ಮಂಗಳೂರು ಚಲೋ ಬೈಕ್ ರ‌್ಯಾಲಿಗೆ ಅನುಮತಿ ನೀಡದಂತೆ ಯುವ ಕಾಂಗ್ರೆಸ್ ಆಗ್ರಹ

Update: 2017-09-04 15:41 GMT

ಉಡುಪಿ, ಸೆ.4: ರಾಜ್ಯ ಬಿಜೆಪಿ ಯುವ ಮೋರ್ಚಾದ ವತಿಯಿಂದ ಹಮ್ಮಿ ಕೊಳ್ಳಲಾಗಿರುವ ಮಂಗಳೂರು ಚಲೋ ಬೈಕ್ ರ‌್ಯಾಲಿಗೆ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್, ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದ ಜಿಲ್ಲೆಯ ಜನರಲ್ಲಿ ಕೋಮು ದ್ವೇಷ ಹಾಗೂ ಭಾವನೆಗಳನ್ನು ಕೆರಳಿಸುವ ಮೂಲಕ ಶಾಂತಿ ಕದಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡು ತ್ತಿದ್ದು, ಆದುದರಿಂದ ಯಾವುದೇ ಕಾರಣಕ್ಕೂ ಬೈಕ್ ರ‌್ಯಾಲಿಗೆ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ಈ ಕಾರ್ಯಕ್ರಮ ದಲ್ಲಿ ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸುವ ಕಾರ್ಯಕರ್ತರು ಪ್ರಚೋದನಕಾರಿ ಘೋಷಣೆಗಳನ್ನು ಹಾಗೂ ಹೇಳಿಕೆಗಳನ್ನು ನೀಡುವ ಸಾಧ್ಯತೆಗಳಿರುವುದರಿಂದ ಈ ರ‌್ಯಾಲಿ ಜಿಲ್ಲೆಯ ಶಾಂತಿಗೆ ಮಾರಕವಾಗಿದೆ. ಇಂತಹ ರ‌್ಯಾಲಿಗೆ ಅವಕಾಶ ಕೊಟ್ಟು ಯಾವುದೇ ಅಹಿತಕರ ಘಟನೆ ನಡೆದರೆ ಬಿಜೆಪಿ ನೇರ ಹೊಣೆ ಯಾಗುತ್ತದೆ ಎಂದು ಅವರು ತಿಳಿಸಿದರು.

ಜನತೆ ಯಾವುದೇ ಅಪಪ್ರಚಾರ ಹಾಗೂ ಗಾಳಿ ಸುದ್ದಿಗೆ ಕಿವಿಗೊಡದೆ ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ ಅವರು, ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್, ರವಿಶಂಕರ್ ಶೇರಿಗಾರ್, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಕಳ ಅಧ್ಯಕ್ಷ ದೀಪಕ್ ಕೋಟ್ಯಾನ್, ಉಡುಪಿ ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News