ಶಿರ್ತಾಡಿ ಆಸ್ಪತ್ರೆ ಅವ್ಯವಸ್ಥೆ: ಸುದತ್ತ ಜೈನ್ ಉಪವಾಸ ಸತ್ಯಾಗ್ರಹ ಅಂತ್ಯ

Update: 2017-09-04 17:50 GMT

ಮೂಡುಬಿದಿರೆ, ಸೆ. 4: ಕಾರ್ಮಿಕ ಮುಖಂಡ ಸುದತ್ತ ಜೈನ್ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವು ಮೂಡುಬಿದಿರೆ ಶಾಸಕರು, ಆರೋಗ್ಯ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಸೋಮವಾರ ಕೊನೆಗೊಳಿಸಿದ್ದಾರೆ.

ಸುದತ್ತ ಜೈನ್ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಭಯಚಂದ್ರಜೈನ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ, ತಾಲೂಕು ಆರೋಗ್ಯಾಧಿಕಾರಿ ನವೀನ್, ತಹಸೀಲ್ದಾರ್ ಮಹಮ್ಮದ್ ಇಸಾಕ್‌ರನ್ನೊಳಗೊಂಡ ತಂಡ ಸತ್ಯಾಗ್ರಹ ನಿರತ ಕಾರ್ಮಿಕ ಮುಖಂಡರ ಮನವೊಲಿಸುವಲ್ಲಿ ಸಫಲರಾದರು.

ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಕ, ರಕ್ತ ಪರೀಕ್ಷೆ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಲಭಿಸುವ ಎಲ್ಲಾ ಸೇವೆಗಳು ಲಭ್ಯವಾಗಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಸುದತ್ತ ಪ್ರತಿಭಟನೆ ಕೈಗೆತ್ತಿಕೊಂಡಿದ್ದರು.

ಈ ಸಂದರ್ಭ ಭರವಸೆ ನೀಡಿದ ಶಾಸಕ ಕೆ. ಅಭಯಚಂದ್ರ ಜೈನ್ಇಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವ ಡಾ. ನಸೀಬಾ ಅವರು ಇಲ್ಲಿಯೇ ವಾಸ್ತವ್ಯ ಹೂಡಲು ಅನುಕೂಲವಾಗುವಂತೆ 10 ದಿನಗಳ ಒಳಗೆ ತಮ್ಮ ಶಾಸಕರ ನಿಧಿಯಿಂದ ವಸತಿ ಗೃಹವನ್ನು ದುರಸ್ಥಿಪಡಿಸಲಾಗುವುದು. ಮೂಡುಬಿದಿರೆ ಯಲ್ಲಿರುವ 108 ಅಂಬುಲೆನ್ಸ್ ಪೈಕಿ ಒಂದನ್ನು ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಅವರು ಈ ಕೇಂದ್ರದಲ್ಲಿ ತುರ್ತು ಸೇವೆಗಾಗಿ ಇಬ್ಬರು ಶುಶ್ರೂಷಕಿಯರನ್ನು ನೇಮಕ ಮಾಡಿದ್ದು, ಹೊರಗುತ್ತಿಗೆ ಸಿಬ್ಬಂದಿ ಮೂಲಕ ರಕ್ತ ಪರೀಕ್ಷಾ ಸೌಲಭ್ಯವನ್ನು ಒದಗಿಸಲಾಗವುದು ಎಂದು ಲಿಖಿತವಾಗಿ ಭರವಸೆ ನೀಡಿದರು.

ಪಂಚಾಯತ್ ಅಧ್ಯಕ್ಷರ ಜೊತೆ ಜಟಾಪಟಿ : ಶಾಸಕರು ಅಧಿಕಾರಿಗಳೊಂದಿಗೆ ಆಗಮಿಸಿ ಸುದತ್ತ ಜೈನ್ ಜೊತೆ ಚರ್ಚಿಸುತ್ತಿದ್ದಾಗ ಅಲ್ಲಿಗೆ ಬಂದ ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ ಹೆಗ್ಡೆಯನ್ನು ಉಪವಾಸ ನಿರತ ಸುದತ್ತ ಜೈನ್ ತರಾಟೆಗೆತ್ತಿಕೊಂಡರು. ಈ ಸಂದರ್ಭ ಸುದತ್ತ ಜೈನ್ ಅವರ ಆಪ್ತ ಸಹಾಯಕಿ ಅನಿತಾ ಜೈನ್ ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು. ಉಪವಾಸ ಆರಂಭಿಸಿ ನಾಲ್ಕು ದಿನಗಳಾದರೂ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಭೇಟಿ ನೀಡದೇ ಇದ್ದುದು ಜಟಾಪಟಿಗೆ ಕಾರಣ.

