ಮೂಡುಬಿದಿರೆಯಲ್ಲಿ ವಿಶ್ವ ತೆಂಗು ದಿನಾಚರಣೆ

Update: 2017-09-04 18:29 GMT

ಮೂಡುಬಿದಿರೆ, ಸೆ.4: ಬೆಂಗಳೂರು ತೆಂಗು ಅಭಿವೃದ್ಧಿ ಮಂಡಳಿ, ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್, ಮೂಡುಬಿದಿರೆ ವಲಯ ತೆಂಗು ಉತ್ಪಾದಕರ ಫೆಡರೇಶನ್ ಮತ್ತು ಎಂಸಿಎಸ್ ಬ್ಯಾಂಕ್ ಮೂಡುಬಿದಿರೆ ಇವುಗಳ ಜಂಟಿ ಸಹಯೋಗದಲ್ಲಿ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ವಿಶ್ವ ತೆಂಗು ದಿನಾಚರಣೆಯಲ್ಲಿ ಮೂಡುಬಿದಿರೆ ಫೆಡರೇಶನ್‌ನ ಅಧ್ಯಕ್ಷ ಹೆಚ್.ಧನಕೀರ್ತಿ ಬಲಿಪ ಅವರಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸಾಂಕೇತಿಕವಾಗಿ ತೆಂಗು ಸಸಿಯನ್ನು ವಿತರಿಸಿದರು.

ನಂತರ ಮಾತನಾಡಿದ ಅವರು ಮನುಷ್ಯನ ಜತೆ ಅವಿನಾವಭಾವ ಸಂಬಂಧವನ್ನು ಹೊಂದಿರುವ ಕೃಷಿ ಕಲ್ಪವೃಕ್ಷ. ತೆಂಗು ಕೃಷಿಯಲ್ಲೂ ಪ್ರಯೋಗಶೀಲತೆ ಯನ್ನು ಬಳಸಿ ಗುಣಮಟ್ಟವನ್ನು ಹೆಚ್ಚಿಸಿದರೆ ಮುಂದಿನ 10 ವರ್ಷಗಳಲ್ಲಿ ಇತರ ಎಲ್ಲಾ ಕೃಷಿಗಳಿಗಿಂತಲೂ ತೆಂಗಿಗೆ ಬೇಡಿಕೆ ಹೆಚ್ಚಬಹುದು ಎಂದರು.

 ತುಮಕೂರು ಮತ್ತು ದಾವಣಗೆರೆಯಲ್ಲಿ ಅತೀ ಹೆಚ್ಚು ತೆಂಗು ಕೃಷಿಯನ್ನು ಮಾಡುತ್ತಿದ್ದು ಅದರಲ್ಲಿ ಗುಣಮಟ್ಟದ ಕೊರತೆ ಇರುವುದರಿಂದ ವಿದೇಶಗಳಲ್ಲಿ ಮಾರ್ಕೆಟ್ ಸಿಗದೆ ತೆಂಗಿನ ಉತ್ಪನ್ನಗಳು ಮರಳಿ ಬರುತ್ತಿವೆ. ಆದರೆ ದ.ಕ ಮತ್ತು ಉಡುಪಿ ಜಿಲ್ಲೆಯ ತೆಂಗು ಉತ್ತಮ ಗುಣಮಟ್ಟವನ್ನು ಹೊಂದಿದೆ ಆದರೆ ಇಲ್ಲಿ ತೆಂಗು ಬೆಳೆಸುವ ಕೃಷಿಕರು ಕಡಿಮೆ ಇರುವುದರಿಂದ ತೊಂದರೆಯಾಗಿದೆ ಎಂದು ಹೇಳಿದ ಅವರು ದ.ಕ ಉಡುಪಿ ಜಿಲ್ಲೆಯ ಕೃಷಿಕರು ತೆಂಗು ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಹೇಳಿದರು.

ಹಿರಿಯ ಪ್ರಗತಿಪರ ತೆಂಗು ಕೃಷಿಕ ಮುರುವ ಮಹಾಬಲ ಭಟ್ಟ ಅಧ್ಯಕ್ಷತೆಯಲ್ಲಿ ಪ್ರಗತಿಪರ ತೆಂಗು ಕೃಷಿಕ ಉಳಿಪ್ಪಾಡಿಗುತ್ತು ರಾಜೇಶ್ ನಾಕ್ ಅವರು ತೆಂಗಿನ ಸಸಿಗೆ ಹಾಲು ಸುರಿಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕುಂದಾಪುರ ತೆಂಗು ಫೆಡರೇಶನ್‌ನ ಉಪಾಧ್ಯಕ್ಷ ಸತ್ಯನಾರಾಯಣ ಉಡುಪ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬೈಲುಗುತ್ತು ಶ್ರೀಧರ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.

 ಹೆಚ್. ಧನಕೀರ್ತಿ ಬಲಿಪ ಸ್ವಾಗತಿಸಿದರು. ಸಿ.ಡಿ.ಬಿ ಫಾರ್ಮ್ ಮೆನೇಜರ್ ಬಿ.ಚಿನ್ನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವ ನಾಯ್ಕಾ ಮತ್ತು ಶೇಖ್ ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ತೆಂಗು ಉತ್ಪಾದಕರ ಫೆಡರೇಶನ್‌ನ ಪ್ರ. ಕಾರ್ಯದರ್ಶಿ ನಡಿಕಂಬಳಿಗುತ್ತು ಮನೋಹರ ಶೆಟ್ಟಿ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ತೆಂಗು ಕೃಷಿ, ಮಾರ್ಕೆಟಿಂಗ್, ಕೊಳೆರೋಗ ಇವುಗಳ ಬಗ್ಗೆ ವಿಜ್ಞಾನಿಗಳಾದ ಸಿಮಿ ತೋಮಸ್, ಲತಾರಾಣಿ ಮತ್ತಿತರರು ವಿಚಾರಗೋಷ್ಠಿ ನಡೆಸಿಕೊಟ್ಟರು. ಕೃಪಾ ಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News