ಕುಮಾರ್ ಶೆಟ್ಟಿ(30) ಎಂದು ಗುರುತಿಸಲಾಗಿದೆ. ಕಾವಾಡಿ ನಿವಾಸಿಯಾಗಿರುವ ಇವರು ಪಣಿಯಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇಂದು ಮಧ್ಯಾಹ್ನ ಕಾಲೇಜಿನ ಬಳಿ ನಡೆದು ಕೊಂಡು ಹೋಗುತ್ತಿದ್ದಾಗ 2 ಕಾರುಗಳಲ್ಲಿ ಬಂದ ತಂಡ ವಿಜಯ್‌ನನ್ನು ಬಲಾತ್ಕಾರವಾಗಿ ಕಾರಿನೊಳಗೆ ಹಾಕಿ ಅಪಹರಿಸಿತು. ಈ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆ ಎಂದು ತಿಳಿದ ಅಪರಹಣಕಾರರು ವಿಜಯ್‌ಗೆ ಹಲ್ಲೆ ನಡೆಸಿ ಕಟಪಾಡಿ -ಶಿರ್ವ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.

ಬೆಳಗಾವಿಯಲ್ಲಿ ಶೇರ್ ವ್ಯವಹಾರ ಹಾಗೂ ಉಡುಪಿಯಲ್ಲಿ ಇತರ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಜಯ್ ಉಡುಪಿಯ ಕವನ್ ಶೆಟ್ಟಿ ಎಂಬವರಿಗೆ ಲಕ್ಷಾಂತರ ರೂ. ಹಣ ನೀಡಲು ಬಾಕಿ ಇತ್ತೆನ್ನಲಾಗಿದೆ. ಇದೇ ಕಾರಣಕ್ಕೆ ವಿವೇಕ್ ಸುವರ್ಣ, ಪ್ರಕಾಶ್ ಮಲ್ಪೆ ಹಾಗೂ ಇತರ 10 ಮಂದಿಯ ತಂಡ ವಿಜಯ್‌ನನ್ನು ಅಪಹರಿಸಿ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಿಸಿರುವ ಆರೋಪಿಗಳು ತಲೆಮರೆಸಿ ಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News