ನಾಯಕರು, ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ

Update: 2017-09-07 19:41 GMT

ಪೊಲೀಸರು ನೋಟಿಸ್ ನೀಡಬಹುದಿತ್ತು: ಸಚಿವ ರೈ

ಮಂಗಳೂರು, ಸೆ. 8: ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಧಿಸಿ ಪೊಲೀಸರು ಸಂಸ್ಥೆಗೆ ನೋಟಿಸ್ ನೀಡಬಹುದಿತ್ತು. ವರದಿಗಾರನ ವಿರುದ್ಧ ಕ್ರಮಕ್ಕೆ ಸಂಬಂಧಿಸಿ ಪೊಲೀಸರು ಆತುರದ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಐಜಿಪಿ, ಎಸ್ಪಿ ಜೊತೆ ನಾನು ಸಮಾಲೋಚನೆ ನಡೆಸಿದ್ದೇನೆ.

- ಬಿ.ರಮಾನಾಥ ರೈ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು

ಮನೆಯೊಂದಕ್ಕೆ ನುಗ್ಗಿದ ಪೊಲೀಸರು ಕುರ್‌ಆನ್‌ಗೆ ಅಗೌರವ ತೋರಿರುವ ಪ್ರಕರಣ ಇದೀಗ ಭಾರೀ ಚರ್ಚೆಯಲ್ಲಿದೆ. ಹೀಗಿರುವಾಗ ಪೊಲೀಸರು ಸತ್ಯಾಸತ್ಯತೆಯ ಬಗ್ಗೆ ಪರಾಮರ್ಶಿಸಬೇಕಿತ್ತೇ ವಿನಃ ಸುದ್ದಿ ಮಾಡಿದ ಪತ್ರಕರ್ತನ ಧ್ವನಿಯನ್ನು ಅಮುಕುವ ಕ್ರಮ ಖಂಡನೀಯ. ಇದನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪೊಲೀಸರು ತಮ್ಮ ತಪ್ಪನ್ನು ಮರೆಮಾಚಲು ಅಥವಾ ಪತ್ರಕರ್ತರ ಬಾಯಿಮುಚ್ಚಿಸಲು ಈ ಕ್ರಮ ಕೈಗೊಂಡಂತಿದೆ. ಅಲ್ಲದೆ, ಪತ್ರಕರ್ತನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಕ್ರಮ ಅತ್ಯಗತ್ಯ. ಹಾಗಾಗಿ ತಕ್ಷಣ ತಾನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.

-ಐವನ್ ಡಿಸೋಜ, ಮುಖ್ಯ ಸಚೇತಕರು, ವಿಧಾನ ಪರಿಷತ್, ಕರ್ನಾಟಕ ಸರಕಾರ

ಪತ್ರಿಕಾ ಧರ್ಮದ ಮೇಲೆ ಪೊಲೀಸರ ದಾಳಿ: ಶಾಸಕ ಮೊಯ್ದಿನ್ ಬಾವಾ
ಪೊಲೀಸರ ಕ್ರಮವು ಅತಿರೇಕದಿಂದ ಕೂಡಿದೆ. ಪತ್ರಕರ್ತರು ಘಟನೆಗಳನ್ನು ಸೃಷ್ಟಿಸುವವರಲ್ಲ. ಇದ್ದುದನ್ನು ಇದ್ದ ಹಾಗೆ ವರದಿ ಮಾಡುವುದು ಪತ್ರಿಕಾ ಧರ್ಮ. ಸಮಾಜದ ಮೇಲೆ ಬೆಳಕುಚೆಲ್ಲುವ ವರದಿಗಾರನ ಮೇಲಿನ ಕ್ರಮವು ಅಶಕ್ತರ ಮೇಲಿನ ದಾಳಿಯಾಗಿದೆ. ‘ವಾರ್ತಾಭಾರತಿ’ಯ ಬಂಟ್ವಾಳ ವರದಿಗಾರ ತನ್ನ ವೃತ್ತಿ ಧರ್ಮ ಪಾಲಿಸಿದ್ದಾರೆ. ವರದಿಗಾರನ ಮೇಲೆ ಪೊಲೀಸರ ಈ ಕ್ರಮ ಖಂಡನೀಯ ಮತ್ತು ಅತಿರೇಕದಿಂದ ಕೂಡಿದೆ. ನ್ಯಾಯ ಕೇಳುವವರ ಧ್ವನಿಯನ್ನು ಅಮುಕಿದಂತಹ ಪ್ರಕರಣಕ್ಕೆ ಇದು ಸಮವಾಗಿದೆ. ಈ ಬಗ್ಗೆ ನಾನು ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಹಾಗೂ ಪಶ್ಚಿಮ ವಲಯ ಐಜಿಪಿ ಜೊತೆ ಮಾತನಾಡುತ್ತೇನೆ.
- ಬಿ.ಎ.ಮೊಯ್ದಿನ್ ಬಾವಾ, ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ

