ಶಿವಪುರ ಕಲ್ಮುಂಡ ಜಲ್ಲಿ ಕ್ರಷರ್ ಸ್ಥಗಿತಕ್ಕೆ ಗ್ರಾಮಸ್ಥರ ಆಗ್ರಹ

Update: 2017-09-01 17:10 GMT

ಶಿವಪುರ, ಸೆ.1: ಪರಿಸರ ಮಾಲಿನ್ಯ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗಿರುವ ಶಿವಪುರ ಗ್ರಾಮದ ಕಲ್ಮುಂಡ ಎಂಬಲ್ಲಿ ನಡೆಯುತ್ತಿರುವ ಮೂಕಾಂಬಿಕಾ ಜಲ್ಲಿ ಕ್ರಷರ್ ಹಾಗೂ ಹೋಲೊ ಬ್ಲಾಕ್ ಇಂಡಸ್ಟ್ರೀಸ್‌ನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸ್ಥಳೀಯ ಯಳಗೋಳಿ, ಕಲ್ಮುಂಡ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಗಣಿಗಾರಿಕೆ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕಳೆದ ಸುಮಾರು 24 ವರ್ಷಗಳಿಂದ ನಡೆಯುತ್ತಿರುವ ಈ ಕ್ರಷರ್‌ನಿಂದಾಗಿ ಗಣಿಗಾರಿಕೆ ನಡೆಯುವ ಆಸುಪಾಸಿನ ಯಳಗೋಳಿ, ಕಲ್ಮುಂಡ, ಕುಂಟೆಬೆಟ್ಟು ಪ್ರದೇಶದ ನೂರಾರು ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳ ಬದುಕಿಗೆ ಸಮಸ್ಯೆ ಎದುರಾಗಿದೆ. ಧೂಳಿನಿಂದ ಸಾಕಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅದರಲ್ಲೂ ಯಳಗೋಳಿ ಗ್ರಾಮದಲ್ಲಿರುವ 40-45 ಮನೆಯವರ ಬದುಕಂತೂ ನಿತ್ಯ ನರಕವಾಗಿದೆ ಎಂದು ಯಳಗೋಳಿ ಗ್ರಾಮಕ್ಕೆ ಭೇಟಿ ನೀಡಿದ ಉಡುಪಿಯ ಪತ್ರಕರ್ತರೆದುರು ಗ್ರಾಮಸ್ಥರು ತಮ್ಮ ಗೋಳನ್ನು ತೋಡಿಕೊಂಡರು.

ಗ್ರಾಮದ ಹೆಚ್ಚಿನೆಲ್ಲಾ ಮನೆಗಳು ಬಿರುಕು ಬಿಟ್ಟು ಗೋಡೆ ಪಂಚಾಂಗಗಳು ಸೀಳಿ ಹೋಗಿವೆ. ಮನೆಯ ಮಾಡಿನ ಮೇಲೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಬೀಳುವ ದೊಡ್ಡ ದೊಡ್ಡ ಕಲ್ಲುಗಳಿಂದಾಗಿ ಮನೆಯವರು ಮಕ್ಕಳು ಮರಿಗಳೊಂದಿಗೆ ಜೀವವನ್ನು ಕೈಯಲ್ಲಿ ಹಿಡುದುಕೊಂಡು ದಿನದೂಡಬೇಕಾಗಿದೆ ಎಂದು ಸ್ಥಳೀಯ ಉದಯ ಶೆಟ್ಟಿ ಆರೋಪಿಸಿದರು.

