ಹಿರಿಯ ನಾಗರಿಕರಿಗೆ ಉಚಿತ ಕಾನೂನು ನೆರವು: ಅನುರಾಧ

Update: 2017-09-04 16:03 GMT

ಉಡುಪಿ, ಸೆ.4: ಹಿರಿಯ ನಾಗರೀಕರು ವಿವಿಧ ಪ್ರಕರಣಗಳ ಮಾಹಿತಿಗಾಗಿ ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರದೊಂದಿಗೆ, ಆಯಾ ತಾಲೂಕಿನ ಹಿರಿಯ ನಾಗರಿಕರ ಸಂಘದ ಕಚೇರಿಗೆ ನಿಗದಿಪಡಿಸಿದ ದಿನದಂದು ಸ್ಥಳಿಯ ವಕೀಲರ ಮೂಲಕ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ 2007ರ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅನುಷ್ಠಾನದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಹಿರಿಯ ನಾಗರೀಕರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಸ್ವಂತ ಜಾಗದ ಪ್ರಕರಣ ಗಳ ಕುರಿತು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸೂಕ್ತ ಕಾನೂನು ಮಾಹಿತಿಯ ಕೊರತೆಯಿದೆ. ಇದಕ್ಕಾಗಿ ತಾಲೂಕು ವ್ಯಾಪ್ತಿಯ ಹಿರಿಯ ನಾಗರಿಕರ ಸಂಘ ಗಳಲ್ಲಿ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿ, ಸಂಬಂಧಪಟ್ಟ ಹಿರಿಯ ನಾಗರಿಕರು ಮತ್ತು ಸ್ಥಳೀಯ ವಕೀಲರೊಂದಿಗೆ ಮುಖಾಮುಖಿಯನ್ನು ಏರ್ಪಡಿಸಿ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಪಡಿಸಲಾಗುವುದು. ಇದಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

 ಜಿಲ್ಲಾ ಪೊಲೀಸ್ ಕಚೇರಿಯಲ್ಲಿ 24x7 ಹಿರಿಯ ನಾಗರೀಕರ ಸಹಾಯವಾಣಿ ಆರಂಭಿಸುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಲಾಗು ವುದು. ಜಿಲ್ಲೆಯ ಎಲ್ಲಾ ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರು ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ಮೆಟ್ಟಿಲುಗಳ ಎತ್ತರವನ್ನು ತಗ್ಗಿಸುವಂತೆ ಈಗಾಗಲೇ ಬಸ್ ಮಾಲಕರಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರಿಗೆ ಬಸ್‌ಗಳಲ್ಲಿ ಮೀಸಲಿಟ್ಟ ಸೀಟ್‌ಗಳನ್ನು ನೀಡಲು ಎಲ್ಲಾ ಬಸ್‌ಗಳ ಕಂಡಕ್ಟರ್‌ಗಳಿಗೆ ನಿರ್ದೇಶನ ನೀಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 19 ವೃದ್ದಾಶ್ರಮಗಳು ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, 11 ವೃದ್ಧಾಶ್ರಮಗಳಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ನಿರಂಜನ ಭಟ್ ತಿಳಿಸಿದರು. ಅನುಮತಿ ನೀಡಿರುವ ವೃದ್ದಾಶ್ರಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸುಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಹಶೀಲ್ದಾರರಿಂದ ಹಿರಿಯ ನಾಗರೀಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ತಿಂಗಳ ಮೊದಲನೆ ಸೋಮವಾರ ಉಡುಪಿ, 2ನೇ ಸೋಮವಾರ ಕುಂದಾಪುರ ಹಾಗೂ 3ನೇ ಸೋಮವಾರದಂದು ಕಾರ್ಕಳದಲ್ಲಿ ಈ ಅಹವಾಲು ಸ್ವೀಕಾರ ನಡೆಯಲಿದ್ದು, ಹಿರಿಯ ನಾಗರೀಕರು ತಮ್ಮ ಸಮಸ್ಯೆಗಳ ಬಗ್ಗೆ ಅಹವಾಲುಗಳಲ್ಲಿ ಸಲ್ಲಿಸುವಂತೆ ಅನುರಾಧ ತಿಳಿಸಿದರು.

ಹಿರಿಯ ನಾಗರೀಕರಿಗೆ ಗುರುತಿನ ಚೀಟಿ ನೀಡುವಾಗ ಆಧಾರ್ ಕಾರ್ಡ್ ನಲ್ಲಿರುವ ಜನ್ಮದಿನಾಂಕವನ್ನು ಪರಿಗಣಿಸುವಂತೆ ಅವರು ನುಡಿದರು. ಮುಂದಿನ ಅ.1ರಂದು ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News