ಪೊಲೀಸರ ಕ್ರಮ ಸರಿಯಲ್ಲ: ಶಾಸಕ ಲೋಬೋ
ಪತ್ರಕರ್ತರು ಸಮಾಜದ ಒಂದು ಭಾಗವಾಗಿದ್ದಾರೆ. ಸಮಾಜದ ಪ್ರತಿಬಿಂಬದಂತಿರುವ ಪತ್ರಕರ್ತರ ಮೇಲೆ ಪೊಲೀಸರ ಈ ಕ್ರಮ ಸರಿಯಲ್ಲ. ಈ ಬಗ್ಗೆ ನಾನು ಪಶ್ಚಿಮ ವಲಯ ಐಜಿಪಿ ಜೊತೆ ಚರ್ಚೆ ಮಾಡುತ್ತೇನೆ. 

- ಜೆ.ಆರ್.ಲೋಬೊ, ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ

ಪೊಲೀಸರು ವಿನಾ ಕಾರಣ ಅಮಾಯಕರನ್ನು ವಶಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸಮಾಜದ ಸ್ವಾಸ್ಥ ಕಾಪಾಡುವ ಪತ್ರಕರ್ತನೊಬ್ಬನ ಮೇಲೆ ಪೊಲೀಸರ ಈ ಕ್ರಮ ಅತಿರೇಕದಿಂದ ಕೂಡಿರುವಂತದ್ದು. ಪೊಲೀಸರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರವಿದೆಯೇ ವಿನ: ಭಯ ಹುಟ್ಟಿಸಿ ತನಿಖೆ ನಡೆಸುವ ವಿಧಾನ ಸರಿಯಲ್ಲ. ಈ ಬಗ್ಗೆ ನಾನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗಮನ ಸೆಳೆದು ಧ್ವನಿ ಎತ್ತುವಂತೆ ಮಾಡುವೆ.
-ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ

ಪೊಲೀಸರ ವಿರುದ್ಧ ಹೋರಾಟ ಅನಿವಾರ್ಯ
ಪೊಲೀಸರ ಈ ಕಾರ್ಯಾಚರಣೆಯು ಮುಸ್ಲಿಮರು ಪತ್ರಿಕಾರಂಗದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ಕೂಡಿರುವಂತಿದೆ. ಇಂದು ಮಂಗಳೂರಿನಲ್ಲಿ ನಡೆದ ಬಿಜೆಪಿಯ ಪ್ರತಿಭಟನಾ ಸಭೆಯ ರ್ಯಾಲಿಯಲ್ಲೂ ಪೊಲೀಸರ ಸಮ್ಮುಖವೇ ಮುಸ್ಲಿಮ್ ಪತ್ರಕರ್ತರೊಬ್ಬರ ಮೇಲೆ ಹಲ್ಲೆಯಾಗಿದೆ. ಆದರೆ ಪೊಲೀಸರು ಏನೂ ಕ್ರಮ ಜರಗಿಸಿಲ್ಲ. ಅದರ ಬೆನ್ನಿಗೆ ‘ವಾರ್ತಾಭಾರತಿ’ಯ ಬಂಟ್ವಾಳ ವರದಿಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಖಂಡನೀಯ.

ಕುರ್‌ಆನ್‌ಗೆ ಪೊಲೀಸರು ಅಗೌರವ ಮಾಡಿದ್ದಾರೆ ಎಂಬ ವಿಷಯವನ್ನು ಸುದ್ದಿ ಮಾಡಿದ್ದು ತಪ್ಪೇ? ಕಾಂಗ್ರೆಸ್ ಪಕ್ಷದ ಮುಖಂಡರು ಇದನ್ನು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ವರದಿಗಾರನನ್ನು ಬಂಧಿಸುವಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡ ಇದೆಯೇ? ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ. ಪೊಲೀಸರ ಈ ಕ್ರಮದ ವಿರುದ್ಧ ಹೋರಾಟ ಅನಿವಾರ್ಯ.

