ಸಂಸದ ನಳಿನ್ ವರ್ತನೆಗೆ ದ.ಕ ಜಿಲ್ಲಾ ಜೆಡಿಎಸ್ ಖಂಡನೆ

Update: 2017-09-08 14:02 GMT

ಮಂಗಳೂರು, ಸೆ.8: ಬಿಜೆಪಿಯ ಮಂಗಳೂರು ಚಲೋ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನಗರದ ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ಮಾರುತಿ ನಾಯಕ್ ಅವರಿಗೆ ಸಾರ್ವಜನಿಕವಾಗಿ ದೌರ್ಜನ್ಯವನ್ನು ಎಸಗಿದ್ದಾರೆ ಹಾಗೂ ‘ನಿನ್ನ ಹೆಸರಿನಲ್ಲಿ ದ.ಕ. ಜಿಲ್ಲಾ ಬಂದ್‌ಗೆ ಕರೆ ನೀಡುತ್ತೇನೆ’ ಎಂದು ಬೆದರಿಕೆ ನೀಡಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಹಾಗೂ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.

ಜಿಲ್ಲಾಡಳಿತ ಯಾವುದೇ ಅನುಮತಿ ನೀಡದೇ ಇದ್ದರೂ ಆದೇಶವನ್ನು ಧಿಕ್ಕರಿಸಿ ಇಂತಹ ಸಮಾವೇಶ ಮಾಡುವುದರ ಮೂಲಕ ಸಂಸದರು ಗೂಂಡಾವರ್ತನೆ ಮಾಡುತ್ತಿದ್ದಾರೆ. ಇವರ ದಬ್ಬಾಳಿಕೆ ಇದೇ ಮೊದಲಲ್ಲ. ಕೊಣಾಜೆ ಠಾಣೆಯ ಮುಂದೆ ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರೂ ಕ್ರಮ ಜರಗಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರ ವೈಫಲ್ಯವೂ ಎದ್ದು ಕಾಣುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಯು.ಟಿ ಖಾದರ್ ಇದಕ್ಕೆ ನೇರ ಹೊಣೆಗಾರರಾಗಿದ್ದು ತಕ್ಷಣ ಇಬ್ಬರೂ ರಾಜೀನಾಮೆ ನೀಡಬೇಕು ಮತ್ತು ಬೇರೆ ಸಚಿವರುಗಳನ್ನು ನೇಮಕ ಮಾಡಬೇಕು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಇದೀಗ ಶಾಂತಿ ನೆಲೆಸಿದೆ. ಇಂತಹ ರ್ಯಾಲಿ-ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಸಂಸದರನ್ನು ಬಂಧಿಸದೇ ಇದ್ದಲ್ಲಿ ಜೆಡಿಎಸ್ ವತಿಯಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News