ಸೋಮವಾರ ಶಿರ್ತಾಡಿ ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹದ ಕುರಿತಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಈ ಸಭೆಗೆ ಒಂದು ಗಂಟೆ ತಡವಾಗಿ ಆಗಮಿಸಿದ ಪಂ. ಅಧ್ಯಕ್ಷೆ ಲತಾ ಹೆಗ್ಡೆಯ ನಡೆಯನ್ನು ಖಂಡಿಸಿದ ಸ್ಥಳದಲ್ಲಿದ್ದ ಸುದತ್ತ ಜೈನ್ ಬೆಂಬಲಿಗ ಗ್ರಾಮಸ್ಥರು ಕೂಡಲೇ ಅಧ್ಯಕ್ಷರು ಸಭೆಯ ಸ್ಥಳದಿಂದ ಹೊರನಡೆಯುವಂತೆ ಒತ್ತಾಯಿಸಿದರು. ಶಿರ್ತಾಡಿ ಗ್ರಾಮಸ್ಥ ಪ್ರಶಾಂತ್ ಅಮೀನ್ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಆರೋಗ್ಯ ಭದ್ರತೆಗಾಗಿ ಓರ್ವ ವ್ಯಕ್ತಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇಲ್ಲಿಯವರೆಗೂ ಏನು ನಿಮ್ಮ ಬೇಡಿಕೆ ಎಂದು ಕೇಳುವ ಕನಿಷ್ಠ ಪ್ರಜ್ಞೆ ನಿಮಗಿಲ್ಲವೇ ಎಂದು ನೇರವಾಗಿ ಪ್ರಶ್ನಿಸಿದರಲ್ಲದೇ ಅಧ್ಯಕ್ಷರು ಸಭೆಯಿಂದ ಹೊರಹೋಗದಿದ್ದಲ್ಲಿ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ಲತಾ ಹೆಗ್ಡೆ ತಾನು ರವಿವಾರ  ಆರೋಗ್ಯ ಕೇಂದ್ರದ ವೈದ್ಯೆ ಡಾ. ನಸೀಬಾ ಅವರ ಜೊತೆ ಚರ್ಚಿಸಿದ್ದೇನೆ. ಈ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಅವರ ಜೊತೆ ಮಾತನಾಡಿದ್ದೇನೆ ಎಂದು ವಿವರಣೆ ನೀಡಿದರು. ನಂತರ ಶಾಸಕ ಅಭಯಚಂದ್ರ ಜೈನ್ ಮಧ್ಯಪ್ರವೇಶಿಸಿ ಗ್ರಾಮದ ಪ್ರಥಮ ಪ್ರಜೆಯನ್ನು ಗೌರವಿಸಬೇಕು ಎಂದು ಹೇಳಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

300ಕ್ಕೂ ಅಧಿಕ ಗ್ರಾಮಸ್ಥರು ಉಪವಾಸ ನಿರತ ಸುದತ್ತ ಜೈನ್ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದು, ಈ ಬಗ್ಗೆ ಅವರ ನೋಂದಣಿ ಪುಸ್ತಕದಲ್ಲಿ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ. ಸೋಮವಾರ ಸುದತ್ತ ಜೈನ್ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿದ್ದು, ರಕ್ತದೊತ್ತಡ ಹಾಗೂ ಸಕ್ಕರೆ ಪ್ರಮಾಣದಲ್ಲಿ ಏರುಪೇರಾಗಿದ್ದು ಈ ಸಂದರ್ಭ ಅಧಿಕಾರಿಗಳು ಹಾಗೂ ವೈದ್ಯರು ಉಪವಾಸ ಕೈಬಿಡುವಂತೆ ವಿನಂತಿಸಿದರು. ಆದರೆ ಅದಕ್ಕೆ ಸುದತ್ತ ಜೈನ್ ಸೊಪ್ಪು ಹಾಕಲಿಲ್ಲ. ಕಡೆಗೆ ಭರವಸೆಗಳನ್ನು ಲಿಖಿತವಾಗಿ ನೀಡಬೇಕು ಎಂಬ ಬೇಡಿಕೆಯಂತೆ ಆರೋಗ್ಯಧಿಕಾರಿ ಲಿಖಿತವಾಗಿ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಸುಜಾತ, ತಾ.ಪಂ ಸದಸ್ಯೆ ರಜನಿ, ಪಂ. ಅಧ್ಯಕ್ಷೆಲತಾ ಹೆಗ್ಡೆ, ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಸಂಪತ್ ಸಾಮ್ರಾಜ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News