ಕೆಮ್ಮಣ್ಣು ಶಕುಂತಳಾ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

Update: 2017-09-08 15:55 GMT
ಶಕುಂತಳಾ

ಉಡುಪಿ, ಸೆ.8: ಐದು ವರ್ಷಗಳ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಗುಡ್ಯಾಂ ಎಂಬಲ್ಲಿ ನಡೆದ ಶಕುಂತಳಾ(40) ಕೊಲೆ ಪ್ರಕರಣದ ಇಬ್ಬರು  ಅಪರಾಧಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೆ.8ರಂದು ತೀರ್ಪು ನೀಡಿದೆ.

ಉಪ್ಪೂರು ಕೆ.ಜಿ.ರೋಡಿನ ಹರೀಶ ಪೂಜಾರಿ(42) ಮತ್ತು ಆತನ ಗೆಳೆಯ ಹೇರೂರು ಶಾಲೆ ಬಳಿಯ ಸಂತೋಷ ಪೂಜಾರಿ(41) ಎಂಬವರು ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು ಎಂದು ಗುರುತಿಸಲಾಗಿದೆ. 

ಇವರಿಬ್ಬರೂ ಬೇರೆ ಬೇರೆ ಕಾರಣಗಳಿಗೆ ಸಾಲ ಮಾಡಿ ಆರ್ಥಿಕ ಮುಗ್ಗಟ್ಟಿ ನಲ್ಲಿದ್ದು, ಅದಕ್ಕಾಗಿ ಹರೀಶ್ ಪೂಜಾರಿಯ ಸಂಬಂಧಿಕರಾದ ಶಕುಂತಳಾರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ಸುಲಿಗೆ ಮಾಡುವ ಬಗ್ಗೆ 2012ರ ಜೂ. 24ರಂದು ಇವರಿಬ್ಬರು ಸೇರಿ ಕೆ.ಜಿ.ರೋಡ್‌ನ ಪಂಚಮಿ ಹೋಟೆಲ್ ಎದುರು ಸಂಚು ರೂಪಿಸಿದ್ದರು.

ಅದರಂತೆ ಇವರು ಜೂ.25ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಶಕುಂತಳಾ ಒಬ್ಬರೇ ಇರುವಾಗ ಅವರ ಮನೆಗೆ ಹೋದರು. ಮನೆಯೊಳಗೆ ಶಕುಂತಳಾರನ್ನು ಮಾತನಾಡಿಸಿ, ಮುಂಬೈಯಲ್ಲಿರುವ ಶಕುಂತಳಾರ ಅಕ್ಕ ಜಯಂತಿಯ ಮೊಬೈಲ್ ನಂಬರ್ ಬೇಕೆಂದು ಹರೀಶ್ ಕೇಳಿದನು. ಅದಕ್ಕೆ ಶಕುಂತಳಾ ಫೋನ್ ನಂಬರ್ ಬರೆದಿಟ್ಟ ಪುಸ್ತಕ ನೋಡುತ್ತಿರುವಾಗ ಸಂತೋಷ ಪೂಜಾರಿ ಶಕುಂತಳಾರನ್ನು ಹಿಂದಿನಿಂದ ಹೋಗಿ ಅವರ ಕುತ್ತಿಗೆ ಹಿಡಿದು ಬಾಯಿ ಮತ್ತು ಮೂಗನ್ನು ಮುಚ್ಚಿದನು. ಹರೀಶ ಪೂಜಾರಿ ಆಕೆಯ ಕಾಲು ಗಳನ್ನು ಹಿಡಿದನು. ಬಳಿಕ ಇಬ್ಬರೂ ಸೇರಿ ಆಕೆಯನ್ನು ಎಳೆದುಕೊಂಡು ಬೆಡ್ ರೂಮಿಗೆ ಹೋಗಿ ಕರಿಮಣಿಸರ ಹಾಗೂ ಚಿನ್ನಾರಣಗಳನ್ನು ಕೊಡುವಂತೆ ಕೇಳಿ ನೆಲದಲ್ಲಿ ಬೀಳಿಸಿದರು. ತದನಂತರ ಇವರಿಬ್ಬರು ಸೇರಿ ಆಕೆಯನ್ನು ಚೂಡಿದಾರ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನದ ಕರಿಮಣಿ ಸರ, ರೋಲ್ಡ್ ಗೋಲ್ಡ್ ಹವಳದ ಸರ, ಒಂದು ಜೊತೆ ಬೆಂಡೋಲೆ, ಎರಡು ಉಂಗುರಗಳು ಹಾಗೂ ರೋಲ್ಡ್‌ಗೋಲ್ಡ್ ಬಳೆ, ಎರಡು ಮೊಬೈಲ್‌ಗಳನ್ನು ದೋಚಿ ಪರಾರಿಯಾದರು.