ಕ್ರಷರ್ ಸಮೀಪದಲ್ಲೇ ಇರುವ ಸುಶೀಲ ಶೆಟ್ಟಿ ಎಂಬವರ ಮನೆ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಬಂದು ಬಿದ್ದ ಮೇಲೆ ಮನೆಯವರು ಹೆದರಿ ಮಳೆಗಾಲಕ್ಕೆ ಮೊದಲೇ ಮನೆಗೆ ಬೀಗ ಹಾಕಿ ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ಅಲ್ಲೇ ಸಮೀಪದಲ್ಲಿರುವ ತಾಯಿಯ ಮನೆಗೆ ಹೋಗಿ ವಾಸವಾಗಿದ್ದಾರೆ. ಹೀಗಾಗಿ ಈ ಮನೆ ಈಗ ಬೀಗ ಹಾಕಿ ಹಾಳುಸುರಿಯುತ್ತಿದೆ ಎಂದು ಪಕ್ಕದ ಮನೆಯ ವಸಂತಿ ಶೆಟ್ಟಿ ವಿವರಿಸಿದರು.

‘ನೋಡಿ ನಮ್ಮ ಮನೆಯ ತುಂಬ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ನಾವು ಬಡವರು ಏನು ಮಾಡಬೇಕು. ಮನೆಯಲ್ಲಿ 35 ವರ್ಷ ಪ್ರಾಯದ ವಿಕಲಚೇತನ ಮಗಳಿದ್ದಾಳೆ. ಅವಳು ಇಲ್ಲಿನ ಶಬ್ದಗಳಿಗೆ ಹೆದರಿ ನಡುಗುತ್ತಾಳೆ. ಅವಳ ಬೇಕು-ಬೇಡವನ್ನು ನಾನೇ ನೋಡಿಕೊಳ್ಳಬೇಕಾಗಿದೆ. ಹೇಳಿ ನನ್ನ ತಾಯಿಯಿಂದ ಬಂದ ಈ ಜಾಗವನ್ನು ಬಿಟ್ಟು ಮಾನಸಿಕ ಅಸ್ವಸ್ಥ ಮಗಳೊಂದಿಗೆ ನಾನೇಲ್ಲಿಗೆ ಹೋಗಲಿ.’ ಎಂದು ವಸಂತಿ ಶೆಟ್ಟಿ ತನ್ನ ದು:ಖವನ್ನು ತೋಡಿಕೊಂಡರು.

ಕ್ರಷರ್‌ನ ಮಾಲಕರಾದ ಪ್ರಸನ್ನ ಶೆಟ್ಟಿ ಸೂಡ ಅವರು ಈಗ ಸರ್ವಾಧಿಕಾರಿಯಂತೆ ವರ್ತಿಸುತಿದ್ದಾರೆ. ಗಣಿಗಾರಿಕೆಯನ್ನು ವಿರೋಧಿಸುವ ಎರಡು ಬಡವರ ಮನೆಗಳನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗುತ್ತಿದೆ. ಶಿವಪುರ ಗ್ರಾಪಂ ಪಂಚಾಯತ್ ಕೂಡಾ ಸೂಡಾ ಅವರ ಪರವಾಗಿದೆ. ಅಲ್ಲಿನ ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ದೂರಿನ ಕುರಿತು ನಿರ್ಲಕ್ಷ ವಹಿಸುತ್ತಿದ್ದಾರೆ. ನಮಗೆ ನೆರವಾಗುವ ಬದಲು ಅವರು ಕ್ರಷರ್ ಮಾಲಕರ ಪರವಾಗಿ ನಮಗೇ ಬೆದರಿಕೆ ಒಡ್ಡುತ್ತಾರೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ದೂರುತ್ತಾರೆ. ಈ ಕುರಿತು ಕ್ರಮಕೈಗೊಳ್ಳದಿದ್ದರೆ ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ಅವರು ಕಿಡಿಕಾರಿದರು.

ವಾದಿರಾಜ ಆಚಾರ್ಯ ಎಂಬವರು ಮಾತನಾಡಿ, ಇಲ್ಲಿ ರಾತ್ರಿ ಹಗಲು ಎನ್ನದೆ ನಿರಂತರವಾಗಿ ಬಂಡೆ ಸ್ಪೋಟ ಮಾಡಲಾಗುತ್ತಿದೆ. ಸುತ್ತಲಿನ ಫಲವತ್ತಾದ ಕೃಷಿ ಭೂಮಿಗಳು ಬಂಜರು ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿವೆ. ಕ್ರಷರ್‌ಗೆ ತೆರಳುವ ಜಿಪಂ ರಸ್ತೆಯಲ್ಲಿ ಬೃಹತ್ 10 ಚಕ್ರಗಳ ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಹಾಗೂ ಸೇತುವೆ ತೀರಾ ಅಪಾಯದ ಸ್ಥಿತಿಯಲ್ಲಿದೆ ಎಂದು ದೂರಿದರು.

