ಕೇಂದ್ರದ ಮೇಲೆ ರಾಜ್ಯ ಸರಕಾರವೂ ಒತ್ತಡ ಹೇರಬೇಕು: ಬಿ.ಕೆ.ಹರಿಪ್ರಸಾದ್

Update: 2017-09-02 18:27 GMT

ಮಂಗಳೂರು, ಸೆ.2: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯ ಸಭಾ ಸದಸ್ಯ ಬಿ. ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆ ಬಗ್ಗೆ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಿದ ಬಿ. ಕೆ. ಹರಿಪ್ರಸಾದ್ ಅವರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಶನಿವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ 38 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಪಾರ್ಲಿಮೆಂಟಿನ ಮುಂದೆ ಬಾಕಿ ಇವೆ. ಆ ಪೈಕಿ ತುಳು, ಕೊಡವ ಭಾಷೆಗಳೂ ಸೇರಿವೆ. 50,000 ಮಂದಿ ಭಾಷಿಗರನ್ನು ಹೊಂದಿರುವ ಭಾಷೆಗಳೂ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವಾಗ ಸುಮಾರು 1.5 ಕೋಟಿಗೂ ಅಧಿಕ ಜನ ಮಾತನಾಡುವ ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲೇಬೇಕಿದೆ. ಈ ನಿಟ್ಟಿನಲ್ಲಿ ನಿರಂತರ ಶ್ರಮಿಸುವುದಾಗಿ ಹೇಳಿದ ಅವರು ತುಳುವಿಗೆ ಬೇಕಾದ ಸವಲತ್ತು, ಭಾಷಾ ಮಾನ್ಯತೆ ದೊರಕುವಂತಾಗಲು ತುಳುವರು ಒಗ್ಗಟ್ಟಿನ ಹೋರಾಟ ನಡೆಸಬೇಕು. ರಾಜಕೀಯವಾಗಿ ಪ್ರಬಲ ಬೇಡಿಕೆಯನ್ನು ಸರಕಾರದ ಮುಂದಿಡಬೇಕು ಎಂದರು.

38 ಭಾಷೆಗಳಿಗೂ ಸಾಂವಿಧಾನಿಕ ಮಾನ್ಯತೆ ನೀಡುವುದಾಗಿ ಈಗಾಗಲೇ ಕೇಂದ್ರ ಸರಕಾರದ ಗೃಹ ಇಲಾಖೆ ಭರವಸೆ ನೀಡಿದೆ. ಹಾಗಾಗಿ ಸರಕಾರದ ಮೇಲೆ ಒತ್ತಡ ತರುವುದು ನಮ್ಮ ಕೆಲಸ ಎಂದು ಸಾರ್ವಜನಿಕರ ಪ್ರಶ್ನೆಯೊಂದಕ್ಕೆ ಬಿ. ಕೆ. ಹರಿಪ್ರಸಾದ್ ಉತ್ತರಿಸಿದರು.

ಅಕಾಡಮಿಯ ಸದಸ್ಯ ತಾರನಾಥ ಕಾಪಿಕಾಡ್ ವಿಷಯ ಮಂಡಿಸಿ, ಅಕಾಡಮಿಯ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ತುಳು ಭವನಕ್ಕೆ ಸುಭದ್ರ ಆವರಣ ಗೋಡೆ, ನೆಲಕ್ಕೆ ಇಂಟರ್ ಲಾಕ್ ಅಳವಡಿಕೆ, ತುಳುಭವನದ ಮೊದಲ ಅಂತಸ್ತಿನಲ್ಲಿರುವ ಸಭಾಭವನಕ್ಕೆ ಆಸನ ವ್ಯವಸ್ಥೆ ಸಹಿತ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದೆ. ಈ ಎಲ್ಲ ಕಾಮಗಾರಿಗಳಿಗಾಗಿ ಅಂದಾಜು 3.50 ಕೋ.ರೂ. ಅವಶ್ಯವಿದ್ದು, ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಗರಿಷ್ಠ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಅಕಾಡಮಿಯ ಅಧ್ಯಕ್ಷ ಎ. ಸಿ. ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡಮಿಯ ಸದಸ್ಯ ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News