ರಾಜ್ಯ, ರಾಷ್ಟ್ರದ ಏಳಿಗೆಯಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ: ಡಾ. ಅಲೋಶಿಯಸ್ ಪೌಲ್ ಡಿ'ಸೋಜ

Update: 2017-09-01 15:20 GMT

ಪುತ್ತೂರು, ಸೆ.1: ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರತರೆ ಸಮಾಜದಲ್ಲಿ ಉತ್ತಮ ಬದಲಾವಣೆ ಕಾಣಲು ಸಾಧ್ಯ ಎಂಬ ನೆಲೆಯಲ್ಲಿ 75 ವರ್ಷಗಳ ಹಿಂದೆಯೇ ಬಾಲಿಕ ಪೌಢಶಾಲೆಯನ್ನು ಸ್ಥಾಪಿಸಿದ ಫಾ. ಆ್ಯಂಟನಿ ಪತ್ರಾವೋ ಅವರ ದೂರದೃಷ್ಟಿತ್ವ ಮಹತ್ತರವಾದುದು ಎಂದು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ, ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಅಧ್ಯಕ್ಷ  ಡಾ. ಅಲೋಶಿಯಸ್ ಪೌಲ್ ಡಿ'ಸೋಜ ಹೇಳಿದರು.

ತಾಲೂಕಿನ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಅಮೃತ ಮಹೋತ್ಸವದ ಉದ್ಘಾಟನೆ ಹಾಗೂ ಸ್ಮಾರಕ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಬಳಿಕ ಅವರು ಮಾತನಾಡಿದರು. 

ಜನರ ಪ್ರಗತಿಯ ದೃಷ್ಟಿಯಲ್ಲಿ ಹಲವು ಕಡೆಗಳಲ್ಲಿ ಕ್ರೈಸ್ತ ಮಿಷನರಿಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿವೆ. ಇಂದು ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಅಧೀನದಲ್ಲಿ 250 ಕ್ಕೂ ಅಧಿಕ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದು ರಾಜ್ಯ ಮತ್ತು ರಾಷ್ಟ್ರದ ಏಳಿಗೆಗಾಗಿನ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ ಎಂದು ವಿವರಿಸಿದರು.

ಅಮೃತ ಮಹೋತ್ಸವ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ, ಅವರು ಪುತ್ತೂರಿನ ಶೈಕ್ಷಣಿಕ ಮತ್ತು ಆರೋಗ್ಯದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಫಾ. ಪತ್ರಾವೋ ಅವರು ಪುತ್ತೂರು ಅಭಿವೃದ್ಧಿಯ ಪ್ರಥಮ ಶಿಲ್ಪಿಯಾಗಿದ್ದಾರೆ.  ಎಲ್ಲರಿಗೂ ಶಿಕ್ಷಣ ಸಿಗುವಲ್ಲಿ ಮಿಷನರಿಗಳ ಶ್ರಮವನ್ನು ಮರೆಯುವಂತಿಲ್ಲ ಎಂದರು.

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷ ಜಯಂತಿ ಬಲ್ನಾಡು, ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ ಡಾ.ಆಂಟನಿ ಪ್ರಕಾಶ್ ಮೊಂತೆರೋ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ಫಾ.ವಲೇರಿಯನ್ ಮಸ್ಕರೇನಸ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್, ಧರ್ಮಗುರು ಫಾ. ಪ್ರವೀಣ್ ಡಿಸೋಜ, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷೆ ಉಷಾ ಅಂಚನ್, ನಗರಸಭಾ ಸದಸ್ಯ ರಾಜೇಶ್ ಬನ್ನೂರು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆ.ಪಿ. ರೊಡ್ರಿಗಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮೇರಿ ಲೋಬೊ, ಶಾಲಾ ನಾಯಕಿ ದೀಕ್ಷಾ  ಉಪಸ್ಥಿತರಿದ್ದರು.ಶಾಲಾ ಸಂಚಾಲಕ ಫಾ. ಆಲ್ರೆಡ್ ಜೆ.ಪಿಂಟೋ ಸ್ವಾಗತಿಸಿದರು. ಮುಖ್ಯಶಿಕ್ಷಕಿ ರೋಸ್‍ಲಿನ್ ಲೋಬೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಗ್ರೇಸ್‍ಲಿನಾ ಡಿ'ಸೋಜ ವಂದಿಸಿದರು. ಶಿಕ್ಷಕ ಇನಾಸ್ ಗೋನ್ಸಾಲ್ವಿಸ್ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News