ಕ್ರಷರ್‌ನಿಂದಾಗಿ ಮನೆಗಳು ಬಿರುಕು ಬಿಟ್ಟಿದ್ದು, ಶಬ್ದದಿಂದಾಗಿ ರಾತ್ರಿ ವೇಳೆ ಮಲಗಲು ಕಷ್ಟವಾಗುತ್ತಿದೆ. ಇಡೀ ಪರಿಸರ ಧೂಳುಮಯವಾಗಿದೆ. ಕ್ರಷರ್ ಬಂಡೆ ಸ್ಪೋಟಗೊಳಿಸುವುದರಿಂದ ಮಕ್ಕಳು ಶಾಲೆಗೆ ತೆರಳಲು ಭಯ ಪಡುತ್ತಿದ್ದಾರೆ. ಇಡೀ ಗ್ರಾಮವೇ ನೆಮ್ಮದಿ ಕಳೆದುಕೊಂಡಿದೆ ಎಂದು ವಾಸು ಶೆಟ್ಟಿ ಖೇಧ ವ್ಯಕ್ತಪಡಿಸಿದರು.

ಗ್ರಾಪಂಗೆ ಸತತ ಮನವಿ ಅರ್ಪಿಸಿ ಸಾಕಾಗಿ, ಕೊನೆಗೆ ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಶಿವಪುರ ಜಲ್ಲಿ ಕ್ರಷರ್ ಬಗ್ಗೆ ಎಲ್ಲರ ಗಮನ ಸೆಳೆದ ಬಳಿಕ ಎರಡು ವರ್ಷಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತ ಸುಭಾಷ್ ಅಡಿ, ಗಣಿಗಾರಿಕೆ ನಿಲ್ಲಿಸುವಂತೆ ಆದೇಶಿಸಿದ್ದರು. ಇದರಿಂದ ಸುಮಾರು 2-3 ತಿಂಗಳು ಗಣಿಗಾರಿಕೆ ಸಂಪೂರ್ಣ ಬಂದ್ ಆಗಿತ್ತು.

ಆದರೆ ಆ ಬಳಿಕ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೆ ಎಂದಿನಂತೆ ರಾತ್ರಿ-ಹಗಲು ಜಲ್ಲಿ ಕ್ರಷರ್‌ನ್ನು ಜೋರಾಗಿ ಪುನರಾರಂಭಿಸಲಾಗಿದೆ. ಈ ಅಕ್ರಮ ಗಣಿಗಾರಿಕೆಗೆ ಗ್ರಾಪಂನ ಸಂಪೂರ್ಣ ಬೆಂಬಲವಿದೆ. 1993ರಲ್ಲಿ ಸುಮಾರು 6 ಎಕರೆ ಜಾಗದಲ್ಲಿ ಗಣಿಗಾರಿಕೆಗೆ ಪರವಾನಿಗೆ ಪಡೆಯಲಾಗಿತ್ತು. ಅದು ಸಣ್ಣ ರೀತಿಯಲ್ಲಿ ಜನರ ಮೂಲಕ ನಡೆಯುತಿದ್ದು, ನಮಗ್ಯಾವ ತೊಂದರೆಯೂ ಇರಲಿಲ್ಲ.

