ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಖಂಡನೆ

Update: 2017-09-05 17:47 GMT

ಬೆಂಗಳೂರು, ಸೆ. 5: ಸಮಾಜವಾದಿ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.

ವಿಚಾರವಾದಿಗಳನ್ನು ನಿರ್ದಯವಾಗಿ ಹತ್ಯೆಗೈಯ್ಯುವ ಸರಣಿ ಮುಂದುವರಿದಿದ್ದು, ಗೌರಿ ಲಂಕೇಶ್ ರವರ ಹತ್ಯೆಯು ಇದರ ಮುಂದುವರಿದ ಭಾಗವಾಗಿದೆ.

ಅಭಿವ್ಯಕ್ತಿ ಸ್ಞಾತಂತ್ರ್ಯವನ್ನು ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದ ಮತ್ತು ಮತಾಂಧ ಶಕ್ತಿಗಳ ವಿರುದ್ಧ ನಿರಂತರ ವೈಚಾರಿಕ ಸಂಘರ್ಷಕ್ಕಿಳಿದಿದ್ದ ವಿಚಾರವಾದಿ ಗಳಾಗಿದ್ದ ದಾಭೋಲ್ಕರ್, ಪನ್ಸಾರೆ, ಡಾ.ಎಂ.ಎಂ.ಕಲ್ಬುರ್ಗಿಯರನ್ನು ಕೂಡ ಇದೇ ರೀತಿಯಲ್ಲಿ ಹತ್ಯೆ ನಡೆಸಲಾಗಿತ್ತು. ದಾಭೋಲ್ಕರ್ ರವರ ಹತ್ಯೆಯ ಹಿಂದೆ ಸನಾತನ ಸಂಸ್ಥೆಯ ಹೆಸರು ಕೂಡ ಕೇಳಿಬಂದಿದೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಸಂಘಪರಿವಾರದ ಜನವಿರೋಧಿ ನೀತಿಗಳು ಮತ್ತು ಮತಾಂಧತೆಯ ವಿರುದ್ಧ ಮಾತನಾಡುವ ವಿಚಾರವಾದಿಗಳ ಮೇಲಿನ ದಾಳಿಗಳು ತೀವ್ರವಾಗಿದೆ. ಇದರ ವಿರುದ್ಧ ಜನಾಕ್ರೋಶವು ಭುಗಿಲೆದ್ದು, ಸಾಹಿತಿಗಳು ಪ್ರಶಸ್ತಿ ವಾಪಸಿಯಂತಹ ದೊಡ್ದ ಅಭಿಯಾನವನ್ನೇ ಹಮ್ಮಿಕೊಂಡಿದ್ದರು. ಆದರೆ ಜವಾಬ್ದಾರಿಯುತ ಸರಕಾರಗಳು ದುಷ್ಕರ್ಮಿಗಳನ್ನು ಬಂಧಿಸದೇ, ಸಾಹಿತಿಗಳ ಹತ್ಯೆಯ ಹಿಂದಿನ ಷಂಡ್ಯತ್ರವನ್ನು ಬಹಿರಂಗಪಡಿಸಲು ವಿಫಲವಾಗಿವೆ.

ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆ ನಡೆದು  ಎರಡು ವರುಷಗಳು ಕಳೆದರೂ ಹತ್ಯೆಯ ಹಿಂದಿನ ಸೂತ್ರಧಾರಿಗಳನ್ನು ಬಂಧಿಸುವ ಕಾರ್ಯ ನಡೆದಿಲ್ಲ. ದುಷ್ಕರ್ಮಿಗಳ ಬಂಧನಕ್ಕೆ ಅಗ್ರಹಿಸಿ ವಾರದ ಹಿಂದಷ್ಟೇ ರಾಜ್ಯದ ರಾಜಧಾನಿಯಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ದಿನಗಳ ಅಂತರದಲ್ಲಿ ಮತ್ತೋರ್ವ ವಿಚಾರವಾದಿಯ ಹತ್ಯೆ ನಡೆದಿರುವುದು ನಾಗರಿಕ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದೆ. 

ವಿಚಾರವಾದಿಗಳ ಹತ್ಯೆಯ ಹಿಂದಿರುವ ದುಷ್ಕರ್ಮಿಗಳನ್ನು ಮತ್ತು ಷಡ್ಯಂತ್ರದ ರೂವಾರಿಗಳನ್ನು ಕಾನೂನಿನ ಕುಣಿಕೆಗೆ ತರಲು ಸರಕಾರವು ತುರ್ತು ಕ್ರಮಕೈಕೊಳ್ಳಬೇಕು ಹಾಗು ವಿಚಾರವಾದಿಗಳ ಜೀವಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಈ ಹತ್ಯಾ ಪ್ರಕರಣದ ತನಿಖೆಯನ್ನು ಎನ್.ಐ.ಎ.ಗೆ ವಹಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News