ಉತ್ತಮ ಮಾದರಿಗಳು ಜಿಲ್ಲೆಯಿಂದ ಬರಲಿ: ವಿಜಯಭಾಸ್ಕರ್

Update: 2017-09-06 16:16 GMT

ಉಡುಪಿ, ಸೆ.6: ಮುಂದುವರಿದ ಜಿಲ್ಲೆಯಾದ ಉಡುಪಿಯಿಂದ ಅತ್ಯುತ್ತಮ ಅಭಿವೃದ್ಧಿ ಮಾದರಿಗಳು ಮೂಡಿಬರಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಸಿ. ವಿಜಯಭಾಸ್ಕರ್ ಹೇಳಿದ್ದಾರೆ.

ಮಂಗಳವಾರ ದಿನವಿಡೀ ಉಡುಪಿ, ಕುಂದಾಪುರಗಳಲ್ಲಿ ಸಂಚರಿಸಿ, ಸ್ವಚ್ಛ ಉಡುಪಿ ಮಿಷನ್, ಕುಂದಾಪುರ ತಾಲೂಕು ಆಸ್ಪತ್ರೆ, ಕುಂಬಾಶಿ ಮಕ್ಕಳ ಮನೆ, ಅಂಗನವಾಡಿ, ಕಾವ್ರಾಡಿ ರೈತರನ್ನು ಭೇಟಿ ಮಾಡಿ ಮಾತನಾಡಿಸಿದ ಅವರು ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಸ್ಥಳಪರಿಶೀಲನೆ ನಡೆಸಿದರು. ಬಳಿಕ ಸಂಜೆ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು.

ಜಿಲ್ಲೆ ಶಿಕ್ಷಣದಲ್ಲಿ ಮುಂದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಎಲ್ಲಾ ಮಕ್ಕಳ ತೇರ್ಗಡೆಯೊಂದೇ ಗುರಿಯಾಗಿರದೆ, ಅತ್ಯುತ್ತಮ ಅಂಕ ಗಳೊಂದಿಗೆ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಗುರಿಯಾಗಬೇಕು. ಬಿಸಿಎಂ ಹಾಸ್ಟೆಲ್ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸಾಗುವ ಗುರಿ ನಿಗದಿ ಉಡುಪಿ ಜಿಲ್ಲೆಯಲ್ಲಿ ಆಗಬೇಕೆಂದು ಅಧಿಕಾರಿಗಳಿಗೆ ಹೇಳಿದರು.

ಐಟಿಡಿಪಿ ಇಲಾಖೆ ಸಾಧನೆಗಳ ಬಗ್ಗೆ ಮಾಹಿತಿ ಪಡೆದ ಅವರು, ವಿದ್ಯಾಸಿರಿ ಹಾಗೂ ಸ್ಕಾಲರ್‌ಷಿಪ್ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ದೊರಕು ವುದನ್ನು ಖಾತರಿಪಡಿಸಿಕೊಳ್ಳುವಂತೆ ತಿಳಿಸಿದರು. ವಾರಾಹಿ ಯೋಜನೆಯ ಬಗ್ಗೆಯೂಅವರು ಮಾಹಿತಿ ಪಡೆದುಕೊಂಡರು.

ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಲ್ಲಿಗೆ ತೆರಳಿ ಆಸ್ಪತ್ರೆಯನ್ನು ಶುಚಿಮಾಡಿಸಿ, ಹಾಸಿಗೆಗೆ ಹೊಸ ಬೆಡ್‌ಶೀಟ್‌ಗಳನ್ನು ಹಾಕಿಸಿ, ಬೆಡ್‌ಗಳಿಗೆ ರೆಕ್ಸಿನ್ ಹಾಕಿಸಿ ಫೋಟೋವನ್ನು ತಮಗೆ ನಾಳೆಯೇ ಕಳುಹಿಸಬೆೀಕೆಂದು ವಿಜಯಭಾಸ್ಕರ್ ಸೂಚಿಸಿದರು.

ಕುಂಬಾಶಿ ಮಕ್ಕಳ ಮನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಸರಕಾರಿ ಶಾಲೆಗಳು ಮತ್ತು ಅಂಗನವಾಡಿಗಳ ಅಭಿವೃದ್ಧಿಗೆ ಸಹಕಾರಿ ಇಲಾಖೆ ಜಿಲ್ಲೆಯಲ್ಲಿ ಸದೃಢವಾಗಿರುವ ಸಹಕಾರಿ ಬ್ಯಾಂಕ್‌ಗಳು ನೆರವನ್ನು ಪಡೆಯುವಂತೆ ತಿಳಿಸಿದರು.ಕೃಷಿ ಬೀಳು ಭೂಮಿಯಲ್ಲಿ ಕೃಷಿ ಅರಣ್ಯೀಕರಣ ನಡೆಸಲು ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಬೇಕು. ಜಿಲ್ಲೆಯ 14,000 ಹೆಕ್ಟೆರ್ ಬೀಳುಭೂಮಿಯಲ್ಲಿ ಕನಿಷ್ಟ ಎರಡು ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಅರಣಿ್ಯೀಕರಣ ನಡೆಸುವಂತೆ ನುಡಿದರು.

ಕೃಷಿ ಇಲಾಖೆ ಕೃಷಿಕರ ಜೊತೆ ಇನ್ನಷ್ಟು ನಿಕಟಸಂಪರ್ಕವನ್ನಿರಿಸಿಕೊಂಡು ಉತ್ತಮ ಭತ್ತದ ತಳಿ, ಶೇಂಗಾ ಬೀಜ ನೀಡುವಂತಾಗಬೇಕು. ಯಾಂತ್ರೀಕೃತ ಕೃಷಿಗೆ ಒತ್ತು ನೀಡಬೇಕು. ಬೀಜ ವಿತರಣೆಗೂ ಸಹಕಾರಿ ಇಲಾಖೆ ಸೊಸೈಟಿಗಳ ಮೂಲಕ ನೆರವಾಗಬೇಕು ಎಂದರು. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆ ಪ್ರತೀ ವರ್ಷ ಹೆಚ್ಚಾಗುತ್ತಿದ್ದು, ರೈತ ಉತ್ಪಾದಕ ಸಂಘಗಳನ್ನು ಹೆಚ್ಚು ಮಾಡಬೇಕು. ಬೀದರ್ ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಉತ್ತಮ ಕೆಲಸವಾಗಿದ್ದು, ಅಲ್ಲಿನ ಮಾದರಿಯನ್ನುಅನುಸರಿಸಲು ತೋಟಗಾರಿಕಾ ಉಪನಿರ್ದೇಶಕರಿಗೆ ತಿಳಿಸಿದರು.

 ಪಶುಭಾಗ್ಯ, ಹಾಲಿನ ಉತ್ಪಾದನೆ, ಮೀನುಗಾರಿಕೆ, ಜೇನುಸಾಕಾಣಿಕೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಸಹಕಾರಿ ಇಲಾಖೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಎಲ್ಲ ರೈತರಿಗೆ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ್ ಕಂಪೆನಿಗಳ ಕಾಮಗಾರಿ ವಿಳಂಬವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಅವರು ಅಭಿವೃದ್ಧಿ ಆಯುಕ್ತರ ಗಮನಕ್ಕೆ ತಂದು ಜಿಲ್ಲಾಡಳಿತದ ಸೂಚನೆಗಳನ್ನು ನಿರ್ಲಕ್ಷ ಮಾಡುತ್ತಿರುವ ಬಗ್ಗೆ ದೂರಿದರು.

ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ವಿಜಯಭಾಸ್ಕರ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News