ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮಂಗಳೂರು ವಿವಿಯಲ್ಲಿ ಪ್ರತಿಭಟನಾ ರ್ಯಾಲಿ

Update: 2017-09-07 17:22 GMT

ಕೊಣಾಜೆ, ಸೆ. 7: ಜಾತಿ, ಧರ್ಮ ಆಧಾರಿತ ಸಿದ್ಧಾಂತಗಳಲ್ಲಿ ಹತ್ಯೆಗಳು ನಡೆಯುತ್ತಿರುವುದು ತೀರಾ ಕಳವಳಕಾರಿಯಾದ ಸಂಗತಿಯಾಗಿದೆ. ಪ್ರತಿಯೊಬ್ಬರಿಗೂ ಅವರವರ ಸಿದ್ಧಾಂತಗಳನ್ನು ಪ್ರತಿಪಾದಿಸಲು ಸಾಂವಿಧಾನಿಕವಾಗಿ ಅವಕಾಶವಿದೆ ಅದನ್ನು ಹತ್ಯೆ ಮೂಲಕ ತಡೆಯುವುದು ಮಾನವೀಯತೆಯ ವಿರುದ್ಧವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರಘು ಅವರು ಹೇಳಿದರು.

ಅವರು ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಆವರಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ನೇತೃತ್ವದದಲ್ಲಿ ಗುರುವಾರ ಜರಗಿದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯು ಪ್ರತಿಯೊಂದು ಜಾತಿ ಧರ್ಮದವರು ಅನ್ಯೋನ್ಯವಾಗಿ ಬಾಳುವಂತಹ ಸುಂದರ ನಾಡಾಗಿತ್ತು. ಆದರೆ ರಾಜಕೀಯ ದುರುದ್ದೇಶಗಳಿಂದ ಇದೀಗ ಜಾತಿ ಧರ್ಮದ ಆಧಾರದಲ್ಲಿ ನಾಡು ತುಂಡಾಗುತ್ತಿದೆ. ಜನರು ಅಮಾನವೀಯತೆಯಿಂದ ವರ್ತಿಸುವ ಮೂಲಕ ಅಶಾಂತಿ ನಿರ್ಮಾಣವಾಗುತ್ತಿದೆ. ರಾಜ್ಯಾದ್ಯಂತ ಸಿದ್ಧಾಂತಗಳ ಆಧಾರದಲ್ಲಿ ಹತ್ಯೆಗಳು ನಡೆಯುತ್ತಿರುವುದು ಸಮಾಜಕ್ಕೆ ಕಂಟಕವಾಗಿದೆ. ಗೌರಿ ಲಂಕೇಶ್ ಹತ್ಯೆಯೂ ಅಮಾನುಷವಾಗಿ ನಡೆದಿರುವುದು ಮಹಿಳಾ ಸಮಾಜಕ್ಕೆ ಮಾಡಿರುವ ಅನ್ಯಾಯವಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಪತ್ತೆಹಚ್ಚಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಯಾರ್ಥಿ ಹರೀಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ ದೊರಕಿ ಎಪ್ಪತ್ತು ವರ್ಷಗಳಾದರೂ ಇಂತಹ ಕೊಲೆ ಕೃತ್ಯಗಳಂತಜ ಅಮಾನವೀಯತೆಯು ನಿಂತಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಸಮಾಜ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಆಗಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಎಂ.ಲೋಕೇಶ್ ಅವರು ಕ್ರಾಂತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಅನಿಲ್, ಸಂತೋಷ್, ಮುಸ್ತಫಾ, ಸ್ನಾತಕೋತ್ತರ ವಿದ್ಯಾರ್ಥಿ ಸಿರಾಜ್ ಗುದುರು, ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News