ಆದರೆ ಈಗ ಗಣಿಗಾರಿಕೆ 25 ಎಕರೆಗೂ ಮೀರಿ ನಡೆಯುತ್ತಿದೆ. ಇದಕ್ಕಾಗಿ ಸರಕಾರಿ ಜಾಗ ಹಾಗೂ ಗೋಮಾಳ ಜಾಗವನ್ನು ಪರವಾನಿಗೆ ಇಲ್ಲದೇ ಬಳಸಿಕೊಳ್ಳಲಾಗುತ್ತಿದೆ. ತಹಶೀಲ್ದಾರ್ ಅವರು 20 ಎಕೆರ ಜಾಗವನ್ನು ತೆರವುಗೊಳಿಸುವಂತೆ ನೋಟೀಸು ನೀಡಿದ್ದಾರೆ. ಆದರೂ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ, ಬಂಡೆಗಳನ್ನು ಸ್ಪೋಟಿಸಿ ಕ್ರಷಿಂಗ್ ಮಾಡಲಾಗುತಿದ್ದು, ತನ್ಮೂಲಕ ನಮ್ಮ ಬದುಕುವ ಸ್ವಾತಂತ್ರವನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಉದಯ ಶೆಟ್ಟಿ ಯಳಗೋಳಿ ತಿಳಿಸಿದರು.

ಕ್ರಶರ್ ಸ್ಥಾಪಿಸಲಿಕ್ಕೆ ಇರುವ ಸುಪ್ರೀಂ ಕೋರ್ಟ್ ನಿಯಮವನ್ನು ಇಲ್ಲಿ ಸಂಪೂರ್ಣ ಉಲ್ಲಂಘಿಸಲಾಗಿದೆ. ಕ್ರಶರ್‌ನಿಂದ 350ಮೀಟರ್ ದೂರದಲ್ಲಿ 15 ಮನೆಗಳಿವೆ ಹಾಗೂ 100 ಮೀಟರ್ ದೂರದಲ್ಲಿ ಸಾರ್ವಜನಿಕ ರಸ್ತೆ ಇದೆ ಎಂದವರು ತಿಳಿಸಿದರು.

ಪರಿಸ್ಥಿತಿ ಹೀಗೆ ಮುಂದುವರಿದರೆ ನಮಗುಳಿದಿರುವುದು ಎರಡೇ ದಾರಿ. ಒಂದೋ ಹಿರಿಯರ ಈ ಮನೆಮಾರು ಬಿಟ್ಟು ಕುಟುಂಬದೊಂದಿಗೆ ವಲಸೆ ಹೋಗುವುದು ಅಥವಾ ಎಲ್ಲರೂ ಸೇರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳು ವುದು ಎಂದು ವಾದಿರಾಜ ಆಚಾರ್ಯ ತಿಳಿಸಿದರು. ನಾವೀಗ ಇನ್ನೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗುವುದು ಅನಿವಾರ್ಯವೆನಿಸಿದೆ ಎಂದವರು ನುಡಿದರು.

ಕಳೆದ ಆ.12ರಂದು ಇದೇ ಕ್ರಷರ್‌ನಲ್ಲಿ ಜಲ್ಲಿ ತುಂಬಿಸಿಕೊಳ್ಳುತಿದ್ದ ಲಾರಿ ಮೇಲೆ ಬಂಕರ್ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಾಗ ಈ ಕ್ರಷರ್ ಸುದ್ದಿಗೆ ಬಂದಿತ್ತು. ಇದೀಗ ಕ್ರಷರ್‌ನಿಂದ ಬದುಕುವ ಹಕ್ಕನ್ನೇ ಕಳೆದುಕೊಂಡ ಗ್ರಾಮಸ್ಥರು ಅದರ ವಿರುದ್ಧ ಯುದ್ಧವನ್ನೇ ಸಾರಲು ನಿರ್ಧರಿಸಿದ್ದಾರೆ. ಇದು ಇಡೀ ಗ್ರಾಮದ ಜನರ ಸಾವು-ಬದುಕಿನ ಹೋರಾಟವಾಗಿದೆ ಎಂಬುದು ಊರವರ ಒಕ್ಕೊರಲ ಅಭಿಪ್ರಾಯವಾಗಿದೆ.

Full View

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News