ಅಶ್ರಫ್ ಕಲಾಯಿ ಸ್ಮರಣಾರ್ಥ ಅಳವಡಿಸಿದ್ದ ನಾಮಫಲಕ ತಹಶೀಲ್ದಾರ್ ನೇತೃತ್ವದಲ್ಲಿ ತೆರವು

Update: 2017-09-05 12:16 GMT

ಬಂಟ್ವಾಳ, ಸೆ. 5: ಎರಡು ತಿಂಗಳ ಹಿಂದೆ ಹತ್ಯೆಯಾದ ಅಶ್ರಫ್ ಕಲಾಯಿ ಸ್ಮರಣಾರ್ಥ ಕಲಾಯಿಯಲ್ಲಿ ಅಳವಡಿಸಿದ್ದ ಅನಧಿಕೃತ ನಾಮಫಲಕವನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳವಾರ ತೆರವುಗೊಳಿಸಲಾಯಿತು.

ಅಶ್ರಫ್ ಸ್ಮರಣಾರ್ಥವಾಗಿ ಕಲಾಯಿ ಪರಿಸರದ ವಿವಿಧ ರಸ್ತೆಗಳಿಗೆ ಅಶ್ರಫ್ ಹೆಸರಿರುವ ನಾಮ ಫಲಕವನ್ನು ಅಳವಡಿಸಲಾಗಿತ್ತು. ಅಲ್ಲದೆ ಮುಖ್ಯ ರಸ್ತೆಯಲ್ಲಿ ಬಸ್ ತಂಗುದಾನ, ಕಲಾಯಿ ಮಸೀದಿ ಎದುರು ಹೈಮಾಸ್ಟ್ ದೀಪ, ಕುಡಿಯುವ ನೀರು, ಧ್ವಜ ಸ್ಥಂಬವನ್ನು ನಿರ್ಮಿಸಲಾಗಿತ್ತು. ಹತ್ಯೆಯಾಗಿ 40ನೆ ದಿನದಂದು ಕಲಾಯಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಎಸ್‌ಡಿಪಿಐ ಮುಖಂಡರು ಇವುಗಳನ್ನು ಉದ್ಘಾಟನೆ ಮಾಡಿದ್ದರು. ಸ್ಥಳೀಯ ಪಂಚಾಯತ್‌ನಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಉದ್ಘಾಟನೆ ನಡೆದ ಕೆಲವೇ ತಾಸಿನಲ್ಲಿ ಬಸ್ಸು ನಿಲ್ದಾಣಕ್ಕೆ ಅಳವಡಿಸಿದ್ದ ಅಶ್ರಫ್ ಹೆಸರಿರುವ ಫಲಕವನ್ನು ತಹಶೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿತ್ತು.

ಇಂದು ನಡೆದ ಕಾರ್ಯಾಚರಣೆಯಲ್ಲಿ ಮೂರು ಮಾರ್ಗ ಸೂಚಿ ಫಲಕ, ಹೈಮಾಸ್ಟ್ ದೀಪಕ್ಕೆ ಅಳವಡಿಸಿದ್ದ ಅಶ್ರಫ್ ಹೆಸರಿರುವ ಫಲಕವನ್ನು ತೆರವುಗೊಳಿಸಲಾಯಿತು. ಉಳಿದಂತೆ ಮಸೀದಿ ಎದುರು ಇರುವ ಕುಡಿಯುವ ನೀರಿನ ರೆಫ್ರಿಜರೇಟರ್, ಧ್ವಜ ಸ್ಥಂಬಕ್ಕೆ ಅಳವಡಿಸಿರುವ ಅಶ್ರಫ್ ಹೆಸರಿರುವ ಫಲಕವನ್ನು 15 ದಿನಗಳ ಒಳಗೆ ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ನೋಟಿಸ್ ನೀಡಿ. 15 ದಿನಗಳಲ್ಲಿ ತೆರವುಗೊಳಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಅಮ್ಮುಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತರಿಗೆ ತಹಶೀಲ್ದಾರ್ ಸೂಚಿಸಿದರು. ತೆರವು ಸಂದರ್ಭದಲ್ಲಿ ವಿರೋಧ ವ್ಯಕ್ತವಾಗಬಹುದು ಎಂಬ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೆ ಯಾವುದೇ ವಿರೋಧ ವ್ಯಕ್ತವಾಗದೆ ತೆರವು ಕಾರ್ಯಾಚರಣೆ ಸುಗಮವಾಗಿ ನಡೆಯಿತು.

ಬಂಟ್ವಾಳ ಗ್ರಾಮಾಂತರ ಠಾಣೆ ಎಸ್ಸೈ ಉಮೇಶ್ ಕುಮಾರ್ ಹಾಗೂ ಅವರ ಸಿಬ್ಬಂದಿ, ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಯಾವುದೇ ನಾಮ ಫಲಕವನ್ನು ಅಳವಡಿಸುವಾಗ ಸ್ಥಳೀಯ ಆಡಳಿತದಿಂದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಕಲಾಯಿ ಪರಿಸರದಲ್ಲಿ ಅಶ್ರಫ್ ಸ್ಮರಣಾರ್ಥ ಅಳವಡಿಸಿದ್ದ ಫಲಕಗಳಿಗೆ ಅನುಮತಿ ಪಡೆದಿಲ್ಲ. ಕೋಮು ಸೂಕ್ಷ್ಮ ಪ್ರದೇಶವಾದ ಇಲ್ಲಿ ಮುಂಜಾಗೃತ ಕ್ರಮವಾಗಿ ಕಾನೂನು ಪ್ರಕಾರ ಫಲಕಗಳನ್ನು ತೆರವುಗೊಳಿಸಲಾಗಿದೆ.
- ಪುರಂದರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್

ಬಸ್ ನಿಲ್ದಾಣ ಸಹಿತ ಪ್ರತೀಯೊಂದು ಫಲಕವನ್ನು ಅಳವಡಿಸುವ ಮೊದಲು ಅನುಮತಿಗಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಗ್ರಾಪಂ ಅನುಮತಿ ನೀಡಿಲ್ಲ. ಸೋಮವಾರ ಪಿಡಿಒ ಕರೆ ಮಾಡಿ ಎಲ್ಲ ಫಲಕಗಳನ್ನು ತೆರವುಗೊಳಿಸುವಂತೆ ಗ್ರಾಮಾಂತರ ಠಾಣೆಯಿಂದ ನೋಟಿಸ್ ಬಂದಿದೆ ಎಂದಿದ್ದರು. ಹೈಮಾಸ್ಟ್ ದೀಪ, ಧ್ವಜಸ್ಥಂಬ, ರೆಫ್ರಿಜರೇಟರ್ ಖಾಸಗಿ ಜಾಗದಲ್ಲಿ ಇದೆ. ಅಶಾಂತಿಗೆ ಕಾರಣವಾಗುವುದಾದರೆ ಎಲ್ಲವನ್ನು ತೆರವುಗೊಳಿಸಿ. ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದ್ದೆ.
- ಇಮ್ತಿಯಾಝ್ ಕಲಾಯಿ, ಎಸ್‌ಡಿಪಿಐ ಮುಖಂಡ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News