ಪಿಎಫ್ಐ ನಿಷೇಧಿಸಲು ಮನವಿ ಸಲ್ಲಿಸಿದ ಬಿಜೆಪಿ ನಿಯೋಗದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ !

Update: 2017-09-04 14:58 GMT

ಪುತ್ತೂರು, ಸೆ. 4: ಪಿಎಫ್‌ಐ, ಎಸ್‌ಡಿಪಿಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಪುತ್ತೂರಿನ ಬಿಜೆಪಿ ಮತ್ತು ಬಿಜೆಪಿ ಯುವ ಮೋರ್ಚಾವು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡುತ್ತಿರುವ ಸಂದರ್ಭ ಶಾಸಕಿ ಶಕುಂತಳಾ ಶೆಟ್ಟಿ ಅವರು ಉಪಸ್ಥಿತರಿದ್ದ ಫೊಟೋವೊಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪಡುಮಲೆ ಅಭಿವೃದ್ಧಿ ಯೋಜನೆ ಸಂಬಂಧಿಸಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಸೋಮವಾರ ಬೆಳಗ್ಗೆ ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನ ಮೂರ್ತಿ ಅವರೊಂದಿಗೆ ಎ.ಸಿ. ಕಚೇರಿಯಲ್ಲಿ ಚರ್ಚಿಸುತ್ತಿದ್ದರು. ಇದೇ ವೇಳೆ ಬಿಜೆಪಿ ಮತ್ತು ಯುವ ಮೋರ್ಚಾ ನಾಯಕರ ತಂಡ ಮನವಿ ನೀಡಲು ಆಗಮಿಸಿತ್ತು. ಎ.ಸಿ. ಅವರು ಎದ್ದು ನಿಂತು ಅವರಿಂದ ಮನವಿ ಸ್ವೀಕರಿಸಿದ್ದರು. ಈ ಸಂದರ್ಭ ಶಾಸಕಿ ಅಲ್ಲೇ ಕುಳಿತಿದ್ದವರು ಅದೇ ಸ್ಥಿತಿಯಲ್ಲಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ‘ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಬಿಜೆಪಿ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸುವಾಗ ಪುತ್ತೂರಿನ ಕಾಂಗ್ರೆಸ್ ಶಾಸಕಿ ಕೂಡ ಉಪಸ್ಥಿತರಿದ್ದರು’ ಎಂಬ ಒಕ್ಕಣೆಯೊಂದಿಗೆ ಈ ಫೊಟೋ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಹರಿದಾಡಲಾರಂಭಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕಿ ಅವರು ನಾನು ಉಪವಿಭಾಗಾಧಿಕಾರಿಗಳ ಜೊತೆ ಕೋಟಿ ಚೆನ್ನಯರ ಪಡುಮಲೆ ಅಭಿವೃದ್ಧಿ ಯೋಜನೆ ಕುರಿತು ಮಾತುಕತೆ ನಡೆಸುತ್ತಿದ್ದೆ. ಆಗ ಬಿಜೆಪಿ ನಿಯೋಗ ಒಳಗೆ ಬಂದಿದ್ದು ನನಗೆ ಗೊತ್ತೇ ಇರಲಿಲ್ಲ. ಆ ನಿಯೋಗದಲ್ಲಿ ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಇದ್ದರು. ಎಪಿಎಂಸಿಯ ಆಡಳಿತ ಸುಧಾರಣೆ ಬಗ್ಗೆ ಸಲ್ಲಿಸುತ್ತಿರುವ ಮನವಿ ಇದಾಗಿರಬಹುದು ಎಂದುಕೊಂಡು ನಾನು ಸುಮ್ಮನಿದ್ದೆ. ಎ.ಸಿ. ಮನವಿ ಸ್ವೀಕರಿಸುವಾಗ ಫೊಟೋ ತೆಗೆಯಲಾಗಿದೆ. ಅದನ್ನೇ ಸಾಮಾಜಿಕ ಜಾಲತಾಣಕ್ಕೆ ಹಾಕಿ ಅದನ್ನು ತಪ್ಪು ಒಕ್ಕಣೆ ನೀಡಲಾಗಿದೆ. ಇದು ಖಂಡನೀಯ, ಶಾಸಕಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭವನ್ನೇ ಈ ರೀತಿ ವ್ಯಾಖ್ಯಾನಿಸಿರುವುದು ಕೆಟ್ಟ ಮನಸುಗಳ ಕೆಲಸವಾಗಿದೆ. ನನ್ನ ಉಪಸ್ಥಿತಿಯನ್ನು ಬಿಜೆಪಿಗರು ದುರುಪಯೋಗ ಮಾಡಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಜನರ ದಾರಿ ತಪ್ಪಿಸಲು ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದರ ವಿರುದ್ದ ಕಾಂಗ್ರೆಸ್ ಮುಖಂಡರು ಎ.ಸಿ. ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರು ಸಲ್ಲಿಸಿದ ಮನವಿಗೂ ಶಾಸಕಿಗೂ ಸಂಬಂಧವೇ ಇಲ್ಲದಿದ್ದರೂ, ಶಾಸಕಿ ಎ.ಸಿ. ಕಚೇರಿಯಲ್ಲಿ ಕುಳಿತಿದ್ದ ಫೊಟೋವನ್ನು ಪ್ರಸಾರ ಮಾಡಿ  ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಶಾಸಕಿ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿ ಎ.ಸಿ. ಅವರ ಜತೆಗೆ ಮಾತುಕತೆ ನಡೆಸುತ್ತಿದ್ದಾಗ ಬೇರೆ ಯಾರೂ ಪ್ರವೇಶ ಮಾಡಬಾರದಿತ್ತು. ಹಾಗೆ ಪ್ರವೇಶ ಮಾಡಲು ಎ.ಸಿ. ಅವರು ಅವಕಾಶ ಮಾಡಿಕೊಡಬಾರದಿತ್ತು. ಶಾಸಕಿ ಜತೆಗಿನ ಸಭೆ ಮುಗಿದ ಬಳಿಕವೇ ನಿಯೋಗವನ್ನು ಒಳಗೆ ಕರೆಸಿಕೊಳ್ಳಬೇಕಿತ್ತು. ಹೀಗೆ ಮಾಡದೆ ಏಕಾಏಕಿ ನಿಯೋಗ ಒಳ ನುಗ್ಗಿದ್ದಾದರೂ ಹೇಗೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಮನವಿ ನೀಡಲು ಹೋದಾಗ ಶಾಸಕಿ ಇದ್ದದ್ದು ನಿಜ. ಹಾಗೆಂದು ನಾವು ಎ.ಸಿ. ಅವರಿಗೆ ಮನವಿ ಕೊಟ್ಟು ಬಂದೆವು. ನಮ್ಮ ಮನವಿಗೂ ಶಾಸಕಿಗೂ ಸಂಬಂಧವಿಲ್ಲ. ತಪ್ಪು ವ್ಯಾಖ್ಯಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದನ್ನು ನಾನು ನೋಡಿಲ್ಲ. ಹಾಗೊಂದು ವೇಳೆ ಹಾಕಿದ್ದರೆ ಅದು ಯಾರ ಕೆಲಸ ಎಂದೂ ನನಗೆ ಗೊತ್ತಿಲ್ಲ ಎಂದು ನಿಯೋಗದ ನೇತೃತ್ವದ ವಹಿಸಿದ್ದ ಬಿಜೆಪಿ ಮುಖಂಡ, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News