ಭಾಷೆ ಉಳಿಸಲು ಸಮರ್ಪಣಾ ಮನೋಭಾವ ಅಗತ್ಯ: ಅಸಫ್ ಬರ್ಟೋವ್

Update: 2017-09-03 16:08 GMT

ಮಂಗಳೂರು, ಸೆ.3: ಸ್ಥಳೀಯ ಭಾಷೆಗಳನ್ನು ಸಂರಕ್ಷಿಸುವಲ್ಲಿ ಆ ಭಾಷೆಯನ್ನು ಆಡುವವರಿಗೆ ಆ ಭಾಷೆಯ ಮೇಲೆ ಪ್ರೀತಿಯ ಜತೆಗೆ ಸಮರ್ಪಣಾ ಮನೋಭಾವ ಅಗತ್ಯ. ತುಳು ಭಾಷೆಯನ್ನು ಆ ನಿಟ್ಟಿನಲ್ಲಿ ಬೆಳೆಸಬೇಕು ಎಂದು ಅಮೆರಿಕದ ವಿಕಿಪೀಡಿಯಾ ಫೌಂಡೇಶನ್‌ನ ಸೀನಿಯರ್ ಪ್ರೋಗ್ರಾಂ ಆಫೀಸರ್ ಅಸಫ್ ಬರ್ಟೋವ್ ಕರೆ ನೀಡಿದ್ದಾರೆ.

ತುಳು ವಿಕಿಪೀಡಿಯಾ ಲೈವ್ ಆಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿಕಿಪೀಡಿಯಾ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ತುಳು ಭಾಷೆಯನ್ನು ಸಂರಕ್ಷಿಸಿ ಬೆಳೆಸುವಲ್ಲಿ ಇಸ್ರೇಲ್‌ನ ಯೆಹೂದಿಗಳ ಹಿಬ್ರೋ ಭಾಷೆಯು ಚೇತರಿಸಿಕೊಂಡ ರೀತಿಯು ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು.

ಇಸ್ರೇಲ್‌ನಲ್ಲಿ ಯಹೂದಿಗಳ ಮಾತೃಭಾಷೆಯಾಗಿದ್ದ ಹಿಬ್ರೋ ಸುಮಾರು 2000 ವರ್ಷಗಳ ಕಾಲ ತೆರೆಮರೆಗೆ ಸರಿದಿತ್ತು. ಅದು ಕೇವಲ ಪ್ರಾರ್ಥನೆಗೆ ಮಾತ್ರವೇ ಸೀಮಿತಗೊಂಡಿತ್ತು. ಅದು ಮತ್ತೆ 19ನೆ ಶತಮಾನದ ಆರಂಭದಲ್ಲಿ ಎಲಿಝಿಯರ್ ಬೆನ್ ಯೆಹುದಾ ಎಂಬ ಏಕ ವ್ಯಕ್ತಿಯ ಆಸಕ್ತಿ, ಸಮರ್ಪಣಾ ಮನೋಭಾವದಿಂದ ಇಂದು ಇಸ್ರೇಲ್‌ನಲ್ಲಿ ಮತ್ತೆ ಹಿಬ್ರೋ ಅಧಿಕೃತ ಭಾಷೆಯಾಗಿ ಸುಮಾರು 7 ಮಿಲಿಯನ್ ಜನರಿಂದ ಗುರುತಿಸಲ್ಪಟ್ಟಿದೆ.

ಯೆಹುದಾ ಎಂಬಾತ ಹಿಬ್ರೋ ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಏಕಾಂಗಿಯಾಗಿ ಪತ್ರಿಕೆ ಆರಂಭಿಸಿದ. ನಿಘಂಟು ತಯಾರಿಸಿ ಭಾಷೆಗೆ ಜೀವ ತುಂಬಿದ. ಬಳಿಕ ಆ ಭಾಷೆ ವಿಶ್ವವ್ಯಾಪಿಯಾಗಿ ಬೆಳೆದು ಇಂದು ಹಿಬ್ರೋ ಭಾಷೆಯಲ್ಲಿ ಶಾಲಾ ಕಾಲೇಜುಗಳು ಮಾತ್ರವಲ್ಲದೆ ವಿಶ್ವವಿದ್ಯಾನಿಲಯಗಳೂ ತಲೆ ಎತ್ತಿವೆ. ಹಿಬ್ರೋ ಭಾಷೆಯಲ್ಲಿಯೇ ವಿಜ್ಞಾನಿಗಳಾಗಿದ್ದಾರೆ, ವಾಸ್ತುಶಿಲ್ಪಿಗಳಾಗಿದ್ದಾರೆ. ಆದ್ದರಿಂದ ತುಳು ಭಾಷೆ ಈಗಾಗಲೇ ಅಧಿಕೃತವಾಗಿ ಗುರುತಿಸಿಕೊಂಡಿದೆ. ಅದನ್ನು ಬೆಳೆಸುವಲ್ಲಿ ತುಳು ಬಲ್ಲವರು ಆಸಕ್ತಿ ಮತ್ತು ಸಮರ್ಪಣಾ ಮನೋಭಾವವನ್ನು ತೋರಿಸಬೇಕಾಗಿದೆ. ಅದಿದ್ದಲ್ಲಿ ತುಳು ವಿಶ್ವವಿದ್ಯಾನಿಲಯವೂ ಸ್ಥಾಪನೆಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಆಫ್‌ಲೈನ್ ತುಳು ವಿಕಿಪೀಡಿಯಾಕ್ಕೆ ಒತ್ತು

ಕರಾವಳಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ತುಳುವನ್ನು ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತದೆ. ಆದರೆ ಅವುಗಳಿಗೆ ಪೂರಕವಾಗಿ ವಿಶ್ವಕೋಶವಾಗಲಿ, ದಾಖಲೀಕರಣ ಮಾಹಿತಿಗಳ ಕೊರತೆಯಿದೆ. ಈ ಕಾಣರದಿಂದ ಆಫ್‌ಲೈನ್ ತುಳು ವಿಕೀಪೀಡಿಯಾಕ್ಕೆ ಒತ್ತು ನೀಡಬೇಕಾಗಿದೆ ಎಂದು ಕರಾವಳಿ ವಿಕಿಮೀಡಿಯನ್ಸ್ ನ ಕಾರ್ಯದರ್ಶಿ ಡಾ.ಯು.ಬಿ. ಪವನಜ ಅಭಿಪ್ರಾಯಿಸಿದರು.

ಕಂಪ್ಯೂಟರ್ ಸೌಲಭ್ಯವಿರುವ ಶಾಲೆಗಳಲ್ಲಿ ತುಳು ವಿಕಿಪೀಡಿಯಾ ಅಳವಡಿಸಿಕೊಳ್ಳಬೇಕಿದೆ. ವಿಕಿಪೀಡಿಯಾ ಮೂಲಕ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಶಾಲಾ ಕಾಲೇಜುಗಳಲ್ಲಿ ವಿಕಿಮೀಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಮೂಲಕ ವಿಕಿಪೀಡಿಯಾ ಬಳಕೆಗೆ ಪ್ರೇರಣೆ ನೀಡಲು ಕರಾವಳಿ ವಿಕಿಮೀಡಿಯನ್ಸ್ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ತುಳು ವಿಕಿಪೀಡಿಯಾ ಮೂಲಕ ತುಳು ಭಾಷೆಯ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸುವ ಕೆಲಸವನ್ನು ಕರಾವಳಿ ವಿಕಿಮೀಡಿಯನ್ಸ್ ಮಾಡುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಕಾರ್ಯಕ್ರಮದಲ್ಲ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಅಭಿಪ್ರಾಯಿಸಿದರು.

ಮಾಹಿತಿ ಮತ್ತು ಜ್ಞಾನವನ್ನು ಜಾಗತಿಕವಾಗಿ ವಿಸ್ತರಿಸುವ ಕಾರ್ಯವನ್ನು ತುಳು ವಿಕಿಪೀಡಿಯಾ ಮೂಲಕ ಮಾಡಲಾಗುತ್ತಿದೆ. ಇದು ಸಂಸ್ಕೃತಿಯನ್ನು ವಿಶ್ವದ ಇತರ ಹಲವು ಭಾಷೆಗಳಿಗೆ ಭಾಷಾಂತರಿಸಿದಂತೆ. ಹಾಗಾಗಿ ವಿಕಿಪೀಡಿಯಾವು ತಂತ್ರಜ್ಞಾನವನು ಜ್ಞಾನದ ಸಂವರ್ಧನೆಗಾಗಿ ಹಂಚಿಕೊಳ್ಳುವ ದೃಷ್ಟಿಯಿಂದ ಉಪಯೋಗಿಸಿಕೊಳ್ಳಬೇಕಾಗಿದೆ. ಯಾವುದೇ ಅನಗತ್ಯ ಲೇಖನಗಳು ಈ ಮಾಧ್ಯಮದ ಮೂಲಕ ಪ್ರಸಾರವಾಗದಂತೆಯೂ ಎಚ್ಚರಿಕೆ ವಹಿಸುವುದೂ ಅಗತ್ಯ ಎಂದವರು ಕಿವಿತಮಾತು ಹೇಳಿದರು.

ವಿಕಿಪೀಡಿಯಾ ಗ್ರಂಥಾಲಯಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ನೀಡಲಾದ ಪುಸ್ತಕಗಳನ್ನು ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿಯವರು ಡಾ. ಚಿನ್ನಪ್ಪ ಗೌಡರಿಗೆ ಹಸ್ತಾಂತರಿಸಿದರು.

ಕರಾವಳಿ ವಿಕಿಮೀಡಿಯನ್ಸ್‌ನ ಅಧ್ಯಕ್ಷ  ಡಾ. ವಿಶ್ವನಾಥ ಬದಿಕಾನ ಮಾತನಾಡಿ, 2016ರ ಆಗಸ್ಟ್ 6ರಂದು ಭಾರತದ 23ನೆ ಭಾಷೆಯಾಗಿ ತುಳು ವಿಕಿಪೀಡಿಯಾ ಲೈವ್ ಆಗಿದೆ. ಅದರ ವರ್ಷಚರಣೆ ನಿಮಿತ್ತ ರಾಮಕೃಷ್ಣ ಕಾಲೇಜಿನಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಕಾರ್ಯಾಗಾರದಲ್ಲಿ ದೃಷ್ಟಿ ಹೀನ ವಿದ್ಯಾರ್ಥಿಗಳಿಗೂ ವಿಕಿಪೀಡಿಯಾ ಬಗ್ಗೆ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಬೆಂಗಳೂರಿನ ಶ್ರೀಧರ್ ನೆರವೇರಿಸಿದ್ದಾರೆ ಎಂದು ಅವರು ಹೇಳಿದರು.

ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ಸ್ವಾಗತಿಸಿದರು. ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಚಾಲಕ ಬಿ. ಕೃಷ್ಣ ಪ್ರಸಾದ್ ರೈ ಹಾಗು ಇತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News