-ಹನೀಫ್ ಖಾನ್ ಕೊಡಾಜೆ, ಅಧ್ಯಕ್ಷರು, ಎಸ್‌ಡಿಪಿಐ ದ.ಕ.ಜಿಲ್ಲೆ

ಪತ್ರಿಕಾ ಸ್ವಾತಂತ್ರದ ಮೇಲೆ ಹಲ್ಲೆ: ಜಗನ್ನಾಥ ಶೆಟ್ಟಿ ಬಾಳ

ಪತ್ರಿಕೋದ್ಯಮವು ಸಮಾಜದ ತಳಮಟ್ಟದ ವ್ಯಕ್ತಿಯಿಂದ ಹಿಡಿದು ಮೇಲ್ಮಟ್ಟದ ವ್ಯಕ್ತಿಯನ್ನು ಸಮಾನವಾಗಿ ಕಾಣುತ್ತದೆ. ಅದಕ್ಕಾಗಿ ಸಂವಿಧಾನದ 4ನೆ ಅಂಗ ಎಂಬ ಸ್ಥಾನಮಾನ ಮಾಧ್ಯಮ ರಂಗಕ್ಕೆ ಸಿಕ್ಕಿದೆ. ವರದಿಗಾರರು ತನ್ನ ಅಭಿವ್ಯಕ್ತಿ ಸ್ವಾತಂತ್ರವನ್ನು ಪ್ರತಿಪಾದಿಸಿಕೊಂಡು ವಸ್ತುನಿಷ್ಠ ವರದಿ ಮಾಡುತ್ತಾರೆ. ಅದು ಸಮಾಜದ ಆಗು-ಹೋಗುಗಳನ್ನು ಆಧರಿಸುತ್ತದೆ. ಹಾಗೆಂದು ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಅಥವಾ ಆರೋಪಿಗಳನ್ನಾಗಿಸುವುದು ಖಂಡನೀಯ. ಇದು ಪೊಲೀಸ್ ಇಲಾಖೆಯು ಪತ್ರಿಕಾ ಸ್ವಾತಂತ್ರದ ಮೇಲೆ ನಡೆಸಿದ ಹಲ್ಲೆಯಾಗಿದೆ.

-ಜಗನ್ನಾಥ ಶೆಟ್ಟಿ ಬಾಳ, ಅಧ್ಯಕ್ಷರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಪೊಲೀಸರಿಂದ ಅಧಿಕಾರದ ದುರುಪಯೋಗ: ಡಾ.ರೊನಾಲ್ಡ್
ಪತ್ರಕರ್ತರು ಸುಳ್ಳು ಸುದ್ದಿ ವರದಿ ಮಾಡಿದ್ದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವಿದೆ. ಆದರೆ, ಅಧಿಕಾರವನ್ನು ದುರುಪಯೋಗಪಡಿಸುವ ಅಧಿಕಾರ ಪೊಲೀಸ್ ಇಲಾಖೆಗೂ ಇಲ್ಲ. ಕುರ್‌ಆನ್ ಗ್ರಂಥಕ್ಕೆ ಅಪಮಾನ ಮಾಡಿದ್ದಾರೆ ಎಂದು ಮನೆಯವರ ಆರೋಪವನ್ನು ಸುದ್ದಿ ಮಾಡಿದ್ದನ್ನೇ ನೆಪವಾಗಿಸಿಕೊಂಡು ಬಂಟ್ವಾಳ ಪೊಲೀಸರು ವರದಿಗಾರನನ್ನು ವಶಕ್ಕೆ ತೆಗೆದುಕೊಂಡಿರುವ ಕ್ರಮ ಖಂಡನೀಯ.
-ಡಾ. ರೊನಾಲ್ಡ್ ಫೆರ್ನಾಂಡಿಸ್, ಅಧ್ಯಕ್ಷರು, ಮಂಗಳೂರು ಪ್ರೆಸ್‌ಕ್ಲಬ್

ಪತ್ರಿಕಾ ಸ್ವಾತಂತ್ರದ ಹರಣ: ಪಿ.ಬಿ. ಡೇಸಾ

ಇದು ಪತ್ರಿಕಾ ಸ್ವಾತಂತ್ರದ ಹರಣವಲ್ಲದೆ ಮತ್ತಿನ್ನೇನು? ನಿನ್ನೆ ಮೊನ್ನೆ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹತ್ಯೆಗೈಯ್ಯಲಾಯಿತು. ಈಗ ವಸ್ತುನಿಷ್ಠ ವರದಿ ಮಾಡಿದ ಪತ್ರಕರ್ತನನ್ನು ವಿಚಾರಣೆಯ ನೆಪದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದು ಖಂಡನೀಯ. ಇದರ ವಿರುದ್ಧ ಪ್ರತಿಭಟಿಸದೇ ಹೋದರೆ, ಪೊಲೀಸರ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಕಷ್ಟವಾದೀತು. ಹಾಗಾಗಿ ಎಲ್ಲರೂ ಹೋರಾಟ ಮಾಡಬೇಕಿದೆ.

