ಬಿಜೆಪಿಯ ಬೈಕ್ ರ್ಯಾಲಿ: ಸಾರ್ವಜನಿಕ ಸಭೆಯ ಬಗ್ಗೆ ಮುಂದುವರಿದ ಗೊಂದಲ

Update: 2017-09-05 16:44 GMT

ಮಂಗಳೂರು, ಸೆ.5: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಪಿಎಫ್‌ಐ-ಎಸ್‌ಡಿಪಿಐಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಮತ್ತು ಸಾರ್ವಜನಿಕ ಸಭೆಯು ಸೆ.7ರಂದು ಮಂಗಳೂರು ನಡೆಯುವ ಬಗ್ಗೆ ಗೊಂದಲ ಮುಂದುವರಿದಿದೆ.

ಈಗಾಗಲೆ ಬೈಕ್ ರ್ಯಾಲಿಗೆ ಮಂಗಳೂರು ನಗರ ಪೊಲೀಸ್ ಅಯುಕ್ತರು ಅನುಮತಿ ನಿರಾಕರಿಸಿದ್ದರೆ, ಬೈಕ್ ರ್ಯಾಲಿ ನಡೆಸಿಯೇ ಸಿದ್ಧ. ತಾಕತ್ತಿದ್ದರೆ ಕಾರ್ಯಕ್ರಮ ತಡೆಯಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಇದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದ್ದು, ಬಿಜೆಪಿಗರು ಕಾರ್ಯಕ್ರಮ ನಡೆಸುತ್ತಾರಾ? ಪೊಲೀಸರು ಕಾರ್ಯಕ್ರಮಕ್ಕೆ ತಡೆಯೊಡ್ಡುತ್ತಾರಾ? ಎಂಬುದು ಇದೀಗ ಜಿಲ್ಲಾದ್ಯಂತ ಚರ್ಚೆಯ ವಿಷಯವಾಗಿ ಪರಿಣಮಿಸಿದೆ.

ಇವೆಲ್ಲದರ ಮಧ್ಯೆ ಸರಕಾರದ ಸೂಚನೆಯ ಮೇರೆಗೆ ಬಿಜೆಪಿ ನಡೆಸಲು ಉದ್ದೇಶಿಸಿರುವ ಬೈಕ್ ರ್ಯಾಲಿ ಮತ್ತು ಸಾರ್ವಜನಿಕ ಸಭೆಯನ್ನು ತಡೆಯಲು ಮಂಗಳೂರು ನಗರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.

ಮಂಗಳವಾರ ರಾತ್ರಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿ ಹನುಮಂತರಾಯ, ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳು ಅಧೀನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

ಬೈಕ್ ರ್ಯಾಲಿಗೆ ಈಗಾಗಲೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರೂ ಕೂಡ ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಲು ಬಿಜೆಪಿ ಅನುಮತಿ ಕೇಳಿದೆ. ಈ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ವಿಸ್ತೃತ ಚರ್ಚೆ ನಡೆಸಿದ್ದು, ಅಂತಿಮವಾಗಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಡಿಸಿಪಿ ಹನುಮಂತರಾಯ ನೆಹರೂ ಮೈದಾನದಲ್ಲಿ ಸಭೆ ನಡೆಸಲು ಅವಕಾಶ ಕಲ್ಪಿಸುವಂತೆ ಬಿಜೆಪಿಗರು ಅನುಮತಿ ಕೇಳಿದ್ದಾರೆ. ಈ ಕುರಿತು ಚರ್ಚಿಸಲು ಬಿಜೆಪಿ ಮುಖಂಡರನ್ನು ಕಮಿಷನರ್ ಬುಧವಾರ ಕಚೇರಿಗೆ ಆಹ್ವಾನಿಸಿದ್ದಾರೆ. ಕಾರ್ಯಕ್ರಮದ ರೂಪುರೇಷದ ಕುರಿತು ಬಿಜೆಪಿ ನಾಯಕರಿಂದ ಮಾಹಿತಿ ಪಡೆದುಕೊಂಡ ಬಳಿಕ ಕಮಿಷನರ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ತನ್ಮಧ್ಯೆ ಮುಂಜಾಗರೂಕತಾ ಕ್ರಮವಾಗಿ ಸೆ.144 ಹಾಕುವ ಬಗ್ಗೆಯೂ ಪೊಲೀಸರಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಸಾರ್ವಜನಿಕರು ಮಾತ್ರ ಆತಂಕಿತರಾಗಿದ್ದು, ಕಾರ್ಯಕ್ರಮದ ನಡೆಯುತ್ತೋ, ಇಲ್ಲವೋ ಎಂಬುದರ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿದೆ.
 
ಹೊರ ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ಮೂಲಕ ‘ಮಂಗಳೂರು ಚಲೋ’ ನಡೆಸಲು ಮುಂದಾಗಿದ್ದ ಹಲವರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ಮುಂಜಾಗರೂಕತಾ ಕ್ರಮವಾಗಿ ಜಿಲ್ಲೆಯಲ್ಲಿ ಈವರೆಗೆ ಯಾರನ್ನೂ ವಶಕ್ಕೆ ತೆಗೆದುಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಹೊರ ಜಿಲ್ಲೆಯ ಅಧಿಕಾರಿಗಳು: ಈಗಾಗಲೆ ನಗರಕ್ಕೆ 6 ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲದೆ ಹೊರ ಜಿಲ್ಲೆಯ ಸುಮಾರು 100 ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ಮಧ್ಯೆ ಆರ್‌ಎಎಫ್, ಕೆಎಸ್ಸಾರ್ಪಿ, ಸಿಎಆರ್ ಪ್ಲಟೂನ್ಸ್ ಕೂಡ ಜನರಿಗೆ ಧೈರ್ಯ ತುಂಬಲು ಅಲ್ಲಲ್ಲಿ ಪಥಸಂಚಲನ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News