ಶಕುಂತಳಾರ ಪತಿ ಅಶೋಕ್ ಪೂಜಾರಿ ವಿದೇಶದಲ್ಲಿದ್ದು, ಇಬ್ಬರು ಮಕ್ಕಳು ಶಾಲೆಗೆ ತೆರಳಿದ್ದಾಗ ಶಕುಂತಳಾರನ್ನು ಕೊಲೆ ಮಾಡಲಾಗಿತ್ತು. ಕೊಲೆಯಾಗುವ ಎರಡು ತಿಂಗಳ ಹಿಂದೆಯಷ್ಟೆ ಇವರ ಹೊಸ ಮನೆ ಗೃಹ ಪ್ರವೇಶ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ಹರೀಶ್ ಪೂಜಾರಿ, ಶಕುಂತಳಾರ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ನೋಡಿದ್ದನು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈ ಇಬ್ಬರನ್ನು ಜು.1ರಂದು ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕರಾದ ಎಸ್.ವಿ.ಗಿರೀಶ್ ತನಿಖೆ ನಡೆಸಿ ಮತ್ತು ಮಾರುತಿ ಜಿ.ನಾಯಕ್ ಆರೋಪಿತರ ವಿರುದ್ಧ ಭಾ.ದಂ.ಸಂ. ಕಲಂ 302, 449, 392 ಜತೆಗೆ 34 ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು.

ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ ವಿವಾದಗಳನ್ನು ಆಲಿಸಿ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆಯೆಂದು ಅಭಿಪ್ರಾಯ ಪಟ್ಟ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ವೆಂಕಟೇಶ ನಾಯ್ಕ ಅಪರಾಧಿಗಳಿಗೆ ಭಾದಂಸಂ ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ, ಭಾದಂಸಂ ಕಲಂ 449 ಅಪರಾಧಕ್ಕೆ 10 ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡ, ಭಾದಂಸಂ ಕಲಂ 392 ಅಪರಾಧಕ್ಕೆ 5 ವರ್ಷಗಳ ಶಿಕ್ಷೆ ಮತ್ತು 10,000ರೂ. ದಂಡ ಹಾಗೂ ಕಲಂ 357 ಸಿಆರ್‌ಪಿಸಿಯಡಿ ತಲಾ 25,000ರೂ. ಹಣವನ್ನು ಮಕ್ಕಳಿಗೆ ಪರಿಹಾರ ಧನವಾಗಿ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯುಷನ್ ಪರವಾಗಿ ಅಂದಿನ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್. ಜಿತೂರಿ ಪ್ರಕರಣದ ಪ್ರಾಥಮಿಕ ಸಾಕ್ಷಿ ವಿಚಾರಣೆ ಮಾಡಿದ್ದು, ಪ್ರಸ್ತುತ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತಿಬಾಯಿ ಸಾಕ್ಷಿ ವಿಚಾರಣೆ ಮತ್ತು ವಾದವನ್ನು ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News