ಕಿನ್ಯಾ ಗ್ರಾಮಕ್ಕೆ ಸರಕಾರಿ ಬಸ್ ಓಡಾಟ ಆರಂಭ

Update: 2017-09-02 17:58 GMT

ಉಳ್ಳಾಲ, ಸೆ. 2: ಸುಮಾರು ಐದು ವರ್ಷಗಳಿಂದ ಗ್ರಾಮಸ್ಥರ ಹೋರಾಟದ ಫಲವಾಗಿ ನಾಟೆಕಲ್ ಮಾರ್ಗವಾಗಿ ಮಂಗಳೂರಿನಿಂದ ಕಿನ್ಯಾ ಗ್ರಾಮಕ್ಕೆ ಶನಿವಾರದಿಂದ ಕೆಎಸ್ ಆರ್ ಟಿಸಿ ಬಸ್ಸು ಓಡಾಟ ಆರಂಭಿಸಿದೆ.

ಹತ್ತು ವರ್ಷಗಳ ಹಿಂದೆ ಮಂಗಳೂರಿನಿಂದ ನಾಟೆಕಲ್ ಮಾರ್ಗವಾಗಿ ಕಿನ್ಯಾ ಕಡೆಗೆ ಬಸ್ಸುಗಳ ಓಡಾಟವೇ ಇರಲಿಲ್ಲ. ಗ್ರಾಮದ ಜನ ಹಲವು ಕಿ.ಮೀ ನಡೆದುಕೊಂಡೇ ಸಾಗಿ ಮಂಜನಾಡಿ ಅಥವಾ ನಾಟೆಕಲ್ ಕಡೆಗೆ ಬಂದು ಬಸ್ಸು ಹತ್ತಬೇಕಿತ್ತು. ಇತರೆ ವಾಹನಗಳು ರಸ್ತೆ ಅವ್ಯವಸ್ಥೆಯಿಂದ ಬರಲು ಅನಾನುಕೂಲವಾಗಿದ್ದರಿಂದಾಗಿ ಗ್ರಾಮಸ್ಥರು ತೊಂದರೆಗೀಡಾಗುವ ಸ್ಥಿತಿ ನಿರ್ಮಾಣವಾಗಿತ್ತು. ಕಿನ್ಯಾ ಗ್ರಾಮ ಪಂಚಾಯಿತಿನಲ್ಲಿ ಬಸ್ಸಿನ ವಿಚಾರಕ್ಕೆ ಸಂಬಂಧಿಸಿ ಹಲವು ಒತ್ತಾಯಗಳು ಕೇಳಿಬಂದಿತ್ತಾದರೂ, ಆ ಭಾಗಕ್ಕೆ ಬಸ್ಸು ಹಾಕಲು ಯಾರೂ ಮುಂದಾಗಿರಲಿಲ್ಲ. ಐದು ವರ್ಷಗಳಿಂದ ನಡೆಯುತ್ತಿರುವ ಗ್ರಾಮಸಭೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗಾಗಿ ಹೋರಾಟ ಮುಂದುವರಿದಿತ್ತು. ಹಲವು ಬಾರಿ ನಿರ್ಣಯ ಪಡೆದುಕೊಂಡರೂ ಬಸ್ಸು ಮಾತ್ರ ಗ್ರಾಮಕ್ಕೆ ಬಂದಿರಲಿಲ್ಲ. ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಶಿಫಾರಸ್ಸಿನ ಮೇರೆಗೆ, ಕಿನ್ಯಾ ಗ್ರಾಮ ಪಂಚಾಯತ್ ಆಡಳಿತದ ನಿರಂತರ ಶ್ರಮದಿಂದ ಬಸ್ಸು ಓಡಾಟ ಆರಂಭಿಸಿದೆ.

ಶನಿವಾರ ಅಂಬ್ಲಮೊಗರುವಿನಲ್ಲಿ ಸಚಿವರು ಎರಡು ಬಸ್ಸುಗಳಿಗೆ ಚಾಲನೆ ನೀಡಿದರು. ಕಿನ್ಯಾ ಗ್ರಾಮಕ್ಕೆ ಮೊದಲ ಬಾರಿಗೆ ಬಂದ ಸರಕಾರಿ ಬಸ್ಸನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂಹಾರ ಹಾಕಿ, ಸಿಹಿತಿಂಡಿಗಳನ್ನು ವಿತರಿಸಿ ಬರಮಾಡಿಕೊಂಡರು.

ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಅಬುಸಾಲಿ, ಫಾರುಕ್ ಕಿನ್ಯಾ, ಮಹಮ್ಮದ್, ಕಾಂಗ್ರೆಸ್ ಬೂತ್ ಅಧ್ಯಕ್ಷ ಮೊಯ್ದೀನ್ ಕುಂಞಿ, ಪಂ.ಸದಸ್ಯ ಹಮೀದ್ ಕಿನ್ಯಾ, ಕಿನ್ಯಾ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹುಸೈನ್ ಕುಂಞಿ, ಕಾರ್ಯದರ್ಶಿ ಅಬುಸಾಲಿ, ಮಾಜಿ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News