ಭಟ್ಕಳ ಜಾಮಿಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶತಾಯುಷಿ ಡಾ. ಅಲಿ ಮಲ್ಪಾ ನಿಧನ

Update: 2017-09-02 05:25 GMT

ಭಟ್ಕಳ, ಸೆ. 2: ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ತಂಝೀಮ್ ಸಂಸ್ಥೆಯ ಪೋಷಕ ಡಾ.ಅಲಿ ಮಲ್ಪಾ ಸಾಹೇಬ್ (100) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧರಾದರು.

ಮೃತರು ಐದು ಮಂದಿ ಪುತ್ರರು, ಐದು ಮಂದಿ ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ತಮ್ಮ ಜೀವನದುದ್ದಕ್ಕೂ ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಡಾ. ಅಲಿ ಮಲ್ಪಾ ಶ್ರಮಿಸಿದ್ದರು.

ಅಸೌಖ್ಯದಿಂದ ಬಳಲುತಿದ್ದ ಅವರಿಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದೆ ಶುಕ್ರವಾರ ರಾತ್ರಿ ನಿಧರಾದರೆಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಶನಿವಾರ ಮಧ್ಯಾಹ್ನ ನವಾಯತ್ ಕಾಲನಿ ಜಾಮಿಯಾ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿ, ಸಮೀಪದ ಖಬಸ್ಥಾನದಲ್ಲಿ ದಫನ ಮಾಡಲಾಗುವುದು ಎಂದು ತಿಳಿದುಬಂದಿದೆ.

ಇವರ ನಿಧನ ಸುದ್ದಿ ತಿಳಿಯುತ್ತಲೆ ನವಾಯತ್ ಕಾಲನಿಯಲ್ಲಿರುವ ಇವರ ಮನೆಗೆ ಜನರು ತಂಡೋಪತಂಡವಾಗಿ ಧಾವಿಸಿ ಬಂದು ಮೃತರ ಅಂತಿಮ ದರ್ಶನ ಪಡೆದರು. ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಜಿಯಾ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಕಾರ್ಯದರ್ಶಿ ಮೌಲಾನ ಸೈಯದ್ ಯಾಸಿರ್ ಬರ್ಮಾವರ್ ನದ್ವಿ ಸೇರಿದಂತೆ ಹಲವು ಗಣ್ಯರು ಅವರ ಅಂತಿಮ ದರ್ಶನ ಪಡೆದು ಮೃತರ ಮಗ್ಫಿರತ್ ಗಾಗಿ ಪ್ರಾರ್ಥಿಸಿದರು. ಇವರ ನಿಧನಕ್ಕಾಗಿ ಹಲವು ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘಟನೆ, ಜಮಾಅತ್ ಮುಖಂಡರು ಶೋಕವನ್ನು ವ್ಯಕ್ತಡಿಸಿದ್ದು ಮೃತರಿಗಾಗಿ ಪ್ರಾರ್ಥಿಸಿದ್ದಾರೆ.

ಈ ಸಂದರ್ಭದಲ್ಲಿ ತಂಝೀಮ್ ಮುಖಂಡರು ಭಟ್ಕಳದ ಎಲ್ಲ ಮುಸ್ಲಿಮರಲ್ಲಿ ಅಂತಿಮ ಸಂಸ್ಕಾರದ ವರೆಗೆ ತಮ್ಮ ಅಂಗಡಿಮುಂಗಟ್ಟುಗಳನ್ನು ತೆರೆಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News