ಬೈಕ್ ರ‌್ಯಾಲಿಗೆ ಅನುಮತಿ ಇಲ್ಲ: ಮಂಗಳೂರು ಕಮಿಷನರ್; ತಾಕತ್ತಿದ್ದರೆ ತಡೆಯಲಿ- ಸಂಸದ ಕಟೀಲ್

Update: 2017-09-04 15:08 GMT

ಮಂಗಳೂರು, ಸೆ. 4: ಬಿಜೆಪಿ ಯುವ ಮೋರ್ಚಾ ಸೆ. 7ರಂದು ‘ಮಂಗಳೂರು ಚಲೋ’ ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಬೈಕ್ ರ‌್ಯಾಲಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ಮಂಗಳೂರಿನ ಕೋಮು ಸೌರ್ಹಾದತೆಯ ದೃಷ್ಟಿಯಿಂದ ಮತ್ತು ಅತೀ ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಆಧರಿಸಿ ಹಾಗೂ ಮಂಗಳೂರು ನಗರದ ಶಾಂತಿ ಕಾಪಾಡುವ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ‘ಮಂಗಳೂರು ಚಲೋ’ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಸೋಮವಾರ ಸಂಜೆ ಹೊರಡಿಸಲಾದ ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಮತ್ತು ಎಸ್‌ಡಿಪಿಐ, ಪಿಎಫ್‌ಐಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ನಡೆಸಲು ಉದ್ದೇಶಿಸಲಾಗಿದ್ದ ಮಂಗಳೂರು ಚಲೋಗೆ ಬಿಜೆಪಿ ಜಿಲ್ಲಾ ಘಟಕ, ಸಂಸದರು, ಬಿಜೆಪಿ ಪಕ್ಷದ ಮಾಜಿ ಶಾಸಕರು, ಪಕ್ಷದ ಮುಖಂಡರು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ ಎಲ್ಲ ರೀತಿಯ ಸಿದ್ಧತೆ ಕೂಡ ನಡೆದಿತ್ತು.

ಈ ಮಧ್ಯೆ ಸಚಿವ ಯು.ಟಿ.ಖಾದರ್ ರ‌್ಯಾಲಿ ಕೈ ಬಿಡುವಂತೆ ಮನವಿ ಮಾಡಿದ್ದರೆ, ಎಸ್‌ಡಿಪಿಐ ಮುಖಂಡರು ರ‌್ಯಾಲಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಮುಖಂಡರು ರ‌್ಯಾಲಿಗೆ ರಕ್ಷಣೆ ನೀಡುವುದು ರಾಜ್ಯ ಸರಕಾರದ ಜವಾಬ್ದಾರಿ. ಸರಕಾರ ರಕ್ಷಣೆ ನೀಡಲಿ, ನೀಡದಿರಲಿ ರ‌್ಯಾಲಿ ನಡೆಸಿಯೇ ಸಿದ್ಧ ಎಂದು ಗುಡುಗಿದ್ದರು. ಇವೆಲ್ಲದರ ಮಧ್ಯೆ ಪೊಲೀಸ್ ಆಯುಕ್ತರು ರ‌್ಯಾಲಿಗೆ ಅನುಮತಿ ನಿರಾಕರಿಸಿದ್ದು, ಬಿಜೆಪಿಯ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ.

ತಾಕತ್ತಿದ್ದರೆ ತಡೆಯಲಿ: ಸರಕಾರಕ್ಕೆ ಸಂಸದ ನಳಿನ್ ಸವಾಲು
ಬಿಜೆಪಿ ಯುವ ಮೋರ್ಚಾ ಸೆ.7ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಬೈಕ್ ರ‌್ಯಾಲಿ’ಯ ‘ಮಂಗಳೂರು ಚಲೋ’ಗೆ ನಗರ ಪೊಲೀಸ್ ಆಯುಕ್ತ ಅನುಮತಿ ನಿರಾಕರಿಸಿರುವುದರಿಂದ ಸಿಡಿಮಿಡಿಗೊಂಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ತಾಕತ್ತಿದ್ದರೆ ರಾಜ್ಯ ಸರಕಾರ ‘ಮಂಗಳೂರು ಚಲೋ’ ತಡೆಯಲಿ. ನಾವು ಬೈಕ್ ರ‌್ಯಾಲಿಯೊಂದಿಗೆ ಕಾರ್ಯಕ್ರಮ ನಡೆಸಿಯೇ ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಬೈಕ್ ರ‌್ಯಾಲಿಯೊಂದಿಗಿನ ಮಂಗಳೂರು ಚಲೋ ಪೊಲೀಸ್ ಇಲಾಖೆಯ ಮೂಲಕ ತಡೆಯೊಡ್ಡುವ ಪ್ರಯತ್ನ ಮಾಡಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವುದು ಹೊಸತೇನಲ್ಲ. ಅದು ನಾಗರಿಕನ ಹಕ್ಕಾಗಿದೆ. ಕಾಂಗ್ರೆಸ್ ಸರಕಾರವು ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಮೂಲಕ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದೆ. ಸೆ. 7ರಂದು ರ‌್ಯಾಲಿ ನಡೆಸಿಯೇ ಸಿದ್ಧ. ನಿಯೋಜಿತ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೆ 20 ಸಾವಿರಕ್ಕೂ ಅಧಿಕ ಬೈಕ್‌ಗಳು ರ‌್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ಸರಕಾರಕ್ಕೆ ತಾಕತ್ತಿದ್ದರೆ ತಡೆಯಲಿ ಎಂದು ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News