-ಪಿ.ಬಿ.ಡೇಸಾ, ರಾಷ್ಟ್ರೀಯ ಉಪಾಧ್ಯಕ್ಷರು, ಪಿಯುಸಿಎಲ್

ಸಹಿಸಲಸಾಧ್ಯ ಕ್ರಮ: ಸುರೇಶ್ ಭಟ್
ಪೊಲೀಸರ ಈ ಕ್ರಮ ಸಹಿಸಲು ಅಸಾಧ್ಯ. ಇದು ಪತ್ರಿಕಾ ಸ್ವಾತಂತ್ರ ಮಾತ್ರವಲ್ಲ, ಅಭಿವ್ಯಕ್ತಿ ಸ್ವಾತಂತ್ರವನ್ನೂ ಹತ್ತಿಕ್ಕುವ ಕ್ರಮವಾಗಿದೆ. ಮಂಗಳೂರು ಶಾಸಕ ಜೆ.ಆರ್.ಲೋಬೊ ಈಗಾಗಲೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಐಜಿಪಿಗೆ ಪತ್ರ ಬರೆದು ನಿಷ್ಪಕ್ಷಪಾತ ತನಿಖೆಗೆ ಸೂಚಿಸಿದ್ದಾರೆ. ಹಾಗಿದ್ದೂ ಬಂಟ್ವಾಳ ಪೊಲೀಸರು ವಿಚಾರಣೆಯ ನೆಪದಲ್ಲಿ ವರದಿಗಾರನನ್ನು ಬಂಧಿಸಿರುವ ಕ್ರಮ ಖಂಡನೀಯ.
- ಸುರೇಶ್ ಭಟ್ ಬಾಕ್ರಬೈಲ್, ಅಧ್ಯಕ್ಷರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ದ.ಕ.ಜಿಲ್ಲೆ

ಪೊಲೀಸರಿಂದ ಸೇಡಿನ ಕ್ರಮ: ದಿನೇಶ್ ಉಳೆಪಾಡಿ
ಪತ್ರಿಕೆಯಲ್ಲಿ ವರದಿ ಬಂದಿದೆ ಅಂದ ತಕ್ಷಣ ಪೊಲೀಸರಿಗೆ ಪ್ರಕರಣ ದಾಖಲಿಸುವ ಹಕ್ಕಿಲ್ಲ. ಇನ್ನು ನೋಟಿಸ್ ಜಾರಿ ಮಾಡದೆ ಬಂಧಿಸಿರುವುದು ಕೂಡ ಸರಿಯಲ್ಲ. ಪತ್ರಕರ್ತರಿಗೆ ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ಅವರೇನು ತಲೆಮರೆಸಿಕೊಂಡು ತಿರುಗಾಡುವವರಲ್ಲ. ಪೊಲೀಸರು ತಮ್ಮಿಂದಾದ ತಪ್ಪನ್ನು ಮರೆಮಾಚಲು, ಮುಜುಗರ ತಪ್ಪಿಸಲು ಸೇಡಿನ ಕ್ರಮ ಕೈಗೊಂಡಿದ್ದಾರೆ. ಇದರ ವಿರುದ್ಧ ಪ್ರಬಲ ಹೋರಾಟ ಮಾಡಬೇಕಿದೆ.
- ದಿನೇಶ್ ಹೆಗ್ಡೆ ಉಳೆಪಾಡಿ, ನ್ಯಾಯವಾದಿ, ಸಾಮಾಜಿಕ ಹೋರಾಟಗಾರರು ಮಂಗಳೂರು

ಪತ್ರಿಕಾ ಸ್ವಾತಂತ್ರದ ಮೇಲೆ ಹಲ್ಲೆ: ಮುನೀರ್ ಕಾಟಿಪಳ್ಳ

ಬಂಟ್ವಾಳ ಪೊಲೀಸರ ಕ್ರಮ ಖಂಡನೀಯ. ವರದಿಗಾರನಿಂದ ತಪ್ಪಾಗಿದ್ದರೆ ಬೇರೆ ಬೇರೆ ವಿಧಾನದ ಮೂಲಕ ವಿವರಣೆ ಪಡೆಯಬಹುದಿತ್ತು. ಆದರೆ, ಏಕಾಏಕಿ ಬಂಧನ ಕ್ರಮ  ತೆಗೆದುಕೊಂಡಿರುವ ಪೊಲೀಸರ ಕ್ರಮ ಪತ್ರಿಕಾ ಸ್ವಾತಂತ್ರದ ಮೇಲೆ ನಡೆದ ಹಲ್ಲೆಯಾಗಿದೆ.

