​ಕುಂದಾಪುರ: ಸೂರ್ಯನ ಸುತ್ತ ಬೆಳಕಿನ ವರ್ತುಲ

Update: 2017-09-01 15:28 GMT

ಕುಂದಾಪುರ, ಸೆ.1: ಕೋಟೇಶ್ವರದಲ್ಲಿ ಇಂದು ಅಪರಾಹ್ನ ಸೂರ್ಯನ ಸಪ್ತವರ್ಣದ ಸುತ್ತ ವರ್ತುಲವೊಂದು ಕಂಡು ಬಂದ್ದು ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ಭೂಮಿಯಿಂದ ಸುಮಾರು 20 ಸಾವಿರ ಅಡಿಗಳ ಎತ್ತರದಲ್ಲಿ ಶೇಖರಣೆ ಗೊಂಡ ಸಿರ್ರಸ್ ಮೋಡಗಳಲ್ಲಿರುವ ಮಂಜಿನ ತುಣುಕುಗಳ ಮೂಲಕ ಸೂರ್ಯನ ಬೆಳಕಿನ ವಕ್ರೀಭವನದ ಕಾರಣದಿಂದ ಇಂತಹ ವರ್ತುಲ ಮೂಡಿ ನೋಡುಗರನ್ನು ವಿಸ್ಮಯಗೊಳಿಸಿದೆ ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಡಾ.ಎಂ.ಬಿ.ನಟರಾಜ್ ತಿಳಿಸಿದ್ದಾರೆ.

ಅಪರಾಹ್ನದ ವೇಳೆಗೆ ನೆತ್ತಿಯ ಮೇಲಿದ್ದ ಸೂರ್ಯನ ಸುತ್ತ ಸುಂದರವಾದ ರಂಗುರಂಗಿನ ಪ್ರಭಾವಳಿ ಗೋಚರಿಸಿ ಕೋಟೇಶ್ವರದ ಪ್ರಕೃತಿ ಪ್ರಿಯರಿಗೆ ಅಚ್ಚರಿ ಮೂಡಿಸಿತು. ಇದಕ್ಕೆ ವೆಜ್ಞಾನಿಕವಾಗಿ ‘ಹ್ಯಾಲೊ’ ಎನ್ನುತ್ತಾರೆ.

ಸಾಮಾನ್ಯವಾಗಿ ಭೂಮಟ್ಟದಿಂದ ಸುಮಾರು 6-7 ಕಿ.ಮೀ. ಎತ್ತರದ ಮೋಡಗಳಲ್ಲಿ ಮಂಜಿನ ಹರಳುಗಳು (ಐಸ್ ಕ್ರಿಸ್ಟಲ್) ರೂಪುಗೊಳ್ಳುತ್ತವೆ. ಸೂರ್ಯನಿಂದ ಬರುವ ಬೆಳಕು ಈ ಹಿಮ ಹರಳುಗಳ ಮೂಲಕ ಹಾದು ಹೋಗುವಾಗ ಉಂಟಾಗುವ ವಕ್ರೀಭವನ, ವರ್ಣವಿಭಜನೆ ಹಾಗೂ ವಿವರ್ತನೆಯ ಪರಿಣಾಮದಿಂದ ಇದು ನಡೆಯುತ್ತದೆ.

ಪ್ರತಿವರ್ಷ ಮಳೆ ಪ್ರಾರಂಭವಾಗುವ ಮೊದಲು ಅಥವಾ ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಈ ರೀತಿ ಕಾಣುತ್ತದೆ. ಈ ವಿದ್ಯಮಾನವು ಸೂರ್ಯನ ಸುತ್ತ ಹಾಗೂ ಚಂದ್ರನ ಸುತ್ತಲೂ ಕಾಣಿಸಿಕೊಳ್ಳುತ್ತದೆ ಎಂದು ಭೌತಶಾಸ್ತ್ರಜ್ಞರು ಹೇಳುತ್ತಾರೆ.

ನಮ್ಮ ಹಳ್ಳಿಯ ಕೃಷಿಕರು ಇದನ್ನು ಸೂರ್ಯನಿಗೆ ಕೊಡೆ ಹಿಡಿದಿದೆ ಅಥವಾ ಚಂದ್ರನಿಗೆ ಕೊಡೆ ಹಿಡಿದಿದೆ ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಮಳೆ ಆಗಮನವಾಗುತ್ತದೆ ಅಥವಾ ಹೋಗುತ್ತದೆ ಎಂಬುದು ಅವರ ಅನುಭವಜನ್ಯ ನಂಬಿಕೆ. ಈ ವರ್ತುಲವನ್ನು ಸರಿಯಾಗಿ ವೀಕ್ಷಿಸಿದರೆ ಅದರ ಒಳಭಾಗ ಮಬ್ಬಾಗಿದ್ದು ಹೊರಭಾಗ ಪ್ರಕಾಶಮಾನವಾಗಿ ಕಾಣುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News