ಶಾಲಾ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯಾರ್ಥಿಗಳ ಸಾಗಾಟ: ಆರೋಪ

Update: 2017-09-08 14:37 GMT

ಮಂಗಳೂರು, ಸೆ.8: ನಗರದಲ್ಲಿ ಸಂಚರಿಸುವ ಶಾಲಾ ಬಸ್ ಮತ್ತು ಇತರ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ಈ ಆಗ್ರಹ ವ್ಯಕ್ತಪಡಿಸಿದಾಗ, ಈ ಬಗ್ಗೆ ಕ್ರಮ ಕೈಗೊಳ್ಳುವಂತಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಕೇಂದ್ರ ಭಾಗ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿ ಮಾಡಿದರೆ ನಗರದ ಟ್ರಾಫಿಕ್ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರೊಬ್ಬರು ವ್ಯಕ್ತಪಡಿಸಿದರು.

ನಗರದ ಮಂಗಳಾದೇವಿ ರೂಟ್‌ನಲ್ಲಿ ಬೆಳಗ್ಗಿನ ಹೊತ್ತು ಮೀನಿನ ಲಾರಿಗಳು ಸಂಚರಿಸುತ್ತಿದ್ದು, ಈ ಸಂದರ್ಭ ರಸ್ತೆಯಲ್ಲೇ ಮೀನಿನ ನೀರು ಹರಿಸಲಾಗುತ್ತಿದೆ. ಇದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸ್ಥಳೀಯರೊಬ್ಬರು ದೂರು ನೀಡಿದರು.
ಮೀನುಗಾರಿಕೆ ಸೀಸನ್ ಮತ್ತೆ ಆರಂಭವಾಗಿದ್ದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಶೀಘ್ರದಲ್ಲೇ ಈ ಮೀನಿನ ಲಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ನಗರದ ಕೆಲವು ಬಸ್‌ಗಳಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ, ಟಿಕೆಟ್ ಕೂಡಾ ನೀಡುತ್ತಿಲ್ಲ. ಇಂತಹ ಬಸ್‌ಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಪ್ರಯಾನಿಕರೊಬ್ಬರು ದೂರಿದರು.
ಟಿಕೇಟ್ ಮೆಷಿನ್ ಅಳವಡಿಸುವಂತೆ ಈಗಾಗಲೇ ಬಸ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇನ್ನು ಕೂಡಾ ಮೆಷಿನ್ ಅಳವಡಿಸದ ಮತ್ತುಸಮಯ ಪಾಲನೆ ಮಾಡದ ಬಸ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ನಿಮಯ ಮೀರಿದ ಬಸ್‌ಗಳ ನೋಂದಣಿ ಸಂಖ್ಯೆಯನ್ನು ಸಲ್ಲಿಸಿದರೆ ಹೆಚ್ಚು ಅನುೂಲ ಎಂದು ಆಯುಕ್ತರು ನುಡಿದರು.

ಫೋನ್-ಇನ್ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಹನುಮಂತರಾಯ, ಎಸಿಪಿ ತಿಲಕ್‌ಚಂದ್ರ, ಇನ್‌ಸ್ಪೆಕ್ಟರ್ ಸವಿತ್ರತೇಜ, ಎಎಸ್‌ಐ ಯೂಸುಫ್, ಹೆಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News