ಕನ್ನಡ ಹೋರಾಟಗಾರರ ಮೇಲಿನ ಪೊಲೀಸ್ ಕೇಸು ಹಿಂದಕ್ಕೆ ಪಡೆಯಲು ಕ್ರೈಸ್ತರ ಸಂಘ ಆಗ್ರಹ

Update: 2017-09-06 15:23 GMT

ಉಡುಪಿ, ಸೆ.6: ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ ಸಂದರ್ಭದಲ್ಲಿ ಕರಾವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕರವೇ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಹಾಕಿರುವ ಪೊಲೀಸ್ ಕೇಸುಗಳನ್ನು ಹಿಂದೆಗೆದು ಕೊಳ್ಳುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಈ ಕುರಿತು ಮುಖ್ಯಮಂತ್ರಿಗೆ ಮನವಿಯನ್ನು ಅರ್ಪಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಿಲ್‌ರಾಜ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರಾವೇ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಏಪಿಸಿ ಸೆಕ್ಷನ್‌ಗಳನ್ನು ಹಾಕಲಾಗಿದೆ. ಅಲ್ಲದೇ ಕಳೆದ ಹಲವು ವರ್ಷಗಳಿಂದ ಕನ್ನಡಪರ ಹೋರಾಟಗಳ ಸಂದರ್ಭದಲ್ಲಿ ಹಾಕಲಾದ ಸಾವಿರಾರು ಕೇಸುಗಳು ಕನ್ನಡ ಕಾರ್ಯಕರ್ತರ ಮೇಲೆ ಇನ್ನೂ ಇದ್ದು, ಇದಕ್ಕಾಗಿ ಪ್ರತಿದಿನ ಕೋರ್ಟುಗಳಿಗೆ ಅಲೆಯುವಂತಾಗಿದೆ.

ಇತ್ತೀಚೆಗೆ ರಾಜ್ಯ ಸರಕಾರ ಹಲವು ಕನ್ನಡಪರ ನಿರ್ಧಾರಗಳನ್ನು ಪ್ರಕಟಿಸಿದ್ದು, ಅವುಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದರೊಂದಿಗೆ ಕನ್ನಡಪರ ಹೋರಾಟಗಾರರ ಮೇಲಿನ ಸಾವಿರಾರು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News