ಕಾನೂನು ವಿದ್ಯಾರ್ಥಿಯ ಅಪಹರಣ: ಇಬ್ಬರ ಬಂಧನ

Update: 2017-09-04 16:33 GMT

ಉಡುಪಿ, ಸೆ.4: ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿ ವಿಜಯ್ ಕುಮಾರ್ ಶೆಟ್ಟಿ(30) ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಇಂದು ಕಡೆಕಾರು ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಹಾಲಾಡಿಯ ಕವನ್ ಶೆಟ್ಟಿ(28) ಹಾಗೂ ಉಡುಪಿಯ ವಿಕ್ಕಿ ಮೊಬೈಲ್‌ನ ಮಾಲಕ ವಿಕ್ಕಿ ಯಾನೆ ವಿವೇಕ್ ಜಿ.ಸುವರ್ಣ(26) ಎಂದು ಗುರು ತಿಸಲಾಗಿದೆ.

ಉಡುಪಿಯ ಪಣಿಯಾಡಿ ಬಳಿಯ ಬಾಡಿಗೆ ರೂಮಿನಲ್ಲಿ ಆ.31 ರಂದು ಮಧ್ಯಾಹ್ನ 2:30ರ ಸುಮಾರಿಗೆ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದ ಉಡುಪಿಯ ಕಾನೂನು ಕಾಲೇಜಿನ ಎರಡನೆ ವರ್ಷದ ವಿದ್ಯಾರ್ಥಿ ವಿಜಯ ಕುಮಾರ್ ಶೆಟ್ಟಿಯನ್ನು ವಿಕ್ಕಿ, ಕವನ್, ಪ್ರಕಾಶ್ ಮಲ್ಪೆ ಸೇರಿದಂತೆ ಒಟ್ಟು 8-10 ಮಂದಿಯ ತಂಡವು ಅಕ್ರಮ ಪ್ರವೇಶ ಮಾಡಿ ಬಲಾತ್ಕಾರವಾಗಿ ಎಳೆದುಕೊಂಡು ಕಾರಿನಲ್ಲಿ ಅಪಹರಿಸಿತ್ತು.

ಈ ವೇಳೆ ತಡೆಯಲು ಹೋದ ಸಹಪಾಠಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದ ತಂಡ, ಹರೀಶ್ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿತ್ತು. ಬಳಿಕ ಮಧ್ಯಾಹ್ನ ವಿಜಯ್‌ ಕುಮಾರ್ ಶೆಟ್ಟಿಯ ಸ್ನೇಹಿತ ಅರುಣ್‌ಗೆ ವಿಜಯ ಕುಮಾರ್ ಶೆಟ್ಟಿಯ ಮೊಬೈಲ್‌ನಿಂದ ಕರೆ ಮಾಡಿದ ಅಪಹರಣಕಾರರು ವಿಜಯ್‌ನನ್ನು ಬಿಡಬೇಕಾದರೆ 38 ಲಕ್ಷ ರೂ. ನೀಡಬೇಕೆಂದು ಹಣದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿಜಯ್ ಅವರ ಸಹೋದರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಅರಿತ ಅಪರಹಣಕಾರರು ವಿಜಯ್‌ನನ್ನು ಕಟಪಾಡಿ- ಶಿರ್ವ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು.

ವಿಜಯ್ ಕುಮಾರ್ ಶೆಟ್ಟಿ ಹಾಗೂ ಕವನ್ ಶೆಟ್ಟಿ ಮಧ್ಯೆ ಹಣಕಾಸಿನ ವಿಚಾರ ದಲ್ಲಿ ತಕರಾರು ಇದ್ದು, ಈ ಕಾರಣಕ್ಕಾಗಿ 8-10ಮಂದಿಯ ತಂಡ ಈ ಕೃತ್ಯ ಎಸಗಿತ್ತೆಂದು ದೂರಿನಲ್ಲಿ ತಿಳಿಸಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿ, ಉಳಿದವರಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News