-ಮುನೀರ್ ಕಾಟಿಪಳ್ಳ, ಕರ್ನಾಟಕ ರಾಜ್ಯಾಧ್ಯಕ್ಷರು, ಡಿವೈಎಫ್‌ಐ


ಪೊಲೀಸರ ಇನ್ನೊಂದು ಮುಖ ಅನಾವರಣ: ಕೆ. ಅಶ್ರಫ್
 ಕುರ್‌ಆನ್‌ಗೆ ಅವಮಾನ ಎಸಗಿದ ಪೊಲೀಸರ ಇನ್ನೊಂದು ಮುಖವನ್ನು ಅನಾವರಣ ಮಾಡಿದ ಮತ್ತು ವಸ್ತುನಿಷ್ಠ ವರದಿ ಮಾಡಿದ ಪತ್ರಕರ್ತರ ಮೇಲೆ ಬಂಟ್ವಾಳ ಪೊಲೀಸರು ದ್ವೇಷದಿಂದ ಕಾರ್ಯಾಚರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಪೊಲೀಸರ ಈ ಕ್ರಮ ಸಹಿಸಲು ಅಸಾಧ್ಯ. ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕುವ ಪೊಲೀಸರ ಈ ಅನೀತಿಯ ವಿರುದ್ಧ ಹೋರಾಟ ಅನಿವಾರ್ಯ.

- ಕೆ. ಅಶ್ರಫ್, ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ

ಇದು ಜಿಲ್ಲೆಯ ಇಬ್ಬರು ಸಚಿವರ ವೈಫಲ್ಯವಾಗಿದೆ. ಈ ಸರಕಾರ 4 ವರ್ಷದ ಹಿಂದೆಯೇ ಈ ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಜರಗಿಸಿದ್ದರೆ ಇವರಿಂದು ಹೀಗೆ ನಡೆದುಕೊಳ್ಳುತ್ತಿರಲಿಲ್ಲ. ಸಚಿವ ರಮಾನಾಥ ರೈ, ಖಾದರ್‌ರಿಂದ ಏನೂ ಮಾಡಲು ಆಗುತ್ತಿಲ್ಲ ಎಂಬ ಭಾವನೆ ಬಿಜೆಪಿ-ಸಂಘಪರಿವಾರ ಕಾರ್ಯಕರ್ತರಿಗೆ ಆಗಿದೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಸಂಘಪರಿವಾರ-ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ರಾಜ್ಯಾತಿಥ್ಯ ನೀಡುತ್ತಾರೆ. ಅದೇ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಾರೆ. ‘ವಾರ್ತಾಭಾರತಿ’ಯ ಮೇಲೆ ಪೊಲೀಸರ ಈ ನಡೆ ಖಂಡನೀಯ. ಬಂಟ್ವಾಳ ಠಾಣೆಯ ಎಸ್ಸೈ ರಕ್ಷಿತ್ ವಿರುದ್ಧ ಇಲಾಖೆ ತಕ್ಷಣ ಕ್ರಮ ಜರಗಿಸಬೇಕು.

- ಮುಹಮ್ಮದ್ ಕುಂಞಿ ವಿಟ್ಲ, ಅಧ್ಯಕ್ಷರು, ಜೆಡಿಎಸ್ ದ.ಕ.ಜಿಲ್ಲೆ

ಇದು ಪತ್ರಿಕಾ ಸ್ವಾತಂತ್ರದ ದಮನ ಮಾಡುವ ತಂತ್ರವಾಗಿದೆ. ವಸ್ತುನಿಷ್ಠ ವರದಿಯಿಂದ ಕಂಗೆಟ್ಟಿರುವ ಪೊಲೀಸ್ ಇಲಾಖೆಯು ವರದಿಗಾರನ ಮೇಲೆ ದ್ವೇಷ ಸಾಧಿಸಲು ಹೊರಟಿರುವ ಕ್ರಮ ಖಂಡನೀಯ. ಇದರ ವಿರುದ್ಧ ಜಾತ್ಯತೀತ ಶಕ್ತಿಗಳು ಹೋರಾಟ ಮಾಡಬೇಕಾಗಿದೆ.
- ಅಲಿ ಹಸನ್, ಅಧ್ಯಕ್ಷರು, ಮಂಗಳೂರು ಸೆಂಟ್ರಲ್ ಕಮಿಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News